This is the title of the web page

ರಾಜ್ಯದಲ್ಲಿ ಮಾಸ್ಕ ಮತ್ತು ಸಾಮಾಜಿಕ ಅಂತರ ಪಾಲನೆ ಕಡ್ಡಾಯ

ಬೆಂಗಳೂರು, ೨೫- ಕೋವಿಡ್ ಪ್ರಕರಣಗಳು ಮತ್ತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇನ್ನು ಮುಂದೆ ಜನರು ಕಡ್ಡಾಯವಾಗಿ ಮಾಸ್ಕ​ ಧರಿಸಬೇಕು ಮತ್ತು ಸಾಮಾಜಿಕ ಅಂತರವನ್ನು ಎಲ್ಲರೂ ಪಾಲಿಸಬೇಕು ಎಂದು ಸಚಿವ ಸುಧಾಕರ ಹೇಳಿದ್ದಾರೆ.

ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ​ ಬೊಮ್ಮಾಯಿ ನೇತೃತ್ವದಲ್ಲಿ ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ನಡೆಯಿತು. ಸಭೆಯಲ್ಲಿ ರಾಜ್ಯದಲ್ಲಿನ ಕೋವಿಡ್ ಸ್ಥಿತಿಯ ಬಗ್ಗೆ ಅಧಿಕಾರಿಗಳಿಂದ ಮುಖ್ಯಮಂತ್ರಿ ಬೊಮ್ಮಾಯಿ ಮಾಹಿತಿ ಪಡೆದರು.

ದೆಹಲಿ, ಮಹಾರಾಷ್ಟ್ರ, ಕೇರಳ ರಾಜ್ಯಗಳಲ್ಲಿ ಸೋಂಕು ಹೆಚ್ಚುತ್ತಿರುವ ಹಿನ್ನೆಲೆ ರಾಜ್ಯದಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ಸಭೆ ಬಳಿಕ ಆರೋಗ್ಯ ಸಚಿವ ಡಾ ಸುಧಾಕರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

ಬೆಂಗಳೂರಿನಲ್ಲಿ ಶೇ. 1.9 ರಷ್ಟು ಕೋವಿಡ್ ಹೆಚ್ಚಳವಾಗಿದೆ. ಕೋವಿಡ್ ಲಸಿಕೆ ತೆಗೆದುಕೊಂಡಿರದವರಿಗೆ ಸೋಂಕು ಹೆಚ್ಚುತ್ತಿದೆ. ಹೀಗಾಗಿ ಲಸಿಕೆ ಹಾಗೂ ಬೂಸ್ಟರ್​ ಡೋಸ್​ಗಳನ್ನು ತಪ್ಪದೇ ಹಾಕಿಸಿಕೊಳ್ಳಿ ಎಂದು ಜನರಿಗೆ ಸುಧಾಕರ​ ಮನವಿ ಮಾಡಿದರು.

ದೇಶದಲ್ಲಿ 4ನೇ ಅಲೆಯ ಆತಂಕ ಹೆಚ್ಚಾಗಿದ್ದು, ಮುನ್ನೆಚ್ಚರಿಕೆ ಕ್ರಮಗಳು ಅಗತ್ಯವಾಗಿದೆ. ಥೈಲ್ಯಾಂಡ್, ದಕ್ಷಿಣ ಕೋರಿಯಾ, ಜಪಾನ್ ನಿಂದ ಬೆಂಗಳೂರಿಗೆ ಬರುವವರ ಮೇಲೆ ನಿಗಾ ಇಡಲು ಸೂಚಿಸಲಾಗಿದೆ. ಏರ್​ಪೋರ್ಟನಲ್ಲಿ ಬಿಗಿಭದ್ರತೆಗೆ ಸೂಚನೆ ನೀಡಲಾಗಿದೆ ಎಂದು ಸಚಿವ ಡಾ. ಸುಧಾಕರ​ ಹೇಳಿದ್ದಾರೆ.

ಬೆಂಗಳೂರು ನಗರದಲ್ಲಿ ಸ್ಪಲ್ಪ ಮಟ್ಟಿಗೆ ಕೊರೋನಾ ಸೋಂಕು ಹೆಚ್ಚಾಗಿದೆ. ಹೀಗಾಗಿ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕೋವಿಡ್​ ಹೆಚ್ಚಿರುವ ದೇಶಗಳಿಂದ ಬರುವಂತವರಿಗೆ ಟೆಲಿ ಮಾನಿಟರಿಂಗ್​ ಮಾಡಲು ನಿರ್ಧರಿಸಲಾಗಿದೆ. ಲ್ಯಾಬ್ ವರದಿ ಬರುವ ವರೆಗೆ ಯಾವ ತಳಿ ಎಂದು ಹೇಳಲು ಸಾಧ್ಯವಿಲ್ಲ ಎಂದರು.​

ಈಗ ಹರಡುತ್ತಿರುವುದು ಓಮಿಕ್ರಾನ್ ನ ತಳಿಯೇ ಆಗಿದ್ದರೆ ರೋಗ ಲಕ್ಷಣಗಳು ಅದೇ ರೀತಿ ಇರುತ್ತವೆ. ಎಲ್ಲ ಪಕ್ಷಗಳೂ ಸಭೆ, ಸಮಾರಂಭಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದು ಅವರು ಮನವಿ ಮಾಡಿದರು. ಸಭೆಯಲ್ಲಿ ಕಡ್ಡಾಯ ಮಾಸ್ಕ​ ಜಾರಿಗೆ ತರಲು ನಿರ್ಧರಿಸಲಾಗಿದೆ ಎಂದು ಸಚಿವ ಸುಧಾಕರ ತಿಳಿಸಿದ್ದಾರೆ.

ಮಾಸ್ಕ್​ ಹಾಕದವರಿಗೆ ಸದ್ಯಕ್ಕೆ ದಂಡ ವಿಧಿಸುವುದಿಲ್ಲ. ಕಡ್ಡಾಯ ಮಾಸ್ಕ ಸಂಬಂಧ ಮತ್ತೆ ಮಾರ್ಗಸೂಚಿ ಹೊರಡಿಸಲಾಗುವುದು. ಹೊರ ರಾಜ್ಯಗಳಿಂದ ಬರುವವರ ಮೇಲೆ ಯಾವ ರೀತಿ‌‌ ನಿಗಾ ಇಡಬೇಕೆಂದು ಸಭೆಯಲ್ಲಿ ಚರ್ಚಿಸಿ ನಿರ್ಧರಿಸಲಾಗಿದೆ ಎಂದರು.

ಸೋಂಕಿತರಲ್ಲಿರುವುದು ಹೊಸ ತಳಿಯೋ ಅಥವಾ ಅಲ್ಲವೊ ಎಂಬುದು ಎರಡು ಮೂರು ದಿನಗಳಲ್ಲಿ ಅಧಿಕೃತವಾಗಿ ವರದಿ ಬರಲಿದೆ ಎಂದೂ ಅವರು ತಿಳಿಸಿದರು.

ನಿತ್ಯ ಹತ್ತು ಸಾವಿರ ಟೆಸ್ಟಿಂಗ್ ನಡೆಯುತ್ತಿದೆ. ರೋಗ ಲಕ್ಷಣಗಳು ಇದ್ದವರಿಗೆ ಟೆಸ್ಟಿಂಗ್ ಮಾಡಬೇಕು ಎಂಬ ಕೇಂದ್ರದ ಮಾರ್ಗಸೂಚಿ ಪಾಲನೆ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.

ದೆಹಲಿಯಲ್ಲಿ ತೀವ್ರವಾದ ಸಮಸ್ಯೆ ಇಲ್ಲ, ಐಸಿಯು ಆಸ್ಪತ್ರೆ ದಾಖಲಾತಿ ಕಡಿಮೆ ಇದೆ. ಆದರೆ ವಿದೇಶಗಳಲ್ಲಿ ಹೆಚ್ಚಿದೆ. ಇದಕ್ಕೆ ಲಸಿಕೆ ಹಾಕಿಸಿಕೊಳ್ಳದೇ ಇರುವುದು ಕಾರಣ ಎಂದು ಅವರು ತಿಳಿಸಿದರು.

You might also like
Leave a comment