This is the title of the web page

ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಹತ್ಯೆ; ನಿಷೇಧಾಜ್ಞೆ ಜಾರಿ

ಶಿವಮೊಗ್ಗ, 21- ಶಿವಮೊಗ್ಗ ನಗರದಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಹತ್ಯೆ ಮಾಡಲಾಗಿದ್ದು, ನಗರದಲ್ಲೀಗ ಸೆಕ್ಷನ್ 144 ಅನ್ವಯ ನಗರದಲ್ಲಿ ನಿಷೇಧಾಜ್ಞೆ ವಿಧಿಸಲಾಗಿದೆ.

ಹರ್ಷ (26) ಎಂಬ ಯುವಕನನ್ನು ಶಿವಮೊಗ್ಗ ನಗರದ ಎನ್.ಟಿ. ರಸ್ತೆಯ ಕಾಮತ್ ಪೆಟ್ರೋಲ್ ಬಂಕ್ ಸಮೀಪದ ಭಾರತಿ ಕಾಲೋನಿಯಲ್ಲಿ ರವಿವಾರ ರಾತ್ರಿ ಕೊಲೆ ಮಾಡಲಾಗಿದೆ.

ಯುವಕರ ಗುಂಪೊಂದು ಹರ್ಷನ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿದಾಗ ಹೊಟ್ಟೆ, ತಲೆ ಭಾಗಕ್ಕೆ ಗಂಭೀರ ಗಾಯವಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಹರ್ಷನನ್ನು ಕೂಡಲೇ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ ಚಿಕಿತ್ಸೆ ಫಲಿಸದೇ ಆತ ಮೃತಪಟ್ಟನು.

ಭಜರಂಗದಳ ಸಂಘಟನೆಯಲ್ಲಿ ಕಳೆದ ಐದು ವರ್ಷಗಳಿಂದ ಆ ಯುವಕ ತೊಡಗಿಸಿಕೊಂಡಿದ್ದ. ಆತನ ಹತ್ಯೆ ವಿಚಾರ ತಿಳಿಯುತ್ತಿದ್ದಂತೆ ಹಿಂದೂ ಸಂಘಟನೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹತ್ಯೆ ವಿಚಾರ ತಿಳಿಯುತ್ತಿದ್ದ ತಕ್ಷಣ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ. ನಗರದಾದ್ಯಂತ ಅಂಗಡಿ, ಹೊಟೇಲ್‌ಗಳನ್ನು ಬಂದ್ ಮಾಡಿಸಿ ನಗರದಾದ್ಯಂತ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.

ಪೂರ್ವ ವಲಯ ಐಜಿಪಿ ತ್ಯಾಗರಾಜನ್ ಅವರು ಶಿವಮೊಗ್ಗಕ್ಕೆ ಆಗಮಿಸಿದ್ದು ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮೀಪ್ರಸಾದ ಅವರಿಂದ ಪರಿಸ್ಥಿತಿ ಮತ್ತು ಬಂದೋಬಸ್ತ್ ಕುರಿತು ಮಾಹಿತಿ ಪಡೆದಿದ್ದಾರೆ.

ಶಿವಮೊಗ್ಗ ನಗರದಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆದೇಶ ಹೊರಡಿಸಿದ್ದಾರೆ. ಫೆ.23ರ ರಾತ್ರಿ 9 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಈ ಅವಧಿಯಲ್ಲಿ ಜನರು ಗುಂಪುಗೂಡಲು ಅವಕಾಶವಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ

You might also like
Leave a comment