This is the title of the web page

ಮೂಡಲಗಿ ಶಾಸಕರು ಕಾಣೆಯಾಗಿದ್ದಾರೆ -ಕಾಂಗ್ರೆಸ್

ಬೆಳಗಾವಿ, ೧೮- “ಅರಭಾವಿಯ ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕಾಣೆಯಾಗಿದ್ದಾರೆ. ಅವರು ನೇಮಿಸಿಕೊಂಡಿರುವ ಆರು ಖಾಸಗಿ ಆಪ್ತ ಸಹಾಯಕರೇ ಅವರ ಎಲ್ಲ ಸರಕಾರಿ ಕೆಲಸ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಲಕ್ಷ್ಮಣ ಸವಸುದ್ದಿ ಆರೋಪಿಸಿದ್ದಾರೆ.

ಗೋಕಾಕ ತಾಲೂಕಾ ಕಾಂಗ್ರೆಸ್ ಮುಖಂಡ ಲಕ್ಷ್ಮಣ ಸವಸುದ್ದಿ ಅವರು ಬುಧವಾರ ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು, ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಆರು ಖಾಸಗಿ ಆಪ್ತ ಸಹಾಯಕರು ಅರಭಾವಿ ಕ್ಷೇತ್ರವನ್ನು ನಿಭಾಯಿಸುತ್ತಿದ್ದು ಸರಕಾರಿ ಅಧಿಕಾರಿಗಳಿಗೆ ಆದೇಶ ನೀಡುತ್ತಾರೆ. ಜಿಲ್ಲಾಧಿಕಾರಿಗಳೂ ಇದಕ್ಕೆ ಹೊರತಾಗಿಲ್ಲ. ಸರಕಾರಿ ಯೋಜನೆಗಳಿಗೆ ಚಾಲನೆ ನೀಡುವದು ಮತ್ತು ಪೂರ್ಣಗೊಂಡ ಯೋಜನೆಗಳನ್ನು ಉದ್ಘಾಟಿಸುವದನ್ನೂ ಮಾಡುತ್ತಾರೆ. ಇವರೇ ಇದನ್ನೆಲ್ಲ ಮಾಡುವದಾದರೆ ಶಾಸಕರು ಯಾಕೆ ಬೇಕು?  ಎಂದು ಪ್ರಶ್ನಿಸಿದರು.

ನೂತನವಾಗಿ ಅಧಿಕಾರ ವಹಿಸಿಕೊಂಡಿರುವ ಜಿಲ್ಲಾಧಿಕಾರಿಗಳು ತಕ್ಷಣ ಈ ಕುರಿತು ಕ್ರಮ ಜರುಗಿಸದಿದ್ದರೆ ಕಾಂಗ್ರೆಸ್ ಜಿಲ್ಲಾಧಿಕಾರಿಗಳ ಕಚೇರಿಯಲ್ಲೇ ಧರಣಿ ನಡೆಸಲಿದೆ. ಅಲ್ಲದೇ ಮುಖ್ಯಮಂತ್ರಿಗಳ ಮನೆ ಮುಂದೆ ಧರಣಿ ಮತ್ತು ಪ್ರಧಾನಿ ಮೋದಿ ಅವರಿಗೆ ಜಿಲ್ಲಾಧಿಕಾರಿ ಹಾಗು ಶಾಸಕ ಬಾಲಚಂದ್ರ ಜಾರಕಿಹೊಳಿ ಕುರಿತು ದೂರು ನೀಡುವದಾಗಿ ಸವಸುದ್ದಿ ತಿಳಿಸಿದರು.

ಇನ್ನೊಬ್ಬ ಕಾಂಗ್ರೆಸ್ ಮುಖಂಡ ರಮೇಶ ಉಟಗಿ ಮಾತನಾಡಿ, ನೂತನವಾಗಿ ರಚಿಸಲ್ಪಟ್ಟಿರುವ ಮೂಡಲಗಿ ತಾಲೂಕು ಯಾವುದೇ ಅಭಿವೃದ್ಧಿಯಾಗದೇ ಇನ್ನೂ ಗ್ರಾಮವಾಗಿಯೇ ಇದೆ. ತಾಲೂಕು ಕೇಂದ್ರವಾದರೂ ತಾಲೂಕು ಮಟ್ಟದ ಯಾವುದೇ ಕಚೇರಿ ಇನ್ನೂ ಅಲ್ಲಿ ಸ್ಥಾಪನೆಯಾಗಿಲ್ಲ. ಅಲ್ಲಿ ಶಾಸಕರಿದ್ದರೆ ಹೀಗಾಗುತಿರಲಿಲ್ಲ. ನಮ್ಮ ಮೂಡಲಗಿ ಶಾಸಕರು ಕಾಣೆಯಾಗಿದ್ದಾರೆ ಎಂದು ಅವರು ದೂರಿದರು.

You might also like
Leave a comment