ePaper
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಹಲ್ಲೆಗೆ ಯತ್ನಿಸಿದ ಅತ್ಯಾಚಾರ ಆರೋಪಿಯ ಕಾಲಿಗೆ ಗುಂಡು, ೨ ಪೋಲೀಸರಿಗೆ ಗಾಯ

ಕಾರವಾರ : ದಾಂಡೇಲಿ ನಗರ ವ್ಯಾಪ್ತಿಯಲ್ಲಿ 60 ವರ್ಷದ ವೃದ್ಧೆಯ ಮೇಲೆ ನಡೆದ ಅತ್ಯಾಚಾರ ಹಾಗೂ ದರೋಡೆ ಪ್ರಕರಣದ ಆರೋಪಿಯ ಕಾಲಿಗೆ ಗುಂಡು ಹಾರಿಸಿ ಪೊಲೀಸರು ಬಂಧಿಸಿದ್ದಾರೆ.

ಆರೋಪಿಯನ್ನು ಬಂಧಿಸಲು ತೆರಳಿದ ಪೊಲೀಸರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ, ತಪ್ಪಿಸಿಕೊಳ್ಳಲು ಯತ್ನಿಸಿದಾಗ ಆರೋಪಿಯ ಕಾಲಿಗೆ ಗುಂಡು ಹಾರಿಸಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜೂನ್ 12ರಂದು ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ಐಪಿಎಂ ಅರಣ್ಯ ಪ್ರದೇಶದಲ್ಲಿ ವೃದ್ಧೆಯ ಮೇಲೆ ಅತ್ಯಾಚಾರ ಹಾಗೂ ದರೋಡೆ ನಡೆದಿರುವ ಬಗ್ಗೆ ದಾಂಡೇಲಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತಲೆಮರೆಸಿಕೊಂಡಿದ್ದ ಆರೋಪಿ ಫೈರೋಜ ಯಾಸೀನ ಯರಗಟ್ಟಿ (23 ) ಶನಿವಾರ ದಾಂಡೇಲಿ ಗ್ರಾಮೀಣ ಠಾಣೆ ವ್ಯಾಪ್ತಿಯ ಕುಳಗಿ ರಸ್ತೆಯ ಅರಣ್ಯ ಪ್ರದೇಶದಲ್ಲಿ ಇರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಮಾಹಿತಿಯ ಆಧಾರದ ಮೇಲೆ ದಾಂಡೇಲಿ ನಗರ ಠಾಣೆ ಪಿಎಸ್​​ಐ ಕಿರಣ ಪಾಟೀಲ ಮತ್ತು ಸಿಬ್ಬಂದಿ ಆರೋಪಿಯನ್ನು ಬಂಧಿಸಲು ತೆರಳಿದ್ದರು.

ಆದರೆ ಈ ವೇಳೆ ಆರೋಪಿ ಫೈರೋಜ ಕಲ್ಲು ಮತ್ತು ಚಾಕುವಿನಿಂದ ಪಿಎಸ್​ಐ ಮತ್ತು ಪೊಲೀಸ್‌ ಸಿಬ್ಬಂದಿಯ ಮೇಲೆಯೇ ದಾಳಿ ನಡೆಸಿ ಹಲ್ಲೆಗೈದು ಕೊಲೆಗೆ ಯತ್ನಿಸಿದ್ದಾನೆ. ಆಗ ಪಿಎಸ್​​ಐ ಕಿರಣ ಪಾಟೀಲ ಅವರು ತಮ್ಮ ಸರ್ವಿಸ್ ರಿವಾಲ್ವರನಿಂದ ಎರಡು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಸೂಚಿಸಿದ್ದಾರೆ. ಆದರೂ ಆರೋಪಿ ಹಲ್ಲೆಗೆ ಮುಂದಾದಾಗ ಆತನ ಎಡಗಾಲಿಗೆ ಗುಂಡು ಹಾರಿಸಿ ಬಂಧಿಸಲಾಗಿದೆ ಎಂದು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ ಎಂ. ಮಾಹಿತಿ ನೀಡಿದ್ದಾರೆ.

ಘಟನೆಯಲ್ಲಿ ಗಾಯಗೊಂಡ ಪಿಎಸ್​​ಐ ಕಿರಣ ಪಾಟೀಲ ಮತ್ತು ಸಿಬ್ಬಂದಿ ಕೃಷ್ಣಪ್ಪ ಬೆಳ್ಳವರಿ, ಇಮ್ರಾನ ಕಂಬಾರಗಣವಿ ಅವರು ದಾಂಡೇಲಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗುಂಡೇಟು ತಿಂದ ಆರೋಪಿ ಫೈರೋಜನನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ದಾಂಡೇಲಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.