This is the title of the web page

ವಲಸೆ ಹಕ್ಕಿಗಳು

ವರ್ಷಕ್ಕೊಮ್ಮೆ ಚಳಿಗಾಲದಲ್ಲಿ ಕೆಲವು ಹಕ್ಕಿಗಳು ಶೀತ ಪ್ರದೇಶದಿಂದ ದಕ್ಷಿಣಕ್ಕೆ ವಲಸೆ ಬಂದು, ಚಳಿಗಾಲ ಮುಗಿದ ಮೇಲೆ ತಮ್ಮ ತಮ್ಮ ನೆಲೆಗೆ ಹಿಂದಿರುಗುತ್ತವೆ. ಅವನ್ನು ವಲಸೆ ಹಕ್ಕಿಗಳು ಎಂದು ಕರೆಯುತ್ತಾರೆ. ಅದೇ ರೀತಿ ಒಂದು ಬಗೆಯ ಮೀನು ಅದು ಜನ್ಮ ತಳೆಯುವುದು ನದಿಗಳಲ್ಲಿ. ಆನಂತರ ಅದು ಹರಿದು ಹೋಗಿ ಸಮುದ್ರ ಸೇರುತ್ತದೆ. ವಯಸ್ಸಿಗೆ ಬಂದಾಗ, ತನ್ನ ಸಂತಾನ ಅಭಿವೃದ್ಧಿ ಮಾಡಿಕೊಳ್ಳಲೆಂದು ಅದು ಸಾವಿರಾರು ಮೈಲು ದೂರ ಕ್ರಮಿಸಿ, ತಾನು ಹುಟ್ಟಿದ ನದಿ ಪ್ರದೇಶ ಸೇರಿ ಸಂತಾನ ವೃದ್ಧಿ ಮಾಡಿಕೊಂಡು ಮರಳುತ್ತದೆ. ಹೀಗೇ ನಾನಾ ಕಾರಣಗಳಿಗೆ ವಲಸೆ ನಡೆಯುವುದು ಪ್ರಕೃತಿಯಲ್ಲಿ ಸಹಜ. ಹಾಗೇ ರಾಜಕೀಯದಲ್ಲಿ ಕೂಡ ಈಗ ವಲಸೆ ನಡೆದಿದೆ.

ಚುನಾವಣೆ ಘೋಷಣೆ ಆಗುತ್ತಿದ್ದಂತೆ ಈ ವಲಸೆ ಹಕ್ಕಿಗಳು ಚಡಪಡಿಸುತ್ತಾ ಇಲ್ಲಿಂದ ಅಲ್ಲಿಗೆ, ಅಲ್ಲಿಂದ ಇಲ್ಲಿಗೆ ಹಾರಿ ಹೋಗುವುದು ಸಾಮಾನ್ಯ ಎಂಬoತಾಗಿದೆ. ಈಗ ಐದು ರಾಜ್ಯಗಳ ಚುನಾವಣಾ ಪ್ರಕ್ರಿಯೆ ಘೋಷಣೆ ಆಗಿದೆ. ಇದಕ್ಕೆ ಪೂರ್ವಭಾವಿಯಾಗಿ ಹಲವು ರಾಜಕೀಯ ಹಕ್ಕಿಗಳು ವಲಸೆ ಆರಂಭಿಸಿದವು. ಉತ್ತರ ಪ್ರದೇಶ ಮತ್ತು ಗೋವಾದಲ್ಲಿ ಇದು ಹೆಚ್ಚಾಗಿ ಕಂಡುಬoತು. ಈಗ ಗೆಲ್ಲುವ ಪಕ್ಷ ಯಾವುದು ಎಂಬ ಲಕ್ಷಣ ಗೋಚರಿಸುತ್ತಿದ್ದಂತೆ ಮತ್ತಷ್ಟು ಹಕ್ಕಿಗಳ ವಲಸೆ ನಡೆಯುತ್ತದೆ. ಇದು ಸಾಲದೆಂಬoತೆ ಚುನಾವಣೆ ಮುಗಿದ ಮೇಲೂ ಅಧಿಕಾರ ಗಿಟ್ಟಿಸಿಕೊಳ್ಳಲೆಂದು ಕೂಡ ವಲಸೆ ಹೋಗುವ ಪರಿಪಾಠವೂ ನಮ್ಮಲ್ಲಿ ಇದೆ. ಅಂಥ ಕೃತ್ಯಗಳಿಂದಾಗಿಯೇ ಹಲವಾರು ರಾಜ್ಯಗಳಲ್ಲಿ ಗೆದ್ದ ಪಕ್ಷದ ಬದಲು ಸೋತ ಪಕ್ಷ ಅಧಿಕಾರ ನಡೆಸುತ್ತಿದೆ.

ಬಹಳ ಹಿಂದೆ ಹೀಗೆ ನಡೆಯುತ್ತಾ ಇದ್ದುದು ಅಪರೂಪ. ಇತ್ತೀಚಿನ ದಿನಗಳಲ್ಲಿ ನಾವು ಗಮನಿಸಿದಂತೆ ತಮ್ಮದು ಎಂಬ ಕ್ಷೇತ್ರ ಇರದಿದ್ದ ಎಲ್.ಕೆ. ಆದ್ವಾನಿ ಅವರು ಗುಜರಾತ್‌ನ ಗಾಂಧಿನಗರ ಕ್ಷೇತ್ರದಿಂದ ಸ್ಪರ್ಧಿಸಿ ಗೆಲ್ಲುತ್ತಾ ಬಂದಿದ್ದರು. ೨೦೧೪ರಲ್ಲಿ ಗುಜರಾತ್‌ನವರಾದ ನರೇಂದ್ರ ಮೋದಿ ಉತ್ತರ ಪ್ರದೇಶದ ವಾರಾಣಾಸಿಯಲ್ಲಿ ಸ್ಪರ್ಧಿಸಿ ಗೆದ್ದು ಪ್ರಧಾನಿಯಾದರು. ನಾನಾ ಕಾರಣಗಳಿಗೆ ಒಂದೆಡೆಯಿoದ ಮತ್ತೊಂದೆಡೆಗೆ ವಲಸೆ ಹೋಗುವುದು ಅಭ್ಯಾಸ ಆದಂತಿದೆ. ಮುಂದಿನ ದಿನಗಳಲ್ಲಿ ಸರಣಿ ಎಂಬoತೆ ಹಲವು ರಾಜ್ಯಗಳ ಚುನಾವಣೆ ಹಾಗೂ ಕೊನೆಗೆ ಸಂಸತ್ತಿಗೆ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಸಾಕಷ್ಟು ವಲಸೆಯನ್ನು ಕಾಣಬಹುದು ಎಂಬ ನಿರೀಕ್ಷೆ ಇದೆ.

ಭಾರತದಲ್ಲಿ ಪಕ್ಷಾಧಾರಿತ ಚುನಾವಣೆಗಳು ಆರಂಭವಾದಾಗ ಒಂದೊoದು ಪಕ್ಷದಲ್ಲಿಯೂ ಆ ಪಕ್ಷ ಪ್ರತಿಪಾದಿಸುವ ನಿಲುವಿಗೆ ಬದ್ಧರಾದ ಜನ ಇರುತ್ತಿದ್ದರು. ಪಕ್ಷದ ನಾಯಕರು ಅಂಥ ನಿಲುವುಗಳಿಂದ ದೂರವಾದಾಗ ಜಗಳಗಳು, ಬಹುದೊಡ್ಡ ಮಾತಿನ ಕದನಗಳೂ ನಡೆಯುತ್ತಿದ್ದವು. ಕೆಲವರು ತಮ್ಮ ನಿಲುವಿನ ಬದ್ಧತೆಗಾಗಿ ಪಕ್ಷವನ್ನೇ ತೊರೆದು ಹೋಗುತ್ತಿದ್ದರು. ದಿನ ಕಳೆದಂತೆ ಪಕ್ಷದ ಸೈದ್ಧಾಂತಿಕ ನಿಲುವು ಕ್ಷೀಣಿಸುತ್ತಾ ಗೆಲ್ಲುವುದೇ ಮುಖ್ಯ ನಿಲುವಾಯಿತು. ಇದಕ್ಕಾಗಿ ಜಾತಿ, ಧರ್ಮ, ಹಣ ಮತ್ತಿತರ ಸಂಗತಿಗಳೂ ಚುನಾವಣಾ ಗೆಲುವಿನಲ್ಲಿ ಮುಖ್ಯ ಪಾತ್ರ ವಹಿಸಿದವು. ಈಗಂತೂ ಅಧಿಕಾರ ಪಡೆಯುವುದೇ ಮುಖ್ಯ ನಿಲುವು ಆಗಿದೆ. ಹಾಗಾಗಿ ನೀತಿ, ನಿಯಮ ಎಂದೆಲ್ಲ ಯಾರೂ ತಲೆ ಕೆಡಿಸಿಕೊಳ್ಳಲು ಹೋಗುವುದಿಲ್ಲ.

ನಮ್ಮ ರಾಜ್ಯದಲ್ಲಿ ಬಹುಕಾಲ ಪಕ್ಷಾಧಾರಿತ ಚುನಾವಣೆ ಮಹತ್ವ ಪಡೆದಿತ್ತು. ಆದ್ದರಿಂದ ನಿರ್ದಿಷ್ಟ ಪಕ್ಷದಿಂದ ಯಾರೇ ಸ್ಪರ್ಧಿಸಿದರೂ ಆರಿಸಿ ಬರುತ್ತಾರೆ ಎಂಬುದಿತ್ತು. ಆದರೆ ಉತ್ತರ ಭಾರತದಲ್ಲಿ ಆಯಾರಾಂ ಗಯಾರಾಂಗಳ ಹಾವಳಿಯಿಂದಾಗಿ ಸರ್ಕಾರಗಳ ಸ್ಥಿರತೆ ಮರೀಚಿಕೆ ಎನ್ನಿಸಿತು. ನಮ್ಮಲ್ಲಿ ಕೂಡ ಅರಸು ಸರ್ಕಾರ ಕೆಡವಿ ಗುಂಡೂರಾವ್ ಸರ್ಕಾರ ಬಂದದ್ದು ಇದೇ ಪಕ್ಷಾಂತರ ಪಿಡುಗಿನಿಂದ. ಇದಕ್ಕೆ ತಡೆ ಒಡ್ಡಲು ಪಕ್ಷಾಂತರ ನಿಷೇಧ ಕಾಯಿದೆ ಜಾರಿಗೆ ತರಲಾಯಿತು. ಆ ಕಾಯಿದೆಯ ಸಣ್ಣ ಲೋಪ ಬಳಸಿಕೊಂಡು ರಾಜ್ಯದಲ್ಲಿ ಬಿಜೆಪಿ ಅಧಿಕಾರ ಪಡೆಯಿತು. ಮುಂದೆ ಇದೇ ಮಾದರಿ ಅನುಸರಿಸಿ ಇನ್ನೂ ಹಲವು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ಗಳಿಸಿತು.

ಆನಂತರ ಹಣವಂತರ ರಾಜಕೀಯವೇ ಪ್ರಮುಖ ಸಂಗತಿ ಆಯಿತು. ತನ್ನದೊಂದು ಕ್ಷೇತ್ರ ಸ್ಥಾಪಿಸಿಕೊಂಡರೆ, ತನ್ನನ್ನು ಯಾರೂ ಅಲುಗಿಸಲಾರರು ಎಂಬ ನಿಲುವು ದಟ್ಟ ಆಯಿತು. ಇದು ಹಲವು ರೀತಿಯ ವಲಸೆಗೆ ಕಾರಣ ಆಯಿತು. ಅಂತಹ ಮೊದಲ ದೊಡ್ಡ ವಲಸೆ ದೇವೇಗೌಡರ ಕುಟುಂಬದ್ದು. ಹಾಸನದಲ್ಲಿ ತಮಗೆ ವಿರೋಧಿಗಳು ಹೆಚ್ಚಿದ್ದರಿಂದ ಅವರು ಹೊಸ ನೆಲೆಗಾಗಿ ಬೆಂಗಳೂರಿನ ಗ್ರಾಮಾಂತರ ಭಾಗ ನೆಚ್ಚಿಕೊಂಡರು. ಅದರಲ್ಲೂ ರಾಮನಗರ ಅವರ ಮುಖ್ಯ ಕ್ಷೇತ್ರ ಆಯಿತು. ಈಗ ಅಲ್ಲಿನ ಜನ, ಇವರು ನಮ್ಮವರಲ್ಲ ಎಂಬ ತಕರಾರು ತೆಗೆಯಲು ಆರಂಭಿಸಿದ್ದಾರೆ.

ಶಿವಮೊಗ್ಗದ ಪ್ರಮುಖ ರಾಜಕಾರಣಿಗಳಾದ ಯಡಿಯೂರಪ್ಪ ಮತ್ತು ಈಶ್ವರಪ್ಪ ಮೂಲತಃ ಆ ಜಿಲ್ಲೆಯವರೇ ಅಲ್ಲ. ಯಡಿಯೂರಪ್ಪ ಮಂಡ್ಯ ಜಿಲ್ಲೆಯ ಬೂಕನಕೆರೆಯವರು, ಈಶ್ವರಪ್ಪ ಮೂಲತಃ ಬಳ್ಳಾರಿಯಿಂದ ವಲಸೆ ಬಂದವರು. ಆದರೆ ಇಬ್ಬರೂ ವಲಸೆ ಬಂದಿದ್ದು ಸಕ್ರಿಯ ರಾಜಕೀಯ ಪ್ರವೇಶಿಸುವ ಮುನ್ನವೇ. ಕಳೆದ ಬಾರಿ ನಡೆದ ಚುನಾವಣೆಗಳಲ್ಲಿ ಬಹುದೊಡ್ಡ ವಲಸೆ ಎನ್ನಿಸಿಕೊಂಡಿದ್ದು ಸಿದ್ದರಾಮಯ್ಯ ಅವರು ತಮ್ಮ ಸ್ವಕ್ಷೇತ್ರದ ಜೊತೆಗೇ ಬಾದಾಮಿಯಿಂದ ಸ್ಪರ್ಧಿಸಿದ್ದು ಹಾಗೂ ಸಂಸತ್ ಚುನಾವಣೆಯಲ್ಲಿ ದೇವೇಗೌಡರು ಮೊಟ್ಟಮೊದಲ ಬಾರಿಗೆ ತುಮಕೂರು ಕ್ಷೇತ್ರದಿಂದ ಸ್ಪರ್ಧಿಸಿದ್ದು. ದೇವೇಗೌಡರೇನೋ ಸೋತರು, ಆದರೀಗ ಗೆದ್ದ ಸಿದ್ದರಾಮಯ್ಯ ವಲಸೆ ಕುರಿತು ಸ್ಥಳೀಯ ಮುಖಂಡರಲ್ಲಿ ಒಡಕು ಧ್ವನಿ ಕಾಣಿಸಿಕೊಂಡಿದೆ. ಹೀಗಾಗಿ ಮುಂಬರುವ ಚುನಾವಣೆಯಲ್ಲಿ ಯಾವುದಾದರೂ ಸುರಕ್ಷಿತ ಕ್ಷೇತ್ರ ಹುಡುಕುವುದು ಅವರಿಗೆ ಅನಿವಾರ್ಯ. ಹಿಂದೊಮ್ಮೆ ಎಸ್.ಎಂ. ಕೃಷ್ಣ ಮಾಡಿದ್ದಂತೆ ಅವರು ಬೆಂಗಳೂರಿನ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಬಹುದು ಇಲ್ಲವೇ ಬೇರೊಂದು ಸುರಕ್ಷಿತ ಕ್ಷೇತ್ರ ಕಂಡುಕೊಳ್ಳಬಹುದು. ಇವೆಲ್ಲ ಒಂದು ರೀತಿಯ ಒಪ್ಪಿತವಾದ ರಾಜಕೀಯ ತಂತ್ರ ಎಂದುಕೊoಡರೂ ಸಹ ಹಣಕ್ಕಾಗಿ, ಅಧಿಕಾರಕ್ಕಾಗಿ ಅಥವಾ ತಮ್ಮ ಅಕ್ರಮ ಬಯಲಾಗುವ ಭಯದಲ್ಲಿ ವಲಸೆಗೆ ಮುಂದಾಗುವವರ ಬಗ್ಗೆ ಏನು ಹೇಳುವುದು? ಈಗ ಪಕ್ಷಗಳಿಗೂ ಸಿದ್ಧಾಂತದ ನೆಲೆ ಇಲ್ಲ. ಅದರಂತೆ ರಾಜಕಾರಣ ಎಂದರೆ ನೈತಿಕತೆಯೇ ಇಲ್ಲದ ಕ್ಷೇತ್ರ ಆಗಿರುವಾಗ ವಲಸೆ ತೀರಾ ಕ್ಷುಲ್ಲಕ ಸಂಗತಿ ಎನಿಸಿಕೊಳ್ಳುತ್ತದೆ.

You might also like
Leave a comment