LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
National News

ದೇಶಾದ್ಯಂತ ಟೀಕೆಗೆ ಗುರಿಯಾದ ಝೀ ಗ್ರೂಪ್ ಮುಖ್ಯಸ್ಥನ ₹22,000 ಕೋಟಿ ಸಾಲ ಮನ್ನಾ ಆದೇಶಕ್ಕೆ ತಡೆ

ಹೊಸದಿಲ್ಲಿ: ಸುಭಾಷ ಚಂದ್ರ ಅವರಿಗೆ ನೀಡಲಾಗಿದ್ದ ಭಾರಿ ಸಾಲಮನ್ನಾ ರೀತಿಯ ನಿರಾಳತೆ ದೇಶಾದ್ಯಂತ ತೀವ್ರ ಟೀಕೆಗೆ ಗುರಿಯಾಗಿತ್ತು. ₹22,000 ಕೋಟಿಗೂ ಅಧಿಕ ಸಾಲಬಾಕಿಗೆ ಕೇವಲ ₹6.5 ಕೋಟಿ ಪಾವತಿಸಿ ವೈಯಕ್ತಿಕ ಗ್ಯಾರಂಟಿ ಹೊಣೆಗಾರಿಕೆಯಿಂದ ಹೊರಬರಲು ಅವಕಾಶ ನೀಡಿರುವುದು ನ್ಯಾಯಸಮ್ಮತವೇ ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಹಾಗೂ ವಿವಿಧ ವಲಯಗಳಿಂದ ವ್ಯಕ್ತವಾಗಿದ್ದವು. ಈ ಹಿನ್ನೆಲೆಯಲ್ಲಿ, ಕೇವಲ ₹6.5 ಕೋಟಿ ಪಾವತಿಸಿ ದಿವಾಳಿತನ ಪ್ರಕ್ರಿಯೆಯಿಂದ ಮುಕ್ತಿ ಪಡೆಯಲು ಅವಕಾಶ ನೀಡಿದ್ದ ಆಗಸ್ಟ್‌ 25ರ ಆದೇಶಕ್ಕೆ ರಾಷ್ಟ್ರೀಯ ಕಂಪೆನಿ ಕಾನೂನು ನ್ಯಾಯಮಂಡಳಿಯ (ಎನ್‌ಸಿಎಲ್‌ಟಿ) ಐವರು ಸದಸ್ಯರ ವಿಶೇಷ ಪೀಠ ಮಂಗಳವಾರ ತಡೆ ನೀಡಿದೆ.

ಝೀ ಗ್ರೂಪ್ ಸ್ಥಾಪಕ ಹಾಗೂ ಮಾಜಿ ರಾಜ್ಯಸಭಾ ಸದಸ್ಯ ಸುಭಾಷ ಚಂದ್ರ ಅವರಿಗೆ ಝೀ ಗ್ರೂಪ್ ಕಂಪೆನಿಗಳ ಸಾಲಕ್ಕೆ ನೀಡಿದ್ದ ವೈಯಕ್ತಿಕ ಗ್ಯಾರಂಟಿಗಳನ್ನು ಕೇವಲ ₹6.5 ಕೋಟಿ ಪಾವತಿಸಿ ಇತ್ಯರ್ಥಗೊಳಿಸಲು ಅನುಮತಿ ನೀಡಿದ್ದ ಏಕಸದಸ್ಯ ಪೀಠದ ಆದೇಶ ಭಾರಿ ವಿವಾದಕ್ಕೆ ಕಾರಣವಾಗಿತ್ತು.

ಇಬ್ಬರು ಸದಸ್ಯರ ಪೀಠದಲ್ಲಿ ಭಿನ್ನಾಭಿಪ್ರಾಯ ಮೂಡಿದ ಹಿನ್ನೆಲೆಯಲ್ಲಿ, ನಿಲೇಶ್‌ ಶರ್ಮಾ ಅವರ ಏಕಸದಸ್ಯ ಪೀಠವು ಟೈ-ಬ್ರೇಕರ್ ಆಗಿ ಆಗಸ್ಟ್‌ 25ರಂದು ಸುಭಾಷ ಚಂದ್ರ ಅವರಿಗೆ ನಿರಾಳತೆ ನೀಡುವ ಆದೇಶ ಹೊರಡಿಸಿತ್ತು. ಇದೀಗ ಐವರು ಸದಸ್ಯರ ವಿಶೇಷ ಪೀಠವು ಆ ಆದೇಶವನ್ನು ತಡೆಹಿಡಿದಿದೆ.

ಆಸ್ತಿ ಮಾರಾಟ, ವರ್ಗಾವಣೆಗೆ ನಿರ್ಬಂಧ

ವಿವಾದಕ್ಕೆ ಸಂಬಂಧಿಸಿದ ಎಲ್ಲರಿಗೂ ನೋಟಿಸ್ ಜಾರಿಗೊಳಿಸಿರುವ ಐವರು ಸದಸ್ಯರ ವಿಶೇಷ ಪೀಠವು, ಮುಂದಿನ ಆದೇಶದವರೆಗೆ ಸುಭಾಷ ಚಂದ್ರ ಅವರು ತಮ್ಮ ಯಾವುದೇ ಆಸ್ತಿಗಳನ್ನು ನೇರವಾಗಿ ಅಥವಾ ಪರೋಕ್ಷವಾಗಿ ಮಾರಾಟ ಮಾಡಲು ಅಥವಾ ವರ್ಗಾವಣೆ ಮಾಡಲು ನಿರ್ಬಂಧ ವಿಧಿಸಿದೆ.

ತಾವು ಯಾವುದೇ ಬ್ಯಾಂಕ್‌ಗಳಿಂದ ವೈಯಕ್ತಿಕವಾಗಿ ₹22,000 ಕೋಟಿ ಸಾಲ ಪಡೆದಿಲ್ಲ. ಬದಲಾಗಿ, ಗ್ರೂಪ್‌ನ ವಿವಿಧ ಕಂಪೆನಿಗಳು ಪಡೆದ ಸಾಲಕ್ಕೆ ವೈಯಕ್ತಿಕ ಗ್ಯಾರಂಟಿ ಮಾತ್ರ ನೀಡಿದ್ದೆ ಎಂದು ಸುಭಾಷ ಚಂದ್ರ ಪ್ರತಿಪಾದಿಸಿದ್ದರು.

ತಮ್ಮ ವಿರುದ್ಧದ ಈ ಬೆಳವಣಿಗೆಗೆ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಕಾರಣ ಎಂದು ಅವರು ಆರೋಪಿಸಿದ್ದರು.

ಸಾಲದಾತರ ಕುರಿತೂ ವಿವಾದ

ಸಾಲ ಮರುಪಾವತಿಯನ್ನು ಸ್ವೀಕರಿಸಲು ಒಪ್ಪಿದ ಕೆಲವು ಸಾಲದಾತರು ಸುಭಾಷ ಚಂದ್ರ ಅವರ ನಿಕಟ ಸಂಬಂಧಿಕರಿಗೆ ಸೇರಿದ ಕಂಪೆನಿಗಳಾಗಿವೆ ಎಂಬ ಆರೋಪವೂ ವಿವಾದವನ್ನು ಮತ್ತಷ್ಟು ತೀವ್ರಗೊಳಿಸಿತ್ತು.

ಪ್ರಕರಣದಲ್ಲಿ ಯಾವುದೇ ಸ್ಪಷ್ಟ ಬಹುಮತದ ತೀರ್ಪು ಹೊರಬಾರದ ಹಿನ್ನೆಲೆಯಲ್ಲಿ, ಎನ್‌ಸಿಎಲ್‌ಟಿ ಅಧ್ಯಕ್ಷ ನ್ಯಾಯಮೂರ್ತಿ ಅನುಪಿಂದರ್ ಸಿಂಗ್ ಗ್ರೆವಾಲ್ ಅವರ ನಿರ್ದೇಶನದ ಮೇರೆಗೆ ಎನ್‌ಸಿಎಲ್‌ಟಿ ಇತಿಹಾಸದಲ್ಲೇ ಮೊದಲ ಬಾರಿಗೆ ಐವರು ಸದಸ್ಯರ ವಿಶೇಷ ಪೀಠ ರಚಿಸಿ ಪ್ರಕರಣದ ವಿಚಾರಣೆಯನ್ನು ಹೊಸದಾಗಿ ಕೈಗೆತ್ತಿಕೊಳ್ಳಲಾಗಿದೆ.

ಈ ಹಿಂದೆ ಮೂವರು ಸದಸ್ಯರ ಅಭಿಪ್ರಾಯಗಳಲ್ಲಿ ಒಬ್ಬರು ಕೆಲವು ನಿಬಂಧನೆಗಳೊಂದಿಗೆ ಪ್ರಸ್ತಾವನೆಗೆ ಒಪ್ಪಿಗೆ ಸೂಚಿಸಿದ್ದರೆ, ಮತ್ತೊಬ್ಬರು ಅದನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದರು. ಮೂರನೆಯವರು ಭಿನ್ನವಾದ ಷರತ್ತುಗಳೊಂದಿಗೆ ಅನುಮೋದಿಸಿದ್ದರು. ಹೀಗಾಗಿ ಸ್ಪಷ್ಟ ಬಹುಮತದ ತೀರ್ಪು ಹೊರಬಂದಿರಲಿಲ್ಲ ಎಂದು ಎನ್‌ಸಿಎಲ್‌ಟಿ ತಿಳಿಸಿದೆ.

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST