ಹಾವೇರಿ: ನಗರದ ಬಸ್ ನಿಲ್ದಾಣದಲ್ಲಿ ಇಂದು (ಏಪ್ರಿಲ್ 1) ಮುಂಜಾನೆ ಭೀಕರ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಬಸ್ ನಿಲ್ದಾಣದ ಪ್ಲಾಟ್‌ಫಾರ್ಮ್ ಮೇಲೆ ಬಸ್ಸಿಗಾಗಿ ಕಾಯುತ್ತಿದ್ದ ಪ್ರಯಾಣಿಕರ ಮೇಲೆ ಏಕಾಏಕಿ ನುಗ್ಗಿದ್ದು, ಘಟನೆಯಲ್ಲಿ ನಾಲ್ವರು ತೀವ್ರವಾಗಿ ಗಾಯಗೊಂಡಿದ್ದಾರೆ. ಬೆಳಗ್ಗೆ ಸುಮಾರು 7 ಗಂಟೆಯ ಸಮಯದಲ್ಲಿ ಈ ಅಪಘಾತ ಸಂಭವಿಸಿದೆ. ಬಸ್ ಚಾಲಕನ ಅತಿಯಾದ ವೇಗ ಮತ್ತು ನಿರ್ಲಕ್ಷ್ಯತನವೇ ಘಟನೆಗೆ ಕಾರಣ ಎಂಬುದು ತಿಳಿದುಬಂದಿದೆ. ಘಟನೆಯಲ್ಲಿ 2 ವರ್ಷದ ಪುಟ್ಟ ಮಗು ಹಜರತ್ ಅಲಿಗೆ ತೀವ್ರವಾಗಿ ಗಾಯಗಳಾಗಿದ್ದು, ಸದ್ಯ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ. ಉಳಿದ ಗಾಯಾಳುಗಳಿಗೂ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಲಭ್ಯವಾಗಿದ್ದು, ಅಪಘಾತದ ಭೀಕರತೆಯನ್ನು ಸಾರಿ ಹೇಳುತ್ತಿವೆ. ಸಾರ್ವಜನಿಕರು ಚಾಲಕನ ಬೇಜವಾಬ್ದಾರಿತನದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಿನಾಂಕ: 01/04/2026 ರಂದು ಮುಂಜಾನೆ ಸುಮಾರು 06-30 ಗಂಟೆಗೆ ಕೆಎಸ್‌ಆರ್‌ಟಿಸಿ ಬಸ್ ನಂಬರ ಕೆಎ.27/ಎಫ್.0665ನ ಚಾಲಕ ಮಂಜುನಾಥ ಆರ್ ತಂದೆ ರಾಜಪ್ಪ,ಹಾವೇರಿ ಕೆಎಸ್‌ಆರ್‌ಟಿಸಿ ಬಸ್ಟ್ಯಾಂಡ ಒಳಗೆ ಖುಲ್ಲಾ ಜಾಗೆ ಕಡೆಯಿಂದ ಪ್ಲಾಟ್ ಫಾರ್ಮ ನಂ 2 ನೇದ್ದರ ಕಡೆಗೆ ಬಹಳ ವೇಗವಾಗಿ ಮತ್ತು ನಿರ್ಲಕ್ಷ ತಾತ್ಸಾರತನದಿಂದ ಓಡಿಸಿಕೊಂಡು ಹೋಗಿ 2 ನೇ ಪ್ಲಾಟ್ ಫಾರ್ಮ ಕಟ್ಟಿಯನ್ನು ಹತ್ತಿಸಿಕೊಂಡು ಹೋಗಿ ಸದರ ಪ್ಲಾಟ್ ಫಾರ್ಮ ಕಟ್ಟಿಯ ಮೇಲೆ ಇದ್ದ 1] ವಾಸುದೇವ ತಂದೆ ಗುರುನಾಥಪ್ಪ ಉತಳೆಕರ್ 2] ಹರ್ಷಾ ತಂದೆ ವಾಸುದೇವ ಉತಳೆಕರ್ 3] ಕಾವ್ಯಂಜಲಿ ಗಂಡ ವಿಷ್ಣು ಉತಳೆಕರ್ 4] ಆರಬಜಖಾನ್ ತಂದೆ ಖಾಜಾಮೋದಿನಸಾಬ್ ಸೌದಾಗರ 5] ಹಜರತಅಲಿ ತಂದೆ ಇಸ್ಮಾಯಿಲ್ ರಾಯಚೂರ ವಯಸ್ಸು 2.1/2 ವರ್ಷ ಸಾಃ ಸವಣೂರ ಈ ಐದು ಜನರಿಗೆ ಅಪಘಾತವಾಗಿದ್ದು ಬಸ್ಸಿಗೂ ಮುಂದೆ ಡೆಂಟ ಆಗಿದೆ ಸದರಿ ಎಲ್ಲಾ ಗಾಯಾಳುಗಳು ಹಾವೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಉಪಚಾರ ಪಡೆದುಕೊಂಡು ಒಬ್ಬ ಗಾಯಾಳು ಹಜರತಅಲಿ ತಂದೆ ಇಸ್ಮಾಯಿಲ್ ರಾಯಚೂರ ಅವನಿಗೆ ಹೆಚ್ಚಿನ ಉಪಚಾರಕ್ಕೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಈ ದಿವಸ ದಿಃ 01/04/2026 ರಂದು ಮುಂಜಾನೆ 9-02 ಗಂಟೆಗೆ ಮರಣ ಹೊಂದಿದ್ದಾರೆ. ಹಾವೇರಿ ಸಂಚಾರ ಪೋಲಿಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.