This is the title of the web page

ಕೊರೋನಾ ಕುರಿತು ಹೊಸ ಸಂಶೋಧನೆ

ಲಂಡನ್, 13- “ಕೊರೊನಾ ವೈರಾಣು ಗಾಳಿಯಲ್ಲಿ 20 ನಿಮಿಷಗಳಿದ್ದರೆ ತನ್ನ 90% ಸಾಮರ್ಥ್ಯ‌ ಕಳೆದುಕೊಳ್ಳುತ್ತದೆ. ಸೀನು, ಕೆಮ್ಮು, ಉಗುಳಿನಿಂದ ಗಾಳಿಗೆ ಹಾರಿದ ವೈರಾಣು 5 ನಿಮಿಷಗಳ ಒಳಗಾಗಿ ವ್ಯಕ್ತಿಯೊಬ್ಬರ ದೇಹ ಹೊಕ್ಕದಿದ್ದರೆ ಸೋಂಕು ತೀವ್ರವಾಗಿಸುವ ಸಾಮರ್ಥ್ಯ‌ ಕುಂಠಿತವಾಗುತ್ತದೆ ಎಂದು ವಿಜ್ಞಾನಿಗಳು ಸಂಶೋಧಿಸಿ ಪತ್ತೆ ಮಾಡಿದ್ದಾರೆ.

ಬ್ರಿಟನ್ನಿನ ಬ್ರಿಸ್ಟಲ್‌ ವಿಶ್ವವಿದ್ಯಾಲಯದ ಏರೊಸಾಲ್‌ ಸಂಶೋಧನಾ ಕೇಂದ್ರದಲ್ಲಿ ನಡೆದ ಮಹತ್ವದ ಸಂಶೋಧನೆಯ ವರದಿಯಲ್ಲಿ ಕೊರೊನಾ ವೈರಾಣುವಿನ ವರ್ತನೆಗಳ ಕುರಿತಾದ ವಿವರಗಳು ಬಹಿರಂಗಗೊಂಡಿದೆ.

ಶ್ವಾಸಕೋಶದಲ್ಲಿ ನೀರಿನಂಶದ ವಾತಾವರಣದಲ್ಲಿ ಜೀವಿಸುವ ವೈರಾಣು, ವ್ಯಕ್ತಿಯ ದೇಹದಿಂದ ಹೊರಕ್ಕೆ ಬಿದ್ದ ಕೂಡಲೇ ಇಂಗಾಲದ ಡೈ ಆಕ್ಸೈಡ್‌ನ ಪ್ರಭಾವದಿಂದ ತನ್ನ ಸಾಮರ್ಥ್ಯ‌ ಕಳೆದುಕೊಳ್ಳುತ್ತಾ ಹೋಗುತ್ತದೆ. ವಾತಾವರಣದಲ್ಲಿ ತೇವಾಂಶ ಹೆಚ್ಚಿದಷ್ಟೂ ವೈರಾಣು ಸಾಮರ್ಥ್ಯ‌ ಕುಗ್ಗುವುದು ವೇಗವಾಗಲಿದೆ. 90% ನೀರಿನಂಶ ಇರುವ ವಾತಾವರಣದಲ್ಲಿ 5 ನಿಮಿಷಗಳಲ್ಲಿ ಕೊರೊನಾ ವೈರಾಣುವು ಶೇ.52ರಷ್ಟು ಸೋಂಕು ಉಂಟು ಮಾಡುವ ಸಾಮರ್ಥ್ಯ‌ ಕಳೆದುಕೊಳ್ಳುತ್ತದೆ.

ಅಲ್ಲಿಗೆ ಬೇಸಿಗೆ ಅಥವಾ ಬಿಸಿಯಾದ ವಾತಾವರಣದಲ್ಲಿ ವೈರಾಣು ಸೋಂಕು ಶೀಘ್ರವಾಗಿ ಪ್ರಸರಿಸುತ್ತದೆ ಎಂಬ ವಾದ ತಪ್ಪಾಗುತ್ತದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ಸೋಂಕಿತರಿಂದ ಆದಷ್ಟು ಅಂತರ ಕಾಯ್ದುಕೊಂಡಷ್ಟು ಸುತ್ತಲಿನವರು ಕೊರೊನಾದಿಂದ ಬಚಾವಾಗಬಹುದು. ದೂರ ಹೆಚ್ಚಿದಷ್ಟು ವೈರಾಣು ಗಾಳಿಯಲ್ಲಿ ಪ್ರಸರಿಸಿಕೊಂಡು ಬರಲು ಹೆಚ್ಚು ಸಮಯ ತಗುಲಲಿದೆ. ಇದರಿಂದಾಗಿ ವೈರಾಣುವಿನ ಸೋಂಕು ತೀವ್ರಗೊಳ್ಳುವ ಸಾಮರ್ಥ್ಯ‌ ಕುಂಠಿತವಾಗಲಿದೆ ಎಂದು ವಿಜ್ಞಾನಿ ಪ್ರೊ. ಜೊನಾಥನ್‌ ರೀಡ್‌ ಹೇಳಿದ್ದಾರೆ.

You might also like
Leave a comment