This is the title of the web page

ಗುಣಾತ್ಮಕ ಸಾಧನೆ ಪ್ರತಿಫಲಿಸಬೇಕು: ಸಚಿವ ಗೋವಿಂದ ಕಾರಜೋಳ

 

ಬೆಳಗಾವಿ, ೧೭- ಕೇಂದ್ರ ಸರಕಾರ ಕಳೆದ ಎಂಟು‌ ವರ್ಷಗಳಲ್ಲಿ ಜಾರಿಗೆ ತಂದಿರುವ ಮಹತ್ವಾಕಾಂಕ್ಷಿ ಯೋಜನೆಗಳ ಫಲಾನುಭವಿಗಳ ಜತೆ ಕೇಂದ್ರ‌ ಸಚಿವ ಸೋಮ‌ಪ್ರಕಾಶ ಅವರು ಜೂ.23 ರಂದು ಸಂವಾದ ನಡೆಸಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ತಿಳಿಸಿದರು.

ಪ್ರಧಾನ ಮಂತ್ರಿಗಳ ಮಹತ್ವಾಕಾಂಕ್ಷಿ ಯೋಜನೆಗಳ ಫಲಾನುಭವಿಗಳ ಜತೆ‌ ಕೇಂದ್ರ ಸಚಿವರ ಸಂವಾದ ಮತ್ತಿತರ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ನಗರದ ಪ್ರವಾಸಿಮಂದಿರದಲ್ಲಿ ಶುಕ್ರವಾರ ನಡೆದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜೂನ್ 23 ರಂದು ಸಂವಾದ ಕಾರ್ಯಕ್ರಮವನ್ನು ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಆಯೋಜಿಸಲು ಉದ್ಧೇಶಿಸಲಾಗಿದೆ. ಸಂವಾದದ ಬಳಿಕ ಕೇಂದ್ರ ಸಚಿವರು, ಅಧಿಕಾರಿಗಳ ಸಭೆ ನಡೆಸುವರು. ಮಾರನೇ ದಿನ ಐತಿಹಾಸಿಕ ಬೆಳಗಾವಿ ಕೋಟೆಗೆ ಭೇಟಿ ನೀಡಲಿದ್ದು, ನಂತರ ದಲಿತರೊಬ್ಬರ ಮನೆಗೆ ಕೂಡ ಭೇಟಿ ನೀಡಲಿದ್ದಾರೆ.

ಪ್ರಧಾನಮಂತ್ರಿ ಆವಾಸ್ ಯೋಜನೆ, ಜಲಜೀವನ ಮಿಷನ್ ಸೇರಿದಂತೆ ಕೇಂದ್ರ ಸರಕಾರವು ಕಳೆದ ಎಂಟು ವರ್ಷಗಳಲ್ಲಿ ಜಾರಿಗೆ ತಂದಿರುವ ಮಹತ್ವಾಕಾಂಕ್ಷಿ ಯೋಜನೆಗಳಿಗೆ ಸಂಬಂಧಿಸಿದಂತೆ ಜಿಲ್ಲೆಯ ಪ್ರತಿ ತಾಲ್ಲೂಕಿನಿಂದ ಐದು ಫಲಾನುಭವಿಗಳನ್ನು ಕರೆದುಕೊಂಡು ಬಂದು ಸೌಲಭ್ಯ-ಪ್ರಮಾಣಪತ್ರಗಳನ್ನು ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ಕಳೆದ ಎಂಟು‌ ವರ್ಷಗಳಲ್ಲಿ ಕೇಂದ್ರ ಸರಕಾರ ಜಾರಿಗೊಳಿಸಿರುವ ವಿವಿಧ ಯೋಜನೆಗಳ ಪ್ರಗತಿಯ ಕುರಿತು ವಿಸ್ತೃತ ಮಾಹಿತಿಯನ್ನು ಪಡೆದುಕೊಂಡ ಸಚಿವರು, ಒಂದು ವೇಳೆ ಯಾವುದಾದರೂ ಸೌಲಭ್ಯ ಬಾಕಿ ಉಳಿದಿದ್ದರೆ ತಕ್ಷಣವೇ ಫಲಾನುಭವಿಗಳಿಗೆ ತಲುಪಿಸಬೇಕು ಎಂದು ನಿರ್ದೇಶನ ನೀಡಿದರು.

You might also like
Leave a comment