ಟೋಕಿಯೊ, ಜುಲೈ 28: ಜಪಾನ್‌ನ ನೈಋತ್ಯ ಭಾಗದ ಕ್ಯೂಷು ದ್ವೀಪದಲ್ಲಿ ಮಂಗಳವಾರ 7.1 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಕುಮಮೋಟೊ ಪ್ರಾಂತ್ಯದ ಶಾಪಿಂಗ್ ಮಾಲ್‌ನ ಒಂದು ಭಾಗ ಕುಸಿದ ಪರಿಣಾಮ ಹಲವರು ಒಳಗೆ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಭೂಕಂಪದ ಬಳಿಕ ಸುಮಾರು 1.5 ಲಕ್ಷಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.
ಭೂಕಂಪದ ಕೇಂದ್ರಬಿಂದು ಭೂಮಿಯಿಂದ ಸುಮಾರು 10 ಕಿ.ಮೀ. ಆಳದಲ್ಲಿದ್ದ ಕಾರಣ ಪ್ರಬಲ ನಂತರದ ಕಂಪನಗಳ ಸಾಧ್ಯತೆ ಇದೆ ಎಂದು ಜಪಾನ್ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಆರಂಭದಲ್ಲಿ ಸುನಾಮಿ ಎಚ್ಚರಿಕೆ ನೀಡಲಾಗಿದ್ದರೂ, ಬಳಿಕ ಅದನ್ನು ಹಿಂತೆಗೆದುಕೊಳ್ಳಲಾಗಿದೆ.
ಕುಮಮೋಟೊದಲ್ಲಿನ ಏಯಾನ್ ಶಾಪಿಂಗ್ ಮಾಲ್‌ನಲ್ಲಿ ಸ್ಫೋಟ ಸಂಭವಿಸಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಕಾಶಿಮಾ ಪಟ್ಟಣದ ಶಾಪಿಂಗ್ ಸಂಕೀರ್ಣದ ಎರಡನೇ ಮಹಡಿ ಕುಸಿದಿದ್ದು, ಹಲವರು ಅವಶೇಷಗಳಡಿ ಸಿಲುಕಿದ್ದಾರೆ ಎಂದು ಅಗ್ನಿಶಾಮಕ ಇಲಾಖೆ ತಿಳಿಸಿದೆ.
ಪ್ರಧಾನಿ ಸನಾಏ ತಕೈಚಿ, ಹಲವರು ಗಾಯಗೊಂಡಿರುವ ಮಾಹಿತಿ ಲಭ್ಯವಾಗಿದ್ದು, ಹಾನಿಯ ಪ್ರಮಾಣವನ್ನು ಇನ್ನೂ ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ವೃದ್ಧಾಶ್ರಮದಲ್ಲಿದ್ದ ಸುಮಾರು 10 ಮಂದಿ ಸೇರಿದಂತೆ ಕನಿಷ್ಠ 50 ಮಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ರಾಷ್ಟ್ರೀಯ ಪ್ರಸಾರ ಸಂಸ್ಥೆ ಎನ್‌ಎಚ್‌ಕೆ ವರದಿ ಮಾಡಿದೆ.
ಭೂಕಂಪದ ಪರಿಣಾಮ ರೈಲು ಸಂಚಾರ ಸ್ಥಗಿತಗೊಂಡಿದ್ದು, ಸಾವಿರಾರು ಮನೆಗಳಿಗೆ ವಿದ್ಯುತ್ ಪೂರೈಕೆ ಕಡಿತಗೊಂಡಿದೆ. ರಕ್ಷಣಾ ಕಾರ್ಯಾಚರಣೆಗೆ ಸ್ವಯಂರಕ್ಷಣಾ ಪಡೆ, ಅಗ್ನಿಶಾಮಕ ದಳ ಹಾಗೂ ಕರಾವಳಿ ರಕ್ಷಣಾ ಪಡೆಯನ್ನು ನಿಯೋಜಿಸಲಾಗಿದೆ.
ಅಂತರರಾಷ್ಟ್ರೀಯ ಅಣುಶಕ್ತಿ ಸಂಸ್ಥೆ (ಐಎಇಎ), ಭೂಕಂಪದಿಂದ ಕೇಂದ್ರಬಿಂದುವಿನಿಂದ ಸುಮಾರು 100 ಕಿ.ಮೀ. ದೂರದಲ್ಲಿರುವ ಸೆಂಡೈ ಅಣು ವಿದ್ಯುತ್ ಸ್ಥಾವರಕ್ಕೆ ಯಾವುದೇ ಹಾನಿಯಾಗಿಲ್ಲ ಹಾಗೂ ಅದು ಸುರಕ್ಷಿತವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದೆ.