This is the title of the web page

ಸೋಮವಾರದಿಂದ 9, 10ನೇ ತರಗತಿ ಪುನಾರಂಭ; ಕಾಲೇಜು 16ರ ವರೆಗೆ ರಜೆ

ಬೆಂಗಳೂರು, 11- ಸೋಮವಾರದಿಂದ 9, 10ನೇ ತರಗತಿಗಳು ಮತ್ತೆ ಆರಂಭವಾಗಲಿವೆ. ಆದರೆ ಪದವಿ ಹಾಗೂ ಪದವಿಪೂರ್ವ ಕಾಲೇಜ ತರಗತಿಗಳ ರಜೆಯನ್ನು ಫೆಬ್ರವರಿ 16ರವರೆಗೆ ವಿಸ್ತರಿಸಲಾಗಿದೆ.

ಹಿಜಾಬ್ ವಿವಾದಕ್ಕೆ ಸಂಬಂಧಿಸಿ ಕರ್ನಾಟಕದ ವಿವಿಧ ಭಾಗಗಳಲ್ಲಿ ಉಂಟಾಗಿರುವ ಪರಿಸ್ಥಿತಿ ನಿಗ್ರಹಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶುಕ್ರವಾರ ಎಲ್ಲಾ ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದರು.

ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತೆ ವಹಿಸಲು ಅವರು ಸೂಚನೆ ನೀಡಿದ್ದಾರೆ. “ಸೋಮವಾರ ಹೈಸ್ಕೂಲಗಳ ಬಳಿ ಕಟ್ಟೆಚ್ಚರ ವಹಿಸಿ, ಹೆಚ್ಚುವರಿ ಪೋಲೀಸ ಸಿಬ್ಬಂದಿ ನಿಯೋಜಿಸಿ, ಸಂಘಟನೆಗಳ ಮೇಲೆ‌ ನಿಗಾ ಇಡಿರಿ. ಇಲಾಖೆಗಳ‌ ನಡುವೆ ಸಮನ್ವಯತೆ ಇರಲಿ”ಎಂದು ಪೊಲೀಸ್ ವರಿಷ್ಠಾಧಿಕಾರಿಗಳಿಗೆ  ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ.

ಹಿಜಾಬ್ ಮತ್ತ ಕೇಸರಿ ಶಾಲು ವಿಚಾರದಲ್ಲಿ ಗಲಾಟೆಯಾಗಿದ್ದ ಜಿಲ್ಲೆಗಳಲ್ಲಿ ಶಾಲೆಗಳಿಗೆ ಹೆಚ್ಚುವರಿ ಭದ್ರತೆ ನೀಡಿ ಎಂದೂ ಅವರು ಹೇಳಿದ್ದಾರೆ.

ಜಿಲ್ಲಾಧಿಕಾರಿಗಳ ಮತ್ತು ಪೋಲೀಸ ವರಿಷ್ಠರು ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಶಾಲೆಗಳ ಸುತ್ತಮುತ್ತ ಸಹ ಪೊಲೀಸ್ ಭದ್ರತೆ ನೀಡಬೇಕು ಎಂದು ಸೂಚನೆ ಕೊಡಲಾಗಿದೆ. ಎಲ್ಲಾ ಇಲಾಖೆಗಳ ಅಧಿಕಾರಿಗಳು ಸಮನ್ವಯತೆಯಿಂದ ಕೆಲಸ ಮಾಡಬೇಕು. ಆ ಬಗ್ಗೆ ರಾಜ್ಯ ಸರ್ಕಾರಕ್ಕೆ ಮಾಹಿತಿ ನೀಡುವಂತೆಯೂ ಡಿಸಿ, ಎಸ್​ಪಿ, ಸಿಇಒ, ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು  ವಿಡಿಯೋ ಸಂವಾದದ ಬಳಿಕ ಗೃಹಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ಸಾಮಾಜಿಕ ಜಾಲತಾಣಗಳ ಮೇಲೆ ನಿಗಾವಹಿಸಬೇಕು. ಕೆಲವು ಮಕ್ಕಳು, ಪೋಷಕರು ಸಂಘಟನೆಗಳ ಜೊತೆ ಸಂಪರ್ಕ ಹೊಂದಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ ಕ್ರಮಕೈಗೊಳ್ಳಲಾಗುವುದು ಎಂದು ಗೃಹ ಸಚಿವರು ಹೇಳಿದರು.

ಧಾರ್ಮಿಕ ಮುಖಂಡರ ಜೊತೆ ಸೇರಿ ಶಾಂತಿ ಸಭೆ ನಡೆಸುವುದು, ಸಮಾಜಘಾತುಕ ಶಕ್ತಿಗಳನ್ನು ನಿಯಂತ್ರಿಸುವಂತೆ ಸೂಚಿಸಲಾಗಿದೆ. ಮುಂದಿನ ದಿನಗಳಲ್ಲಿ ಕಾಲೇಜುಗಳ ಆರಂಭಕ್ಕೆ ಒತ್ತು ನೀಡುತ್ತೇವೆ. ಪರಿಸ್ಥಿತಿ ಗಮನಿಸಿ ಒಂದೆರಡು ದಿನಗಳಲ್ಲಿ ನಿರ್ಧಾರ ತಿಳಿಸುತ್ತೇವೆ ಎಂದು ಆರಗ ಜ್ಞಾನೇಂದ್ರ ಹೇಳಿದ್ದಾರೆ.

You might also like
Leave a comment