ಬೆಳಗಾವಿ: ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದರೂ ಡಿಕ್ಕಿ ಹೊಡೆದ ಕ್ಯಾಂಟರ್ ವಾಹನ ಇನ್ನೂ ಪತ್ತೆ ಆಗಿಲ್ಲ.
ಸಚಿವೆ ಲಕ್ಷ್ಮೀ ಹೆಬ್ಬಾಳಕರ ಕಾರಿಗೆ ಹಿಟ್ ಆಂಡ್ ರನ್ ಮಾಡಿ ಹೋಗಿದ್ದ ಹೊರರಾಜ್ಯದ ಕ್ಯಾಂಟರ್ ವಾಹನಕ್ಕಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದಾರೆ.
ಪಂಜಾಬ ಅಥವಾ ಹರಿಯಾಣಾದ ಕ್ಯಾಂಟರ್ ವಾಹನವೊಂದು ಲಕ್ಷ್ಮೀ ಹೆಬ್ಬಾಳಕರ ಅವರ ಕಾರು ಓವರಟೇಕ ಮಾಡುತ್ತಿದ್ದಾಗ ಅಪಘಾತ ಮಾಡಿ ಓಡಿ ಹೋಗಿದ್ದರ ಕುರಿತು ಸಂಶಯಗಳು ಪೊಲೀಸರಿಗೆ ವ್ಯಕ್ತವಾಗಿವೆ ಎನ್ನಲಾಗಿದೆ.
ಚಾಲಕನನ್ನು ಬಂಧಿಸಲು ಬೆಳಗಾವಿ ಪೊಲೀಸರು ಬಲೆ ಬೀಸಿದ್ದು ಈಗಾಗಲೇ ಒಟ್ಟು 60 ಕ್ಯಾಂಟರ ವಾಹನಗಳ ಖಚಿತ ಮಾಹಿತಿಯನ್ನು ಪೊಲೀಸರು ಪಡೆದುಕೊಂಡಿದ್ದಾರೆ. ಹಿರೇಬಾಗೇವಾಡಿ ಟೋಲ್ ನಾಕಾದಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮರಾದಲ್ಲಿನ ವಿಡಿಯೋ ಆಧರಿಸಿ ತನಿಖೆಯನ್ನು ಪೊಲೀಸರು ತೀವ್ರಗೊಳಿಸಿದ್ದಾರೆ. ಈಗಾಗಲೇ 30 ಕ್ಕೂ ಹೆಚ್ಚು ಕ್ಯಾಂಟರ್ ಚಾಲಕರನ್ನು ಕರೆಸಿ ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಸಚಿವರ ಕಾರು ಅಪಘಾತವಾದ ಅಂದಿನ ದಿನ ರಾಷ್ಟ್ರೀಯ ಹೆದ್ದಾರಿಯ ಮೇಲೆ ಸಂಚರಿಸಿದ ಪ್ರತಿಯೊಂದು ಕ್ಯಾಂಟರಗಳ ಮೇಲೆ ನಿಗಾ ಇಟ್ಟು ತನಿಖೆ ನಡೆಸಲಾಗುತ್ತಿದೆ ಎಂದು ಬೆಳಗಾವಿ ಜಿಲ್ಲಾ ಪೊಲೀಸ ವರಿಷ್ಠ ಡಾ. ಭೀಮಾಶಂಕರ ಗುಳೇದ ತಿಳಿಸಿದ್ದಾರೆ.