This is the title of the web page

ಅಗ್ನಿಪಥ ವಿರುದ್ಧ ಹೋರಾಟ : ಬೆಳಗಾವಿಯಲ್ಲಿ 150 ಕ್ಕೂ ಹೆಚ್ಚು ಯುವಕರು ವಶಕ್ಕೆ 

 

 

ಬೆಳಗಾವಿ : ಅಗ್ನಿಪಥ ಯೋಜನೆ ವಿರೋಧಿಸಿ ಪ್ರತಿಭಟನೆಗೆ ಬಂದಿದ್ದ ಸುಮಾರು 150 ಯುವಕರನ್ನು ಪೊಲೀಸರು ಬೆಳಗಾವಿ ನಗರದ ವಿವಿಧ ಭಾಗಗಳಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ.

ಬೆಳಗಾವಿ ಚಲೋ, ಬೆಳಗಾವಿ ಬಂದ್‍ಗೆ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ನೀಡಿದ್ದ ಕರೆಯನ್ವಯ ಬಸ್ ಹಾಗು ರೈಲ್ವೆ ನಿಲ್ದಾಣಗಳಲ್ಲಿ ಬಂದಿಳಿದಿದ್ದ ಯುವಕರನ್ನು ಪೊಲೀಸರು ವಿಚಾರಿಸಿ ವಶಕ್ಕೆ ಪಡೆದರು. ಪ್ರತಿಭಟನೆಗೆ ಬಂದಿಲ್ಲವೆಂದರೂ ಪೊಲೀಸರು ಒತ್ತಾಯದಿಂದ ಯುವಕರನ್ನು ವಶಕ್ಕೆ ಪಡೆದರು.

ಕೆಲವು ಯುವಕರು, ಕೋಟೆ ಕೆರೆ ಬಳಿಯ ಅಶೋಕ ವೃತ್ತ, ಚನ್ನಮ್ಮ ವೃತ್ತ ಸೇರಿ ವಿವಿಧೆಡೆ ನಿಂತಿದ್ದರು. ಆದರೆ ಪೊಲೀಸರು ಅವರನ್ನು ಒತ್ತಾಯದಿಂದ ತಮ್ಮ ಬಸ್ ಗೆ ಹಾಕಿ ಅವರನ್ನು ಕಂಗ್ರಾಳಿಯ ಕೆಎಸ್‍ ಆರ್ ಪಿ ತರಬೇತಿ ಕೇಂದ್ರಕ್ಕೆ ಕರೆದೊಯ್ದರು. ವಶಕ್ಕೆ ಪಡೆದ ಯುವಕರನ್ನು ಮಾಧ್ಯಮಗಳ ಜೊತೆ ಮಾತನಾಡಲೂ ಪೊಲೀಸರು ಅವಕಾಶ ನೀಡಲಿಲ್ಲ.

ಇನ್ನು ವಶಕ್ಕೆ ಪಡೆದ ಯುವಕರನ್ನು ಸಂಜೆ ಭೇಟಿಯಾದ ಜಿಲ್ಲಾಧಿಕಾರಿ ನಿತೇಶ ಪಾಟೀಲ ಸಮಾಲೋಚಿಸಿ ಬುದ್ಧಿ ಹೇಳಿ ಅಗ್ನಿಪಥ ವಿರೋಧಿಸಿ ಕೇಸ್ ದಾಖಲಾದರೆ ಮುಂದೆ ಯಾವುದೇ ಕೆಲಸವೂ ದೊರೆಯದು ಎಂದು ತಿಳಿ ಹೇಳಿದರು. ಬಹುತೇಕ ಯುವಕರು ತಾವು ಸಾಮಾಜಿಕ ಜಾಲತಾಣದಲ್ಲಿ ನೀಡಿದ್ದ ಕರೆ ಹಿನ್ನೆಲೆಯಲ್ಲಿ ಬಂದಿರುವದಾಗಿ ತಿಳಿಸಿದರು.

You might also like
Leave a comment