ಗೋಕಾಕ, ೩: ಮೂಡಲಗಿ ತಾಲೂಕಿನ ರಾಜಾಪುರ ಗ್ರಾಮದ ರಿಯಲ್ ಎಸ್ಟೇಟ್ ಉದ್ಯಮಿಯನ್ನು ಅಪಹರಿಸಿ 5 ಕೋಟಿ ರೂಪಾಯಿ ಬೇಡಿಕೆ ಇಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋಕಾಕ ಮಹಿಳಾ ಬ್ಲಾಕ್ ಅಧ್ಯಕ್ಷೆ ಹಾಗು ಸಚಿವ ಸತೀಶ ಜಾರಕಿಹೊಳಿ ಆಪ್ತೆ ಎಂದು ಹೇಳಿಕೊಂಡು ತಿರುಗುತ್ತಿದ್ದ ಮಂಜುಳಾ ರಾಮನಗಟ್ಟಿಯನ್ನು ಘಟಪ್ರಭಾ ಪೊಲೀಸರು ಬಂಧಿಸಿದ್ದಾರೆ.
ಗೋಕಾಕ ತಾಲೂಕಿನ ಕೊಣ್ಣೂರ ಪಟ್ಟಣದ ಮಂಜುಳಾ ರಾಮನಗಟ್ಟಿ ಬಂಧಿತ ಪ್ರಮುಖ ಆರೋಪಿಯಾಗಿದ್ದು ಫೆ.14ರಂದು ಉದ್ಯಮಿ ಬಸವರಾಜ ಅಂಬಿ ಎಂಬುವರನ್ನು ಅಪಹರಣ ಮಾಡಿದ್ದ ಮಂಜುಳಾ ಹಾಗೂ ಗ್ಯಾಂಗ್ 5 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ಅಪಹರಣದ ನಂತರ ಕಲಬುರ್ಗಿಯಲ್ಲಿ ತಲೆಮರೆಸಿಕೊಂಡಿದ್ದ ಮಂಜುಳಾ ಸೇರಿದಂತೆ 7 ಆರೋಪಿಗಳನ್ನು ಪೊಲೀಸರು ಈಗ ಬಂಧಿಸಿದ್ದಾರೆ. ಮಂಜುಳಾ ಅಲ್ಲದೇ ಜಮಖಂಡಿಯ ಪರಶುರಾಮ ಕಾಂಬಳೆ, ಯಮಕನಮರಡಿಯ ಯಲ್ಲೇಶ ವಾಲೀಕರ ಬಂಧಿತರಲ್ಲಿ ಸೇರಿದ್ದಾರೆ ಎನ್ನಲಾಗಿದೆ.
ಮಂಜುಳಾ ಪುತ್ರ ಈಶ್ವರ ರಾಮಗನಟ್ಟಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದಾಗ ವಿಚಾರ ಬಹಿರಂಗವಾಗಿದೆ. ಮಂಜುಳಾ ಮಗ ಈಶ್ವರ ಮತ್ತು ಸ್ನೇಹಿತರು ಮಂಜುಳಾ ನೀಡಿದ ಪ್ಲ್ಯಾನ್ ಮೇಲೆ ಅಪಹರಣ ಮಾಡಿ ಹಣಕ್ಕೆ ಬೇಡಿಕೆಯಿಟ್ಟಿರುವುದು ಬೆಳಕಿಗೆ ಬಂದಿದೆ. ತನಿಖೆ ಸಂದರ್ಭದಲ್ಲಿ ಸಿಕ್ಕ ತಾಂತ್ರಿಕ ಸಾಕ್ಷಿ ಸೇರಿ ಆರೋಪಿಗಳ ಹೇಳಿಕೆಗಳನ್ನು ಆಧರಿಸಿ ಮಂಜುಳಾ ಬಂಧನ ಮಾಡಲಾಗಿದೆ.
ಕಿಂಗ್ ಪಿನ್ ಮಂಜುಳಾ ತಾನು ಕಾಂಗ್ರೆಸ್ ಕಾರ್ಯಕರ್ತೆಯಾಗಿದ್ದು ತಾನು ಸಚಿವ ಸತೀಶ ಜಾರಕಿಹೊಳಿ ಹಾಗು ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಆಪ್ತೆ ಎಂದು ಹೇಳಿಕೊಂಡು ಓಡಾಡುತ್ತಿದ್ದಳು ಎನ್ನಲಾಗಿದೆ. ಇದೀಗ ಆಕೆಯನ್ನು ಬಂಧಿಸಿ ಹಿಂಡಲಗಾ ಜೈಲಿಗೆ ಕಳುಹಿಸಲಾಗಿದೆ.
ಜಿಲ್ಲಾ ಪೊಲೀಸರ ವಿವರಣೆ :
ಅಪಹರಣ ಪ್ರಕರಣದಲ್ಲಿ ಮಂಜುಳಾ ಪ್ರಮುಖ ಪಾತ್ರ ವಹಿಸಿರುವುದು ಮೇಲ್ನೋಟಕ್ಕೆ ತಿಳಿದು ಬಂದಿದೆ. ರಾಜಕೀಯ ಪಕ್ಷ ಮತ್ತು ಒಂದು ಸಂಘಟನೆಯೊಂದಿಗೆ ಮಹಿಳೆ ಗುರುತಿಸಿಕೊಂಡಿದ್ದಾರೆ. ತಹಶೀಲ್ದಾರ ಕಚೇರಿಯಲ್ಲಿ ‘ಡಿ’ ದರ್ಜೆ ನೌಕರಿ ಮತ್ತು ಹೊರಗುತ್ತಿಗೆ ನೌಕರಿ ಕೊಡಿಸುವುದಾಗಿ ಇಬ್ಬರಿಂದ ತಲಾ 2.5 ಲಕ್ಷ ರೂಪಾಯಿ ಪಡೆದ ಕುರಿತಾಗಿಯೂ ಕುಲಗೋಡ ಠಾಣೆಯಲ್ಲಿ ಅವರ ವಿರುದ್ಧ ದೂರು ದಾಖಲಾಗಿದೆ. ಮಂಜುಳಾ ಜತೆಗೆ, ಯಲ್ಲೇಶ ವಾಲಿಕಾರ, ಪರಶುರಾಮ ಕಾಂಬಳೆ ಬಂಧಿಸಿ, ವಿಚಾರಣೆ ಮಾಡುತ್ತಿದ್ದೇವೆ ಎಂದು ಜಿಲ್ಲಾ ಪೋಲಿಸ ವರಿಷ್ಠ ಡಾ.ಭೀಮಾಶಂಕರ ಗುಳೇದ ಸೋಮವಾರ ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಯಾವ ರಾಜಕೀಯ ಪಕ್ಷದೊಂದಿಗೆ ಮಹಿಳೆ ಗುರುತಿಸಿಕೊಂಡಿದ್ದಾರೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ರಾಜಕೀಯ ಪಕ್ಷದೊಂದಿಗೆ ಅವರು ಗುರುತಿಸಿಕೊಂಡಿದ್ದಾರೆ. ಆದರೆ, ಅಪಹರಣಕ್ಕೂ ಮತ್ತು ಆ ಪಕ್ಷಕ್ಕೂ ಯಾವ ಸಂಬಂಧವಿಲ್ಲ. ಈ ಪ್ರಕಣದಲ್ಲಿ ಮಂಜುಳಾ ಬಂಧಿಸದಂತೆ ಯಾವ ರಾಜಕಾರಣಿಯೂ ಪ್ರಭಾವ ಬೀರಿಲ್ಲ. ಒಂದು ವೇಳೆ ಯಾರಾದರೂ ಪ್ರಭಾವ ಬೀರಿದ್ದರೆ, ಏಳು ಮಂದಿಯನ್ನು ಬಂಧಿಸಲು ಆಗುತ್ತಿರಲಿಲ್ಲ ಎಂದರು.
ಬಸವರಾಜ ಅಂಬಿ ಅಪಹರಣಕ್ಕಾಗಿ ಮಂಜುಳಾ ಅವರೇ ಮುಖ್ಯವಾಗಿ ಸಂಚು ರೂಪಿಸಿದ್ದರು. ಇದಕ್ಕೆ ಸಹಕರಿಸಿದ ಆರೋಪಿಗಳಿಗೂ ಹಣ ಕೊಡುವುದಾಗಿ ತಿಳಿಸಿದ್ದರು. ಮಂಜುಳಾ ಪುತ್ರ ಈಶ್ವರನನ್ನು ಈಗಾಗಲೇ ಬಂಧಿಸಿದ್ದೆವು. ಹಣ ಮಾಡಬೇಕು, ಐಷಾರಾಮಿಯಾಗಿ ಬದುಕು ಸಾಗಿಸಬೇಕೆಂಬ ಆಸೆಯಿಂದ ಈ ಅಪಹರಣ ಮಾಡಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಬಸವರಾಜ ಬಳಿ ಆರೋಪಿಗಳು ಕಸಿದುಕೊಂಡಿದ್ದ 3 ಲಕ್ಷ ಮೌಲ್ಯದ ಚಿನ್ನಾಭರಣ, ಕೃತ್ಯಕ್ಕೆ ಬಳಸಿದ 6 ಮೊಬೈಲ್, ನಾಲ್ಕು ಕಾರು ಮತ್ತಿತರ ವಸ್ತುಗಳನ್ನು ವಶಕ್ಕೆ ಪಡೆದಿದ್ದೇವೆ ಎಂದು ಪೋಲಿಸ ವರಿಷ್ಠರು ವಿವರಿಸಿದರು.
‘ಮಂಜುಳಾ ಅವರಿಂದ ಯಾರಾದರೂ ಮೋಸಕ್ಕೆ ಒಳಗಾಗಿದ್ದರೆ, ಪೊಲೀಸರಿಗೆ ಮಾಹಿತಿ ಕೊಡಬೇಕು’ ಎಂದೂ ಅವರು ಕೋರಿದರು.
ಸದ್ಯ ಸಚಿವ ಸತೀಶ ಜಾರಕಿಹೊಳಿ, ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರೊಂದಿಗೆ ಮಂಜುಳಾ ತೆಗೆಸಿಕೊಂಡ ಫೋಟೊಗಳೂ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಘಟನೆ
ಫೆ.15ರಂದು ಬಸವರಾಜ ನೀಲಪ್ಪ ಅಂಬಿ (48) ಅವರನ್ನು ಹೊಲದಿಂದ ಹಿಂತಿರುಗುತ್ತಿದ್ದಾಗ ಅಪಹರಣ ಮಾಡಲಾಗಿತ್ತು. ಅಪಹರಣಕಾರರರು ಫೆ.15ರಂದು ಬಸವರಾಜ ಪತ್ನಿ ಶೋಭಾ ಅವರಿಗೆ ಕರೆ ಮಾಡಿ 5 ಕೋಟಿ ರೂ. ಬೇಡಿಕೆ ಇಟ್ಟಿದ್ದರು. ಬಸವರಾಜ ಅವರ ಪುತ್ರ ಹುಲಿರಾಜ ಹಾಗೂ ಕೆಲವರು ನಿಪ್ಪಾಣಿಯಲ್ಲಿ ಬೆಂಗಳೂರು–ಪುಣೆ ರಾಷ್ಟ್ರೀಯ ಹೆದ್ದಾರಿಯ ಬೈಪಾಸ್ ರಸ್ತೆಯಲ್ಲಿನ ಹೋಟೆಲ್ ಬಳಿ ಸುಮಾರು 10 ಲಕ್ಷ ಪಾವತಿಸಲು ಹೋಗಿದ್ದರು. ಆದರೆ, ಅವರು ಒಯ್ದಿದ್ದ ಬ್ಯಾಗ್ ಅಪಹರಣಕಾರರು ಭೇಟಿಯಾಗಿರಲಿಲ್ಲ ಮತ್ತು ಬಸವರಾಜ ಬಿಡುಗಡೆ ಮಾಡಿರಲಿಲ್ಲ.
ಅಪಹರಣಕಾರರು ಮತ್ತೆ ಶೋಭಾ ಅವರಿಗೆ ಕರೆ ಮಾಡಿ, ‘ಹಣ ನೀಡಲು ಹೆಚ್ಚಿನ ಜನರೇಕೆ ಬಂದಿದ್ದೀರಿ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಹಣ ಕೊಡದಿದ್ದರೆ ಬಸವರಾಜ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಹುಲಿರಾಜ ಹಾಗೂ ಇತರ ಏಳು ಜನ ಸೇರಿಕೊಂಡು ಎಂಟು ಚೀಲಗಳಲ್ಲಿ ಹಣ ತುಂಬಿಕೊಂಡು ಆರೋಪಿಗಳು ಗೊತ್ತುಪಡಿಸಿದ ನಿಪ್ಪಾಣಿಯ ಮತ್ತೊಂದು ಸ್ಥಳಕ್ಕೆ ಹೋಗಿದ್ದರು. ಎರಡನೇ ಬಾರಿಯೂ ಅವರು ಹಣ ಪಡೆದಿರಲಿಲ್ಲ. ಹಾಗಾಗಿ ಶೋಭಾ ಅವರು ಘಟಪ್ರಭಾ ಠಾಣೆಯಲ್ಲಿ ಮಂಗಳವಾರ ದೂರು ದಾಖಲಿಸಿದ್ದರು. ಪೊಲೀಸರು 24 ಗಂಟೆಗಳಲ್ಲಿ ಬಸವರಾಜ ಅಂಬಿ ಅವರನ್ನು ಬಿಡುಗಡೆಗೊಳಿಸಿದ್ದರು.
ಮಂಜುಳಾ ಕಾಂಗ್ರೆಸ್ ಕಾರ್ಯಕರ್ತೆ ಅಲ್ಲ : ಕಾಂಗ್ರೆಸ್
ಮಂಜುಳಾ ಕಾಂಗ್ರೆಸ್ ಕಾರ್ಯಕರ್ತೆಯಲ್ಲ, ಅವರು ಪಕ್ಷದಲ್ಲಿ ಯಾವುದೇ ಹುದ್ದೆ ಅಥವಾ ಪ್ರಾಥಮಿಕ ಸದಸ್ಯತ್ವವನ್ನೂ ಹೊಂದಿಲ್ಲ ಎಂದು ಪಕ್ಷದ ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷರಾಗಿರುವ ಕಲ್ಪನಾ ಜೋಶಿ ಅವರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಒಂದು ಅಪಹರಣ ಪ್ರಕರಣದಲ್ಲಿ ಓರ್ವ ಮಹಿಳೆ ಸಿಲುಕಿದ್ದು, ಅವಳು ಮಹಿಳಾ ಕಾಂಗ್ರೆಸ್ ಪದಾಧಿಕಾರಿ ಹಾಗೂ ಕಾರ್ಯಕರ್ತೆ ಹಾಗೂ ಸಚಿವರ ಜೊತೆ ತೆಗೆದ ಫೋಟೋ ಹಾಕಿ ಅವರ ಆಪ್ತರು ಎಂದು ಮಾಧ್ಯಮಗಳಲ್ಲಿ ಸುದ್ದಿ ಬರುತ್ತಿದ್ದು ಅವಳು ನಮ್ಮ ಮಹಿಳಾ ಕಾಂಗ್ರೆಸ್ ನ ಯಾವುದೇ ಹುದ್ದೆ ಹೊಂದಿಲ್ಲ ಹಾಗೂ ನಮ್ಮ ಪಕ್ಷದ ಕಾರ್ಯಕರ್ತೆ ಸಹ ಅಲ್ಲ. ಈಗಾಗಲೇ ನಮ್ಮ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರು ಸ್ಪಷ್ಟನೆ ಕೊಟ್ಟಿದ್ದಾರೆ.
ಸಚಿವರೊಂದಿಗೆ ಸಾರ್ವಜನಿಕ ಜೀವನದಲ್ಲಿ ಸಾವಿರಾರು ಜನ ಕಾರ್ಯಕ್ರಮಗಳಲ್ಲಿ ಭೇಟಿಯಾಗುತ್ತಾರೆ, ಹಲವಾರು ಸಂಘಟನೆಯವರು ಫೋಟೋ ತೆಗೆಸಿಕೊಂಡಿರುತ್ತಾರೆ ಅದನ್ನೇ ಅವರ ಆಪ್ತರು ಅನ್ನುವದಕ್ಕಾಗುವದಿಲ್ಲ. ಕಾಂಗ್ರೆಸ್ ಪಕ್ಷದೊಂದಿಗೆ ಹಾಗೂ ಸಚಿವರೊಂದಿಗೆ ಈ ಘಟನೆಯಲ್ಲಿ ಪಾಲ್ಗೊಂಡ ಯಾರ ಸಂಬಂಧವೂ ಇಲ್ಲ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ ಸ್ಪಷ್ಟಪಡಿಸಿದ್ದಾರೆ.