LIVE TV LocalCrimeNationalInternationalPoliticsBusinessFinancialEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ರಾಜ್ಯದ 226 ತಾಲೂಕುಗಳು ಬರಪೀಡಿತ: ₹70 ಸಾವಿರ ಕೋಟಿ ನಷ್ಟದ ಆತಂಕ

ಬೆಂಗಳೂರು, ಅ. 15 (ಸಮದರ್ಶಿ ಸುದ್ದಿ): ರಾಜ್ಯದಲ್ಲಿ ಹೊಸದಾಗಿ 9 ತಾಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸಲಾಗಿದ್ದು, ಒಟ್ಟು 226 ತಾಲೂಕುಗಳು ಬರಪೀಡಿತ ಪಟ್ಟಿಗೆ ಸೇರ್ಪಡೆಯಾಗಿವೆ. ಬರದಿಂದ ₹60 ಸಾವಿರ ಕೋಟಿಯಿಂದ ₹70 ಸಾವಿರ ಕೋಟಿವರೆಗೆ ನಷ್ಟ ಸಂಭವಿಸಿರುವ ಸಾಧ್ಯತೆಯಿದ್ದು, ಕೇಂದ್ರ ಸರ್ಕಾರದಿಂದ ₹18 ಸಾವಿರ ಕೋಟಿಯಿಂದ ₹20 ಸಾವಿರ ಕೋಟಿವರೆಗೆ ಪರಿಹಾರ ಕೋರಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ.

ಗುರುವಾರ ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ. ಜಿ. ಪರಮೇಶ್ವರ, ಈ ಹಿಂದೆ 217 ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಲಾಗಿತ್ತು. ಇದೀಗ ಮತ್ತೆ 9 ತಾಲೂಕುಗಳನ್ನು ಸೇರಿಸಲಾಗಿದೆ ಎಂದು ತಿಳಿಸಿದರು.

ಉಳಿದ ತಾಲೂಕುಗಳಲ್ಲಿಯೂ ಬರ ಪರಿಸ್ಥಿತಿ ಪರಿಶೀಲಿಸಲಾಗುತ್ತಿದೆ. ಟ್ರಿಗರ್-1 ಮಾನದಂಡಗಳಡಿ ಅರ್ಹತೆ ಪಡೆದ ತಾಲೂಕುಗಳಲ್ಲಿ ಸ್ಥಳ ಪರಿಶೀಲನೆ ನಡೆಸಲಾಗುವುದು. ಅರ್ಹತೆ ಕಂಡುಬಂದರೆ ಮತ್ತಷ್ಟು ತಾಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರಿಸಲಾಗುವುದು. ಇಲ್ಲವಾದಲ್ಲಿ 226 ತಾಲೂಕುಗಳ ಪಟ್ಟಿಯೇ ಅಂತಿಮವಾಗಲಿದೆ ಎಂದರು.

ಬರದಿಂದ ಸಂಭವಿಸಿರುವ ನಷ್ಟದ ಕುರಿತು ಅಂತಿಮ ಮನವಿಪತ್ರ ಸಿದ್ಧಪಡಿಸಲಾಗುತ್ತಿದ್ದು, ಒಂದೆರಡು ದಿನಗಳಲ್ಲಿ ಪೂರ್ಣಗೊಳ್ಳಲಿದೆ. ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲು ಸರ್ವಪಕ್ಷ ನಿಯೋಗ ಕರೆದೊಯ್ಯುವಂತೆ ಮುಖ್ಯಮಂತ್ರಿಗಳು ಸೂಚಿಸಿದ್ದಾರೆ. ವಿರೋಧ ಪಕ್ಷಗಳು ನಿಯೋಗದಲ್ಲಿ ಭಾಗವಹಿಸಲು ನಿರಾಕರಿಸಿದ್ದರೂ ಮತ್ತೊಮ್ಮೆ ಮನವಿ ಮಾಡಲಾಗುವುದು ಎಂದು ಹೇಳಿದರು.

ವಿರೋಧ ಪಕ್ಷದವರು ಭಾಗವಹಿಸದಿದ್ದರೆ ಮುಖ್ಯಮಂತ್ರಿ, ಸಚಿವರು ಹಾಗೂ ತಾವು ಕೇಂದ್ರಕ್ಕೆ ತೆರಳಿ ಸಂಬಂಧಪಟ್ಟ ಸಚಿವರು ಮತ್ತು ಪ್ರಧಾನಮಂತ್ರಿಯವರ ಭೇಟಿಗೆ ಸಮಯ ಕೋರಲಾಗುವುದು. ರಾಜ್ಯದ ಬರ ಪರಿಸ್ಥಿತಿ ವಿವರಿಸಿ ಪರಿಹಾರ ಬಿಡುಗಡೆಗೆ ಒತ್ತಾಯಿಸಲಾಗುವುದು ಎಂದರು.

ರಾಜ್ಯದಲ್ಲಿ ಬರದಿಂದ ಇದುವರೆಗೆ ಸುಮಾರು ₹46 ಸಾವಿರ ಕೋಟಿ ನಷ್ಟ ಸಂಭವಿಸಿರುವುದಾಗಿ ಅಂದಾಜಿಸಲಾಗಿದೆ. ಅಂತಿಮ ಲೆಕ್ಕಾಚಾರದಲ್ಲಿ ಈ ಮೊತ್ತ ₹60 ಸಾವಿರ ಕೋಟಿಯಿಂದ ₹70 ಸಾವಿರ ಕೋಟಿಗೆ ಏರಿಕೆಯಾಗಬಹುದು. ಆದರೆ, ಒಟ್ಟು ನಷ್ಟದ ಮೊತ್ತವನ್ನೇ ಪರಿಹಾರವಾಗಿ ಕೇಳಲು ಸಾಧ್ಯವಿಲ್ಲ. ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯಾ ನಿಧಿ (ಎನ್‌ಡಿಆರ್‌ಎಫ್) ಮಾರ್ಗಸೂಚಿಗಳ ಪ್ರಕಾರ ಅರ್ಹ ನಷ್ಟವನ್ನು ಲೆಕ್ಕಹಾಕಿ ಪರಿಹಾರ ಕೋರಲಾಗುವುದು ಎಂದು ವಿವರಿಸಿದರು.

ಕಳೆದ ವರ್ಷ ಸುಮಾರು ₹49 ಸಾವಿರ ಕೋಟಿ ನಷ್ಟ ಸಂಭವಿಸಿದ್ದರೂ ಕೇಂದ್ರದಿಂದ ₹18 ಸಾವಿರ ಕೋಟಿ ಪರಿಹಾರ ಕೋರಲಾಗಿತ್ತು. ಈ ಬಾರಿಯೂ ಮಾರ್ಗಸೂಚಿಗಳ ಅನ್ವಯ ₹18 ಸಾವಿರ ಕೋಟಿಯಿಂದ ₹20 ಸಾವಿರ ಕೋಟಿವರೆಗೆ ಪರಿಹಾರ ಕೋರಬೇಕಾಗಬಹುದು. ಅಂತಿಮ ಅಂಕಿಅಂಶಗಳ ಆಧಾರದಲ್ಲಿ ಮೊತ್ತ ನಿಗದಿಪಡಿಸಲಾಗುವುದು ಎಂದರು.

ಎಸ್‌ಸಿ, ಎಸ್‌ಟಿ ಮೀಸಲಾತಿ ತೀರ್ಪಿಗೆ ಮೇಲ್ಮನವಿ

ಎಸ್‌ಸಿ, ಎಸ್‌ಟಿ ಮೀಸಲಾತಿಗೆ ಸಂಬಂಧಿಸಿದ ಹೈಕೋರ್ಟ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟನಲ್ಲಿ ವಿಶೇಷ ಅನುಮತಿ ಅರ್ಜಿ ಸಲ್ಲಿಸಲು ಸಚಿವ ಸಂಪುಟ ನಿರ್ಧರಿಸಿದೆ. ಮೀಸಲಾತಿ ವಿಚಾರವನ್ನು ಸಂವಿಧಾನದ 9ನೇ ಅನುಸೂಚಿಗೆ ಸೇರಿಸುವ ಸಾಧ್ಯತೆ ಸೇರಿದಂತೆ ಮುಂದಿನ ಕಾನೂನು ಕ್ರಮಗಳ ಬಗ್ಗೆ ರಾಜಕೀಯ ವ್ಯವಹಾರಗಳ ಸಮಿತಿಯಲ್ಲಿ ಚರ್ಚಿಸಲಾಗುವುದು ಎಂದು ತಿಳಿಸಿದರು.

ಸ್ಟಿಂಗ್ ವಿಡಿಯೋ ಪ್ರಕರಣದ ತನಿಖೆ ಕುರಿತು ಸಚಿವ ಸಂಪುಟದಲ್ಲಿ ಯಾವುದೇ ಚರ್ಚೆಯಾಗಿಲ್ಲ. ತನಿಖಾ ಸಂಸ್ಥೆಗೆ ಪ್ರಕರಣ ವಹಿಸುವ ಬಗ್ಗೆಯೂ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಪರಮೇಶ್ವರ ಸ್ಪಷ್ಟಪಡಿಸಿದರು.

Author
Samadarshi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST