This is the title of the web page

ಪೊಲೀಸ ಠಾಣೆ ಮೇಲೆ ದಾಳಿ; ಎಎಸ್ಐ ಸಾವು, ಹಲವು ಅಧಿಕಾರಿಗಳಿಗೆ ಗಂಭೀರ ಗಾಯ

 

ಪಾಟ್ನಾ,೨೦- ಪೊಲೀಸ್ ವಶದಲ್ಲಿದ್ದ ವ್ಯಕ್ತಿಯೊಬ್ಬ ಮೃತಪಟ್ಟ ಕಾರಣ ಬಿಹಾರದ ಪಶ್ಚಿಮ ಚಂಪಾರಣ್ ಜಿಲ್ಲೆಯ ಪೊಲೀಸ್ ಠಾಣೆಯ ಮೇಲೆ ಕೋಪೋದ್ರಿಕ್ತ ಜನರು ದಾಳಿ ನಡೆಸಿದಾಗ ಸಹಾಯಕ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಒಬ್ಬ ಮೃತಪಟ್ಟಿದ್ದಾರೆ ಮತ್ತು ಒಂಭತ್ತು ಮಂದಿ ಗಾಯಗೊಂಡಿದ್ದಾರೆ. ಅವರಲ್ಲಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ರವಿವಾರ ತಿಳಿಸಿದ್ದಾರೆ.

ಶನಿವಾರ ಪೊಲೀಸ್ ಕಸ್ಟಡಿಯಲ್ಲಿದ್ದ 40 ವರ್ಷದ ವ್ಯಕ್ತಿ ಮೃತಪಟ್ಟ ನಂತರ ಜನಸಮೂಹ ಪ್ರತಿಭಟಿಸಿತು. ಸ್ಥಳದಲ್ಲಿ ಸಾವಿನ ಸುದ್ದಿ ಹರಡುತ್ತಿದ್ದಂತೆ ಆರ್ಯನಗರದ ಹಲವಾರು ನಿವಾಸಿಗಳು ಬಲ್ತಾರ್ ಪೊಲೀಸ್ ಠಾಣೆ ಬಳಿ ಜಮಾಯಿಸಿದರು.

ಕೋಪೋದ್ರಿಕ್ತ ಗುಂಪು ಕಲ್ಲು ತೂರಾಟ ಮತ್ತು ಗುಂಡಿನ ದಾಳಿಯಲ್ಲಿ ತೊಡಗಿತು ಮತ್ತು ಬೆಂಕಿ ಹಚ್ಚಿತು. ಇದರಿಂದ 10 ಪೊಲೀಸ್ ಅಧಿಕಾರಿಗಳು ಗಾಯಗೊಂಡರು. ಅವರಲ್ಲಿ ಒಬ್ಬ ರಾಮ ಜತನ್ ಸಿಂಗ್ ಎಂಬವರು ಮೃತಪಟ್ಟರು. ಅವರನ್ನು ಜಿಲ್ಲೆಯ ಪುರುಸೊತ್ತಂಪುರ ಪೊಲೀಸ್ ಠಾಣೆಗೆ ನಿಯೋಜಿಸಲಾಗಿತ್ತು.

ಗಾಯಗೊಂಡ ಅಧಿಕಾರಿಗಳನ್ನು ಚಿಕಿತ್ಸೆಗಾಗಿ ಬೆಟ್ಟಯ್ಯನ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ನಾಲ್ವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗಿದೆ.

ಮೂರು ಪೊಲೀಸ್ ವಾಹನಗಳು, ಎರಡು ಖಾಸಗಿ ಕಾರುಗಳು ಮತ್ತು ಅಗ್ನಿಶಾಮಕ ಠಾಣೆಯ ವಾಹನಕ್ಕೆ ಗುಂಪು ಬೆಂಕಿ ಹಚ್ಚಲಾಗಿದೆ. ಹಿರಿಯ ಪೊಲೀಸ್ ಮತ್ತು ಆಡಳಿತಾಧಿಕಾರಿಗಳ ಮಧ್ಯಪ್ರವೇಶದ ನಂತರ ಪರಿಸ್ಥಿತಿಯನ್ನು ಹತೋಟಿಗೆ ತರಲಾಯಿತು.

ಶನಿವಾರದ ಹೋಳಿ ಸಂದರ್ಭದಲ್ಲಿ ಅಬ್ಬರದ ಡಿಜೆ ಮತ್ತು ಅಸಭ್ಯ ಹಾಡುಗಳನ್ನು ನುಡಿಸಿದ ಆರೋಪದ ಮೇಲೆ ಅನಿರುಧಾ ಯಾದವ ಎಂಬವನನ್ನು ಪೊಲೀಸರು ಬಂಧಿಸಿದ್ದರು. ಆರ್ಯ ನಗರ ನಿವಾಸಿಯಾಗಿರುವ ಈ ವ್ಯಕ್ತಿ ಪೊಲೀಸ್ ಠಾಣೆಯಲ್ಲಿ ಮೃತಪಟ್ಟಿದ್ದಾನೆ. ವಿಚಾರಣೆ ವೇಳೆ ಪೊಲೀಸರ ಅತಿರೇಕದಿಂದ ಅನಿರುಧಾ ಮೃತಪಟ್ಟ ಎಂಬ ವದಂತಿ ಹಬ್ಬಿ ಪೊಲೀಸ್ ಠಾಣೆ ಮೇಲೆ ದಾಳಿ ನಡೆದಿದೆ.

ಪಶ್ಚಿಮ ಚಂಪಾರಣ್ ಪೊಲೀಸ್ ಅಧೀಕ್ಷಕ ಉಪೇಂದ್ರನಾಥ ವರ್ಮಾ ಅವರು ಪೊಲೀಸ್ ದೌರ್ಜನ್ಯದ ವರದಿಯನ್ನು ನಿರಾಕರಿಸಿದ್ದು ಪೊಲೀಸ್ ಠಾಣೆಯಲ್ಲಿ ಜೇನು ನೊಣ ಕಡಿತದಿಂದ ಆತ ಮೃತಪಟ್ಟಿದ್ದಾನೆ ಎಂದು ಹೇಳಿದರು.

ಪೊಲೀಸ್ ಠಾಣೆಯ ಮೇಲೆ ದಾಳಿ ಮಾಡಿದ ಹತ್ತಕ್ಕೂ ಹೆಚ್ಚು ಜನರನ್ನು ವಿಚಾರಣೆಗಾಗಿ ಬಂಧಿಸಲಾಗಿದೆ ಎಂದು ಅವರು ಹೇಳಿದರು. ಪರಿಸ್ಥಿತಿ ಉದ್ವಿಗ್ನವಾಗಿದ್ದರೂ ನಿಯಂತ್ರಣದಲ್ಲಿದೆ ಎಂದು ಅವರು ಹೇಳಿದರು.

You might also like
Leave a comment