ವಿಜಯಪುರ, ಆಗಸ್ಟ್ 6: ಇಂಡಿ ತಾಲೂಕಿನ ಲಚ್ಯಾಣ ಗ್ರಾಮದ ರೈಲ್ವೆ ಲೆವೆಲ್ ಕ್ರಾಸಿಂಗ್‌ನಲ್ಲಿ ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ವಾಹನ ರೈಲು ಹಳಿಯ ಮಧ್ಯೆಯೇ ಕೆಟ್ಟು ನಿಂತ ಪರಿಣಾಮ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು. ಆದರೆ ಸ್ಥಳೀಯ ಯುವಕರು ಹಾಗೂ ಗ್ರಾಮಸ್ಥರು ಸಮಯಪ್ರಜ್ಞೆ ಮೆರೆದ ಪರಿಣಾಮ 25ಕ್ಕೂ ಹೆಚ್ಚು ಮಕ್ಕಳ ಜೀವಕ್ಕೆ ಎದುರಾಗಿದ್ದ ಭಾರೀ ಅಪಾಯ ಕೂದಲೆಳೆಯ ಅಂತರದಲ್ಲಿ ತಪ್ಪಿದೆ.
ಹಲಸಂಗಿಯಿಂದ ಲಚ್ಯಾಣ ಮಾರ್ಗವಾಗಿ ಶಿರಗೂರು ಗ್ರಾಮಕ್ಕೆ ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ವಾಹನ ರೈಲ್ವೆ ಹಳಿ ದಾಟುವ ವೇಳೆ ಗೇರ್ ಬಾಕ್ಸ್ ದೋಷ ಉಂಟಾಗಿ ಹಳಿಯ ಮೇಲೆಯೇ ಸ್ಥಗಿತಗೊಂಡಿತು. ಚಾಲಕ ಎಷ್ಟೇ ಪ್ರಯತ್ನಿಸಿದರೂ ವಾಹನವನ್ನು ಮುಂದಕ್ಕೆ ಚಲಿಸಲು ಸಾಧ್ಯವಾಗದೆ, ಮಕ್ಕಳು ವಾಹನದೊಳಗೆ ಸಿಲುಕಿಕೊಂಡರು.
ಅದೇ ಸಮಯದಲ್ಲಿ ಆ ಮಾರ್ಗದಲ್ಲಿ ರೈಲು ಸಂಚರಿಸುವ ವೇಳೆಯಾಗಿದ್ದರಿಂದ ವಾಹನದಲ್ಲಿದ್ದ ಮಕ್ಕಳು ಭಯಭೀತರಾಗಿ ಅಳಲು ಆರಂಭಿಸಿದರು. ಪರಿಸ್ಥಿತಿಯ ಗಂಭೀರತೆ ಅರಿತ ಲಚ್ಯಾಣ ಗ್ರಾಮದ ಯುವಕರು ಹಾಗೂ ಗ್ರಾಮಸ್ಥರು ಕ್ಷಣವೂ ವಿಳಂಬ ಮಾಡದೆ ಸ್ಥಳಕ್ಕೆ ಧಾವಿಸಿ, ತಮ್ಮ ಪ್ರಾಣದ ಹಂಗನ್ನೂ ಲೆಕ್ಕಿಸದೆ ವಾಹನವನ್ನು ಹಳಿಯಿಂದ ಹೊರಕ್ಕೆ ತಳ್ಳುವ ಕಾರ್ಯಾಚರಣೆಗೆ ಮುಂದಾದರು.
ರೈಲು ಬರುವ ಕೆಲವೇ ಕ್ಷಣಗಳ ಮುನ್ನ ಗ್ರಾಮಸ್ಥರು ಒಗ್ಗಟ್ಟಿನಿಂದ ವಾಹನವನ್ನು ಹಳಿಯಿಂದ ಸುರಕ್ಷಿತ ಸ್ಥಳಕ್ಕೆ ಸರಿಸುವಲ್ಲಿ ಯಶಸ್ವಿಯಾದರು. ಇದರಿಂದ ವಾಹನದಲ್ಲಿದ್ದ ಎಲ್ಲ ಮಕ್ಕಳು ಯಾವುದೇ ಅಪಾಯವಿಲ್ಲದೆ ಸುರಕ್ಷಿತವಾಗಿ ಪಾರಾದರು. ಸ್ಥಳೀಯರ ಸಮಯೋಚಿತ ಕ್ರಮದಿಂದ ಸಂಭವಿಸಬಹುದಾಗಿದ್ದ ಭಾರೀ ರೈಲು ದುರಂತ ತಪ್ಪಿದಂತಾಯಿತು.
ಈ ಘಟನೆ ಕಳೆದ ಮಂಗಳವಾರ ಸಂಜೆ ನಡೆದಿದ್ದು, ಅದರ ವಿಡಿಯೊ ಮತ್ತು ಮಾಹಿತಿ ತಡವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಬಳಿಕ ಬೆಳಕಿಗೆ ಬಂದಿದೆ. ಮಕ್ಕಳ ಜೀವ ಉಳಿಸಿದ ಲಚ್ಯಾಣ ಗ್ರಾಮದ ಯುವಕರು ಹಾಗೂ ಗ್ರಾಮಸ್ಥರ ಧೈರ್ಯ ಮತ್ತು ಸಮಯಪ್ರಜ್ಞೆಗೆ ಪೋಷಕರು, ಶಾಲಾ ಆಡಳಿತ ಮಂಡಳಿ ಹಾಗೂ ಸಾರ್ವಜನಿಕರು ವ್ಯಾಪಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.