This is the title of the web page

ನೂಪುರ ಶರ್ಮಾ ಬಂಧನಕ್ಕೆ ಆಗ್ರಹಿಸಿ ದೇಶಾದ್ಯಂತ ಮುಸ್ಲಿಮರ ಪ್ರತಿಭಟನೆ; ಕೆಲವೆಡೆ ಹಿಂಸಾಚಾರ

ಹೊಸದಿಲ್ಲಿ, ೧೦-: ಮೊಹಮ್ಮದ ಪೈಗಂಬರರ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ನೂಪುರ ಶರ್ಮಾ ಹಾಗೂ ನವೀನ ಜಿಂದಾಲ್ ಅವರನ್ನು ಬಂಧಿಸುವಂತೆ ಒತ್ತಾಯಿಸಿ ದೇಶಾದ್ಯಂತ ಶುಕ್ರವಾರ ಪ್ರತಿಭಟನೆಗಳು ನಡೆದಿದ್ದು ಕೆಲವೆಡೆ ಹಿಂಸಾಚಾರದ ವರದಿಗಳು ಬಂದಿವೆ.

ರಾಷ್ಟ್ರ ರಾಜಧಾನಿ ದೆಹಲಿ, ಉತ್ತರ ಪ್ರದೇಶ, ತೆಲಂಗಾಣಾ, ಝಾರಖಂಡ,  ಪಶ್ಚಿಮ ಬಂಗಾಲ, ಗುಜರಾತ, ಮಹಾರಾಷ್ಟ್ರ, ಪಂಜಾಬ, ಜಮ್ಮು ಕಾಶ್ಮೀರ, ಕರ್ನಾಟಕ ಸೇರಿದಂತೆ ದೇಶದ ಹಲವೆಡೆ ಇಂದು ಮುಸ್ಲಿಮರು ಭಾರಿ ಪ್ರತಿಭಟನೆ ನಡೆಸಿದರು.

ಕೆಲವೆಡೆ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಕಲ್ಲು ತೂರಾಟ, ಪೊಲೀಸರೊಂದಿಗೆ ಘರ್ಷಣೆ, ಗೋಳೀಬಾರ ನಡೆದಿದೆ.

ಜಾರ್ಖಂಡ್ ನ ರಾಂಚಿಯಲ್ಲೂ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಕಲ್ಲು ತೂರಾಟ, ಬೆಂಕಿ ಹಚ್ಚುವ ಘಟನೆಗಳು ನಡೆದಿವೆ.   ಜಿಲ್ಲಾ ಪೊಲೀಸ ವರಿಷ್ಠರಿಗೆ ಗಾಯವಾಗಿದೆ. ಉದ್ರಿಕ್ತರನ್ನು ನಿಯಂತ್ರಿಸಲು ಪೊಲೀಸರು ಗುಂಡು ಹಾರಿಸಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ನಗರದಲ್ಲಿ ಕರ್ಫ್ಯು ವಿಧಿಸಲಾಗಿದೆ.

ಉತ್ತರ ಪ್ರದೇಶದ ಪ್ರಯಾಗರಾಜನ ಅಟಲಾ ಪ್ರದೇಶದಲ್ಲಿ ಶುಕ್ರವಾರದ ಪ್ರಾರ್ಥನೆಯ ನಂತರ ನೂಪುರ ಶರ್ಮಾ ಬಂಧನಕ್ಕಾಗಿ ಪ್ರತಿಭಟನೆ ಆರಂಭವಾದವು. ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಘರ್ಷಣೆ ನಡೆದು ಕಲ್ಲು ತೂರಾಟ ನಡೆದಿದೆ. ಎಡಿಜಿಪಿ ಕಾರಿನ ಮೇಲೆ ಕಲ್ಲು ತೂರಾಟ ನಡೆದಿದ್ದು, ಕಾರಿನ ಗಾಜುಗಳು ಪುಡಿಪುಡಿಯಾಗಿವೆ.

ಪಶ್ಚಿಮ ಬಂಗಾಳದಲ್ಲೂ ಬೃಹತ್ ಪ್ರತಿಭಟನೆ ನಡೆಸಲಾಗಿದೆ. ಕೋಲ್ಕತ್ತಾದ ಪಾರ್ಕ ಸರ್ಕಸ್ ನಲ್ಲಿ ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಮುಸ್ಲಿಮರು ನೂಪುರ ಶರ್ಮಾ ಹಾಗೂ ನವೀನ ಜಿಂದಾಲ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಹೌರಾದಲ್ಲಿಯೂ ಪ್ರತಿಭಟನೆ ನಡೆಯಿತು.

ದೆಹಲಿಯ ಜಾಮಾ ಮಸೀದಿಯ ಮೆಟ್ಟಿಲುಗಳ ಮೇಲೆ ಭಿತ್ತಿಪತ್ರ ಹಿಡಿದು ಕುಳಿತಿದ್ದ ನೂರಾರು ಪ್ರತಿಭಟನಾಕಾರರು ಪ್ರವಾದಿ ಮೊಹಮ್ಮದ ಅವರ ಕುರಿತ ಅವಹೇಳನಾಕಾರಿ ಹೇಳಿಕೆಯನ್ನು ಖಂಡಿಸಿದರು.

ಪಂಜಾಬಿನ ಲುಧಿಯಾನಾದ ಜಾಮಾ ಮಸೀದಿ ಕರೆ ನಂತರ ಪಂಜಾಬಿನಾದ್ಯಂತ ಪ್ರತಿಭಟನೆಗಳು ನಡೆದಿವೆ.

ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ಮುಸ್ಲಿಮರು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಬಿಜೆಪಿಯಿಂದ ಅಮಾನತುಗೊಂಡಿರುವ ನೂಪುರ ಶರ್ಮಾ ಅವರನ್ನು ಬಂಧಿಸುವಂತೆ ಆಗ್ರಹಿಸಿ ಕಲಬುರಗಿಯ ಮುಸ್ಲಿಮ ಚೌಕದಲ್ಲಿ ಭಾರೀ ಪ್ರತಿಭಟನೆ ನಡೆಸಲಾಯಿತು.

You might also like
Leave a comment