ಹೊಸದಿಲ್ಲಿ, ಮೇ 25 : ಪ್ರಧಾನಿ ನರೇಂದ್ರ ಮೋದಿ ಅವರು ನಾರ್ವೆ ಮತ್ತು ನೆದರ್ಲ್ಯಾಂಡ್ಸ್‌ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ವಿದೇಶಿ ಪತ್ರಕರ್ತರು ಮತ್ತು ಭಾರತೀಯ ಅಧಿಕಾರಿಗಳ ನಡುವೆ ನಡೆದ ವಾಗ್ವಾದವನ್ನು ಮುಜುಗರಕರ ಘಟನೆ ಎಂದು ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ತೀವ್ರವಾಗಿ ಟೀಕಿಸಿದೆ. ಮಾಧ್ಯಮವನ್ನು ವೈರಿಯಂತೆ ಪರಿಗಣಿಸುವ ಧೋರಣೆಯನ್ನು ತಕ್ಷಣ ನಿಲ್ಲಿಸುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿರುವ ಎಡಿಟರ್ಸ್ ಗಿಲ್ಡ್, ಕಳೆದ ದಶಕಕ್ಕೂ ಹೆಚ್ಚು ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಒಂದೇ ಒಂದು ಬಹಿರಂಗ ಪತ್ರಿಕಾಗೋಷ್ಠಿ ನಡೆಸದಿರುವುದು ವಿಷಾದನೀಯ ಸಂಗತಿ ಎಂದು ಹೇಳಿದೆ.
ಈ ಕುರಿತು ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ, ನಾರ್ವೆ ಮತ್ತು ನೆದರ್ಲ್ಯಾಂಡ್ಸ್ ಪ್ರವಾಸದ ವೇಳೆ ಭಾರತದ ಅಧಿಕಾರಿಗಳು ಹಾಗೂ ಯುರೋಪಿಯನ್ ಪತ್ರಕರ್ತರ ನಡುವೆ ನಡೆದ ಜಟಾಪಟಿ ಬಗ್ಗೆ ಕಳವಳ ವ್ಯಕ್ತಪಡಿಸಿರುವುದಾಗಿ ಎಡಿಟರ್ಸ್ ಗಿಲ್ಡ್ ತಿಳಿಸಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾಧ್ಯಮದ ಪ್ರಶ್ನೆಗಳಿಗೆ ಉತ್ತರಿಸುವುದು ಆಡಳಿತದ ಹೊಣೆಗಾರಿಕೆಯ ಭಾಗವಾಗಿದ್ದು, ಪ್ರಶ್ನೆಗಳನ್ನು ತಪ್ಪಿಸುವ ಅಥವಾ ಪತ್ರಕರ್ತರನ್ನು ಎದುರಾಳಿಗಳಂತೆ ಕಾಣುವ ಮನೋಭಾವ ಆರೋಗ್ಯಕರ ಪ್ರಜಾಪ್ರಭುತ್ವದ ಲಕ್ಷಣವಲ್ಲ ಎಂದು ಹೇಳಿದೆ.
ನಾರ್ವೆಯ ಓಸ್ಲೋದಲ್ಲಿ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಸ್ಥಳೀಯ ಪತ್ರಕರ್ತರ ಪ್ರಶ್ನೆಗಳಿಗೆ ಪ್ರಧಾನಿ ಮೋದಿ ಉತ್ತರಿಸದೇ ನಿರ್ಗಮಿಸಿದ್ದೇ ವಿವಾದಕ್ಕೆ ಕಾರಣವಾಯಿತು ಎಂದು ಹೇಳಲಾಗಿದೆ. ವಿಶೇಷವಾಗಿ ನಾರ್ವೆಯ ಪತ್ರಕರ್ತೆ ಹೆಲ್ಲೆ ಲಿಂಗ್ ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯ, ಅಲ್ಪಸಂಖ್ಯಾತ ಸಮುದಾಯಗಳ ಹಕ್ಕುಗಳು ಹಾಗೂ ಪ್ರಜಾಪ್ರಭುತ್ವದ ಸ್ಥಿತಿ ಕುರಿತು ಪ್ರಶ್ನೆ ಕೇಳಿದ ನಂತರ ಭಾರತೀಯ ಅಧಿಕಾರಿಗಳು ಮತ್ತು ಯುರೋಪಿಯನ್ ಪತ್ರಕರ್ತರ ನಡುವೆ ವಾಗ್ವಾದ ಉಂಟಾಗಿತ್ತು.
ಈ ವೇಳೆ ವಿದೇಶಾಂಗ ಸಚಿವಾಲಯದ ಪಶ್ಚಿಮ ವಿಭಾಗದ ಕಾರ್ಯದರ್ಶಿ ಸಿಬಿ ಜಾರ್ಜ್ ಪ್ರತಿಕ್ರಿಯಿಸಿ, ಇಂತಹ ಪ್ರಶ್ನೆಗಳು ಭಾರತದ ಬಗ್ಗೆ ಇರುವ ತಿಳುವಳಿಕೆಯ ಕೊರತೆಯಿಂದ ಉದ್ಭವಿಸುತ್ತವೆ ಎಂದು ಹೇಳಿದ್ದರು. ಕೆಲವು ಸ್ವಯಂಸೇವಾ ಸಂಸ್ಥೆಗಳು ಪ್ರಕಟಿಸುವ ವರದಿಗಳನ್ನು ಓದಿ ಬಳಿಕ ಇಂತಹ ಪ್ರಶ್ನೆಗಳನ್ನು ಕೇಳಲಾಗುತ್ತಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದರು. ಈ ಪ್ರತಿಕ್ರಿಯೆ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿತ್ತು.
ಭಾರತ–ನಾರ್ಡಿಕ್ ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಓಸ್ಲೋಗೆ ಭೇಟಿ ನೀಡಿದ್ದರು. ಬಳಿಕ ನೆದರ್ಲ್ಯಾಂಡ್ಸ್ ಭೇಟಿಯ ಸಂದರ್ಭದಲ್ಲೂ ಮಾಧ್ಯಮ ಸಂವಾದದ ವಿಚಾರ ಮತ್ತೆ ಚರ್ಚೆಗೆ ಗ್ರಾಸವಾಗಿತ್ತು. ಪ್ರಧಾನಿ ಯಾವುದೇ ಪ್ರಶ್ನೆಗಳಿಗೆ ಉತ್ತರಿಸದಿರುವುದರ ವಿರುದ್ಧ ಯುರೋಪಿಯನ್ ಮಾಧ್ಯಮ ಪ್ರತಿನಿಧಿಗಳು ಅಸಮಾಧಾನ ವ್ಯಕ್ತಪಡಿಸಿದ್ದರೆಂದು ವರದಿಯಾಗಿದೆ.
2014ರಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಪ್ರಧಾನಿ ಯಾವುದೇ ಮುಕ್ತ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿಲ್ಲ ಎಂಬ ವಿಚಾರವನ್ನು ಎಡಿಟರ್ಸ್ ಗಿಲ್ಡ್ ವಿಶೇಷವಾಗಿ ಉಲ್ಲೇಖಿಸಿದೆ. ಚುನಾವಣೆ ಸಂದರ್ಭಗಳಲ್ಲಿ ಕೆಲವು ಆಯ್ದ ಸಂದರ್ಶನಗಳನ್ನು ನೀಡಿದ್ದರೂ ಸ್ವತಂತ್ರ ಪತ್ರಕರ್ತರು ನೇರವಾಗಿ ಪ್ರಶ್ನೆ ಕೇಳುವ ಮುಕ್ತ ಪತ್ರಿಕಾಗೋಷ್ಠಿ ನಡೆಸದಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಒಳ್ಳೆಯ ಬೆಳವಣಿಗೆಯಲ್ಲ ಎಂದು ಹೇಳಿದೆ.
ಅಧಿಕಾರದಲ್ಲಿರುವವರನ್ನು ಹೊಣೆಗಾರರನ್ನಾಗಿ ಮಾಡುವ ಜವಾಬ್ದಾರಿಯನ್ನು ಮಾಧ್ಯಮ ನಿರ್ವಹಿಸುತ್ತದೆ. ಆದ್ದರಿಂದ ಪ್ರಶ್ನೆ ಕೇಳುವ ಪತ್ರಕರ್ತರನ್ನು ಅನುಮಾನದಿಂದ ನೋಡುವ ಬದಲು, ಸರ್ಕಾರ ಹೆಚ್ಚು ಪಾರದರ್ಶಕವಾಗಿ ನಡೆದುಕೊಳ್ಳಬೇಕು ಎಂದು ಎಡಿಟರ್ಸ್ ಗಿಲ್ಡ್ ಒತ್ತಾಯಿಸಿದೆ.
ಈ ಸಂಬಂಧ ಎಡಿಟರ್ಸ್ ಗಿಲ್ಡ್ ತನ್ನ ಸಾಮಾಜಿಕ ಜಾಲತಾಣ ಖಾತೆಯಲ್ಲೂ ಹೇಳಿಕೆ ಪ್ರಕಟಿಸಿದ್ದು, ಸರ್ಕಾರದ ಮಾಧ್ಯಮ ಪ್ರಶ್ನೆಗಳ ಕುರಿತು ಇರುವ ಅಸಹಿಷ್ಣು ಧೋರಣೆ ಬಗ್ಗೆ ಆತಂಕ ವ್ಯಕ್ತಪಡಿಸಿದೆ. ಪ್ರಧಾನಿ ಪತ್ರಿಕಾಗೋಷ್ಠಿ ತಪ್ಪಿಸುವ ವಿಷಯ ಮತ್ತೆ ದೇಶದ ರಾಜಕೀಯ ಹಾಗೂ ಮಾಧ್ಯಮ ವಲಯಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.