This is the title of the web page

ದಕ್ಷಿಣ ಆಫ್ರಿಕಾದಿಂದ ಬಂದ ಇಬ್ಬರಲ್ಲಿ ಹೊಸ ಕೊರೋನಾ ಸೋಂಕು

ಬೆಂಗಳೂರು, 29- ದಕ್ಷಿಣ ಆಫ್ರಿಕಾದಿಂದ ಬಂದಿರುವ ಇಬ್ಬರು ವ್ಯಕ್ತಿಗಳಲ್ಲಿ ಕೊರೋನಾ ವೈರಸ್ ನ ಸುಧಾರಿತ ತಳಿಯ ಸೋಂಕು ದೃಢಪಟ್ಟಿದ್ದು, ಅವರಲ್ಲಿ ಒಬ್ಬರಲ್ಲಿರುವ ಸೋಂಕಿನ ತಳಿಯ ಕುರಿತು ಶಂಕೆ ಇದೆ. ಮಾದರಿಯನ್ನು ಹೆಚ್ಚಿನ ಪರೀಕ್ಷೆಗಾಗಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಗೆ (ಐಸಿಎಂಆರ್‌) ರವಾನಿಸಲಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ‌ ತಿಳಿಸಿದರು.

ಸುದ್ದಿಗಾರರ ಜತೆ ಸೋಮವಾರ ಮಾತನಾಡಿದ ಅವರು, ಇಬ್ಬರ ಮಾದರಿಗಳನ್ನೂ ಪರೀಕ್ಷಿಸಲಾಗಿದೆ. 63 ವರ್ಷದ ವ್ಯಕ್ತಿಯಲ್ಲಿ ಪತ್ತೆಯಾಗಿರುವ ವೈರಾಣುವಿನ ಪರೀಕ್ಷಾ ವರದಿ ಡೆಲ್ಟಾ ತಳಿಗಿಂತ ಭಿನ್ನವಾಗಿರುವುದು ಕಂಡುಬಂದಿದೆ. ಅವರಲ್ಲಿ ಒಮಿಕ್ರಾನ್‌ ತಳಿಯ ವೈರಾಣು ಇರುವ ಬಗ್ಗೆ ಖಚಿತವಾಗಿಲ್ಲ. ಈ ಕುರಿತು ಹೆಚ್ಚಿನ ಅಧ್ಯಯನಕ್ಕಾಗಿ ಮಾದರಿಯನ್ನು ಐಸಿಎಂಆರ್‌ಗೆ ಕಳುಹಿಸಲಾಗಿದೆ ಎಂದರು.

ಇಂದು ಸೋಮವಾರ ಸಂಜೆಯ ವೇಳೆಗೆ ಐಸಿಎಂಆರ್‌ ವರದಿ ಲಭ್ಯವಾಗುವ ನಿರೀಕ್ಷೆ ಇದೆ. ಆ ಬಳಿಕ ಎಲ್ಲವೂ ಸ್ಪಷ್ಟವಾಗಲಿದೆ ಎಂದು ಹೇಳಿದರು.

ಡೆಲ್ಟಾ ತಳಿಯ ಕೋವಿಡ್‌ ವೈರಾಣು ಒಂಭತ್ತು ತಿಂಗಳಿನಿಂದಲೂ ಪ್ರಸರಣದಲ್ಲಿದೆ. ಅದರಿಂದ ಹೆಚ್ಚಿನ ಸಾವುಗಳು ಸಂಭವಿಸಿವೆ. ಆಸ್ಪತ್ರೆಗೆ ದಾಖಲಾಗಿ, ತೀವ್ರನಿಗಾ ಘಟಕಗಳಲ್ಲಿ ಚಿಕಿತ್ಸೆ ಪಡೆದಿರುವವರ ಸಂಖ್ಯೆಯೂ ದೊಡ್ಡ ಪ್ರಮಾಣದಲ್ಲಿದೆ. ಒಮಿಕ್ರಾನ್‌ ತಳಿಯ ವೈರಾಣು ಡೆಲ್ಟಾಗಿಂತ ಸೌಮ್ಯವಾದುದು ಎಂಬ ವರದಿಗಳಿವೆ. ಆದರೂ, ಸಾಕಷ್ಟು ಮುನ್ನೆಚ್ಚರಿಕೆ ಅಗತ್ಯ ಎಂದರು.

You might also like
Leave a comment