This is the title of the web page

ಮದರ್ ಥೆರೇಸಾ ಸಂಸ್ಥೆಗೆ ದೇಣಿಗೆ ಪಡೆಯಲು ಪುನಃ ಅನುಮತಿ

ಹೊಸದಿಲ್ಲಿ, 8- ಭಾರತದಲ್ಲಿರುವ ಮದರ್ ಥೆರೇಸಾ ಅವರ ಮಿಷನರೀಸ್ ಆಫ್ ಚಾರಿಟಿಸ್ ಗೆ ವಿದೇಶಗಳಿಂದ ದೇಣಿಗೆ ಪಡೆಯುವ ಪರವಾನಗಿ ರದ್ದು ಪಡಿಸಿದ್ದ ಕೇಂದ್ರ ಸರಕಾರವು ಈಗ ಆ ಆದೇಶವನ್ನು ಶನಿವಾರ ಹಿಂದಕ್ಕೆ ಪಡೆದಿದೆ.

ಈ ಕುರಿತು ಬ್ರಿಟನ್ ಸಂಸತ್ತಿನಲ್ಲೂ ಗುರುವಾರ ಚರ್ಚೆಗೆ ಆಸ್ಪದವಾಗಿತ್ತು. “ಚಾರಿಟಿಯ ಖಾತೆಗಳಿಗೆ FCRA ಯಾಕೆ ನಿರಾಕರಿಸಲಾಗಿದೆ, ಇದರ ಬಗ್ಗೆ ಭಾರತ ಸರ್ಕಾರ ಸ್ಪಷ್ಟನೆ ನೀಡಬೇಕು ಮತ್ತು ನಿರ್ಬಂಧಗಳನ್ನು ತಕ್ಷಣವೇ ತೆಗೆದು ಹಾಕುವಂತೆ ಭಾರತ ಸರ್ಕಾರವನ್ನು ಕೇಳಬೇಕು” ಎಂದು ಬ್ರಿಟನ್ ಸಂಸದರು ಗುರುವಾರ ಅಲ್ಲಿನ ಸರ್ಕಾರದ ಮೇಲೆ ಒತ್ತಡ ಹೇರಿದ್ದರು.

ಮದರ್ ಥೆರೇಸಾ ಅವರ -ಮಿಷನರೀಸ್ ಆಫ್ ಚಾರಿಟಿಸ್ – ಗೆ ವಿದೇಶದಿಂದ ದೇಣಿಗೆಯನ್ನು ಪಡೆಯಲು ರದ್ದು ಪಡಿಸಿದ್ದ ಪರವಾನಗಿ (FCRA)ಯನ್ನು ಶನಿವಾರ ಪುನಃಸ್ಥಾಪಿಸಲಾಗಿದೆ.

ಕಳೆದ ಎರಡು ವಾರಗಳಿಂದ ‘ಪ್ರತಿಕೂಲ ವಿಷಯ’ಗಳನ್ನು ಉಲ್ಲೇಖಿಸಿ ಬಿಜೆಪಿ ನೇತೃತ್ವದ ಎನ್ ಡಿ ಎ ಸರ್ಕಾರವು ಸಂಸ್ಥೆಯ ನವೀಕರಣದ ವಿನಂತಿಯನ್ನು ನಿರಾಕರಿಸಿತ್ತು. ಪರವಾನಗಿ ಇಲ್ಲದೇ ಇರುವುದರಿಂದಾಗಿ ಸಂಸ್ಥೆಯ ಸುಮಾರು 250 ಖಾತೆಗಳಿಗೆ ವಿದೇಶದಿಂದ ಧನ ಸಹಾಯ ಮಾಡಲು ಸಾಧ್ಯವಾಗಿರಲಿಲ್ಲ. ಈ ಬಗ್ಗೆ ಒಕ್ಕೂಟ ಸರ್ಕಾರವು ಇಲ್ಲಿಯವರೆಗೆ ಯಾವುದೇ ಹೇಳಿಕೆಯನ್ನು ನೀಡಿಲ್ಲ. ‘ಸಂಬಂಧಿತ ಇಲಾಖೆಗೆ ಅಗತ್ಯ ದಾಖಲೆಗಳನ್ನು ಸಲ್ಲಿಸಿದ ನಂತರ ಪರವಾನಗಿಯನ್ನು ಮರುಸ್ಥಾಪಿಸಲಾಗಿದೆ’ ಎಂದು ಸುದ್ಧಿ ಸಂಸ್ಥೆಯೊಂದು ವರದಿ ಮಾಡಿದೆ.

ಎಫ್ ಸಿ ಆರ್ ಎ ಪರವಾನಗಿಯನ್ನು ಪುನಃಸ್ಥಾಪಿಸಿದ ನಂತರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ತೃಣಮೂಲ ಸಂಸದ ಡೆರೆಕ್ ಒ’ಬ್ರೇನ್, “56 ಇಂಚಿನ ಶಕ್ತಿಗಿಂತ ಪ್ರೀತಿಯ ಶಕ್ತಿ ಪ್ರಬಲವಾಗಿದೆ” ಎಂದು ಪ್ರಧಾನಿ ವಿರುದ್ಧ ವ್ಯಂಗ್ಯವಾಡಿದ್ದಾರೆ.

ಮದರ್ ಥೆರೇಸಾ ಅವರ ಮಿಷನರೀಸ್ ಆಫ್ ಚಾರಿಟಿಸ್ FCRA ನೋಂದಣಿ ಮತ್ತೆ ಮಾಡಲಾಗಿದೆ. ‘ಪ್ರತಿಕೂಲ ವಿಷಯ’ಗಳು ಹಲವರಿಗೆ ಕಿರುಕುಳ ನೀಡಿತು, ಆದರೆ ಅದು ಎರಡು ವಾರಗಳಲ್ಲಿ ಕಣ್ಮರೆಯಾಯಿತು. ಪ್ರೀತಿಯ ಶಕ್ತಿಯು 56 ಇಂಚಿನ ಶಕ್ತಿಗಿಂತ ಪ್ರಬಲವಾಗಿದೆ” ಎಂದು ಅವರು ಟ್ವೀಟ್ ಮಾಡಿದ್ದಾರೆ.

ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಟ್ವೀಟ್ ಮಾಡಿ, “ಮಿಷನರೀಸ್ ಆಫ್ ಚಾರಿಟಿಗೆ ಎಫ್‌ಸಿಆರ್‌ಎ ಮತ್ತೆ ಅನುಮೋದನೆ ನೀಡಿದೆ. ಸಾರ್ವಜನಿಕ ಅಭಿಪ್ರಾಯ ಮತ್ತು ಅಂತರರಾಷ್ಟ್ರೀಯ ಪ್ರತಿಕ್ರಿಯೆಯಿಂದಾಗಿ ಇದು ಸಾಧ್ಯವಾಗಿದೆ” ಎಂದು ಹೇಳಿದ್ದಾರೆ.

ಮಿಷನರೀಸ್ ಆಫ್ ಚಾರಿಟಿಯ ಎಫ್‌ಸಿಆರ್‌ಎ ಪರವಾನಗಿಯನ್ನು ಕ್ರಿಸ್‌ಮಸ್ ದಿನದಂದು ಹಿಂತೆಗೆದುಕೊಳ್ಳಲಾಗಿತ್ತು. ಇದನ್ನು ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೇರಿದಂತೆ ಹಲವರು ವ್ಯಾಪಕವಾಗಿ ಖಂಡಿಸಿದ್ದರು. ತನ್ನ ನಿರ್ಧಾರವನ್ನು ಪರಿಶೀಲಿಸುವ ಮನವಿಯನ್ನು ಸ್ವೀಕರಿಸಿಲ್ಲ ಎಂದು ಗೃಹ ಸಚಿವಾಲಯ ಹೇಳಿತ್ತು. ಆದರೆ ಸಚಿವಾಲಯವು ಇದಕ್ಕೆ ವಿವರಗಳನ್ನು ನೀಡಿರಲಿಲ್ಲ. ಮಿಷನರೀಸ್‌‌ ಆಫ್‌ ಚಾರಿಟಿ ಯುವತಿಯರನ್ನು ಮತಾಂತರಿಸಲು ಯತ್ನಿಸಿಸುತ್ತಿದೆ ಎಂದು ಗುಜರಾತ್‌ನಲ್ಲಿ ದೂರು ದಾಖಲಾದ ವಾರಗಳ ನಂತರ ಚಾರಿಟಿಯ ಖಾತೆಗಳು ಸ್ಥಗಿತಗೊಂಡಿದ್ದವು.

ಕಳೆದ ವಾರ ಮಿಷನರೀಸ್ ಆಫ್ ಚಾರಿಟಿ ಸೇರಿದಂತೆ ಭಾರತದಲ್ಲಿನ 12,000 ಕ್ಕೂ ಹೆಚ್ಚು ಎನ್‌ಜಿಒಗಳು ಮತ್ತು ಚಾರಿಟಬಲ್ ಸಂಸ್ಥೆಗಳು ಅವಧಿ ಮುಗಿದ ನಂತರ ತಮ್ಮ ಎಫ್‌ಸಿಆರ್‌ಎ ಪರವಾನಗಿಗಳನ್ನು ಕಳೆದುಕೊಂಡಿವೆ ಎಂದು ಒಕ್ಕೂಟ ಸರ್ಕಾರ ಹೇಳಿದೆ. ಎಫ್‌ಸಿಆರ್‌ಎ ಅನುಮತಿ ಇಲ್ಲದ ಸಂಸ್ಥೆಗಳ ಪಟ್ಟಿಯಲ್ಲಿ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ, ಆಕ್ಸ್‌ಫ್ಯಾಮ್ ಇಂಡಿಯಾ, ಭಾರತೀಯ ವೈದ್ಯಕೀಯ ಸಂಘ ಮತ್ತು ಕುಷ್ಠರೋಗ ಮಿಷನ್ ಸೇರಿದೆ.

You might also like
Leave a comment