LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
National News

ಧರಣಿಯಲ್ಲಿ ಮೊಳಗಿದ ಏಕತೆಯ ಸಂದೇಶ: ಜಾತಿ–ಧರ್ಮ ಮೀರಿ ವಿದ್ಯಾರ್ಥಿಗಳಿಗೆ ನೆರವು

ರಾಂಚಿ, ಆಗಸ್ಟ್ 6: ಜಾರ್ಖಂಡ್‌ನಲ್ಲಿ ಪರೀಕ್ಷಾ ಅಕ್ರಮಗಳ ವಿರುದ್ಧ ನಡೆಯುತ್ತಿರುವ ವಿದ್ಯಾರ್ಥಿಗಳ ಪ್ರತಿಭಟನೆ ಧಾರ್ಮಿಕ ಸಾಮರಸ್ಯದ ಸಂಕೇತವಾಗಿ ರೂಪುಗೊಂಡಿದೆ. ಜೈಪಾಲ್ ಸಿಂಗ್ ಕ್ರೀಡಾಂಗಣದಲ್ಲಿ ಧರಣಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಮಂದಿರ, ಮಸೀದಿ, ಗುರುದ್ವಾರ ಸೇರಿದಂತೆ ವಿವಿಧ ಧಾರ್ಮಿಕ ಸಂಸ್ಥೆಗಳು ಹಾಗೂ ಸಾರ್ವಜನಿಕರು ಜಾತಿ–ಧರ್ಮದ ಭೇದವಿಲ್ಲದೆ ಆಹಾರ ಮತ್ತು ಅಗತ್ಯ ವಸ್ತುಗಳನ್ನು ಪೂರೈಸುತ್ತಿದ್ದಾರೆ.

ಇದೇ ವೇಳೆ, ಆರು ಮಂದಿ ಪ್ರತಿಭಟನಾಕಾರರು ತಮ್ಮ ಅನಿರ್ದಿಷ್ಟಾವಧಿಯ ಉಪವಾಸ ಸತ್ಯಾಗ್ರಹವನ್ನು ಮುಂದುವರಿಸಿದ್ದಾರೆ.

ಪ್ರತಿಭಟನಾ ಸ್ಥಳದಲ್ಲಿ ತಾತ್ಕಾಲಿಕ ಶೆಡ್‌ಗಳಲ್ಲಿ ತಂಗಿರುವ ವಿದ್ಯಾರ್ಥಿಗಳಿಗೆ ಶನಿ ದೇವಾಲಯ, ಪಹಾಡಿ ದೇವಾಲಯ, ಸಮೀಪದ ಮಸೀದಿ ಹಾಗೂ ಗುರುದ್ವಾರಗಳಿಂದ ಪ್ರತಿದಿನ ಬಿಸಿ ಆಹಾರ ತಲುಪುತ್ತಿದೆ. ವಿವಿಧ ಜಿಲ್ಲೆಗಳ ಜನರು ಮನೆಗಳಲ್ಲಿ ತಯಾರಿಸಿದ ಆಹಾರವನ್ನು ಕಳುಹಿಸುತ್ತಿದ್ದು, ಕೆಲ ವಿದ್ಯಾರ್ಥಿಗಳು ತಮ್ಮ ಮನೆಗಳಿಂದಲೇ ಊಟ ತಂದು ಹಂಚಿಕೊಳ್ಳುತ್ತಿದ್ದಾರೆ ಎಂದು ಸ್ವಯಂಸೇವಕ ಆಶುತೋಷ್ ಲಾಲ್ ತಿಳಿಸಿದ್ದಾರೆ.

ಪ್ರತಿಭಟನಾ ಸ್ಥಳದಲ್ಲಿ ಆಹಾರವನ್ನು ಎಲ್ಲರೂ ಸೇರಿ ತಯಾರಿಸಿ ಹಂಚಲಾಗುತ್ತಿದೆ. ಧರ್ಮ ಅಥವಾ ಜಾತಿಯ ಯಾವುದೇ ಭೇದಭಾವವಿಲ್ಲದೆ ಪ್ರತಿಭಟನಾಕಾರರು, ಸಾರ್ವಜನಿಕರು ಹಾಗೂ ಮಾಧ್ಯಮ ಪ್ರತಿನಿಧಿಗಳಿಗೂ ಊಟ ನೀಡಲಾಗುತ್ತಿದೆ. ಕುಡಿಯುವ ನೀರು ಮತ್ತು ಇತರ ಅಗತ್ಯ ವಸ್ತುಗಳ ಪೂರೈಕೆಯೂ ನಿರಂತರವಾಗಿ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.

"ನಾವು ಹಿಂದೂ, ಮುಸ್ಲಿಮ್, ಸಿಖ್ ಅಥವಾ ಕ್ರಿಶ್ಚಿಯನ್ನರು ಎಂಬ ಗುರುತಿಗಿಂತ ಮೊದಲು ನ್ಯಾಯಕ್ಕಾಗಿ ಹೋರಾಡುತ್ತಿರುವ ವಿದ್ಯಾರ್ಥಿಗಳು. ವ್ಯವಸ್ಥೆಯಲ್ಲಿ ಸುಧಾರಣೆ ತರುವುದು ನಮ್ಮ ಏಕೈಕ ಗುರಿಯಾಗಿದೆ" ಎಂದು ಪ್ರತಿಭಟನಾನಿರತ ವಿದ್ಯಾರ್ಥಿ ಸಂಜೀವ್ ಕುಮಾರ ಹೇಳಿದ್ದಾರೆ.

ಮತ್ತೊಬ್ಬ ಪ್ರತಿಭಟನಾಕಾರ ಮೊಹಮ್ಮದ್ ಕರೀಮ್ ಮಾತನಾಡಿ, ತಮ್ಮ ಹೋರಾಟ ಧಾರ್ಮಿಕ, ರಾಜಕೀಯ ಅಥವಾ ಜಾತಿ ಆಧಾರಿತವಲ್ಲ; ಅದು ಪರೀಕ್ಷಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ಸುಧಾರಣೆ ತರಿಸುವ ಉದ್ದೇಶದಿಂದ ಮಾತ್ರ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ಪ್ರತಿಭಟನೆಯ ನೇತೃತ್ವ ವಹಿಸಿರುವ ಜೆಪಿಎಸ್‌ಸಿ–ಜೆಎಸ್‌ಎಸ್‌ಸಿ ಸುಧಾರಣಾ ಮಂಚ್ ಶಾಂತಿಯುತ ವಾತಾವರಣ ಕಾಪಾಡಲು ವಿಶೇಷ ನಡವಳಿಕೆ ನಿಯಮಗಳನ್ನು ಜಾರಿಗೊಳಿಸಿದೆ. ಪ್ರತಿಭಟನಾ ಸ್ಥಳದಲ್ಲಿ ಅಳವಡಿಸಿರುವ ಸೂಚನಾ ಫಲಕದಲ್ಲಿ ರಾಜಕೀಯ, ಧಾರ್ಮಿಕ ಅಥವಾ ಜಾತಿ ಆಧಾರಿತ ಹೇಳಿಕೆಗಳನ್ನು ನೀಡಬಾರದು, ನಿಂದನಾತ್ಮಕ ಭಾಷೆ ಬಳಸಬಾರದು ಹಾಗೂ ಮೂಲ ಬೇಡಿಕೆಗಳಿಂದ ದಾರಿ ತಪ್ಪಬಾರದು ಎಂದು ಸೂಚಿಸಲಾಗಿದೆ.

ಪ್ರತಿಭಟನೆಯು ಸಂಪೂರ್ಣವಾಗಿ ಪರೀಕ್ಷಾ ವ್ಯವಸ್ಥೆಯ ಸುಧಾರಣೆ ಮತ್ತು ವಿದ್ಯಾರ್ಥಿಗಳ ಬೇಡಿಕೆಗಳ ಮೇಲೆಯೇ ಕೇಂದ್ರೀಕೃತವಾಗಿರಲು ಈ ನಿಯಮಗಳನ್ನು ರೂಪಿಸಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST