ePaper
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಫೇಸಬುಕ್‌ ಲೈವ್‌‌ ಇದ್ದಾಗ ಧರೆಗುರುಳಿದ ನೇಪಾಳ ವಿಮಾನ; ಬೆಚ್ಚಿಬೀಳಿಸುವ ವಿಡಿಯೋ

[video width="432" height="768" mp4="https://samadarshi.net/otassoos/2023/01/jjdnndjjncjk-nnjjdjj-jjf.mp4"][/video]

ಕಾಠ್ಮಂಡು: ನೇಪಾಳದಲ್ಲಿ ನಡೆದ ವಿಮಾನ ದುರಂತದಲ್ಲಿ ವಿಮಾನದಲ್ಲಿದ್ದ 68 ಪ್ರಯಾಣಿಕರು ಮತ್ತು ನಾಲ್ವರು ಸಿಬ್ಬಂದಿ ಸೇರಿ ಎಲ್ಲಾ 72 ಜನ ಸಾವನ್ನಪ್ಪಿದ ಅಪಘಾತದ ಕೆಲವು ಸೆಕೆಂಡುಗಳ ಮುನ್ನ ಮೃತರಾದ ಐದು ಭಾರತೀಯರ ಪೈಕಿ ಓರ್ವ ಪ್ರಯಾಣಿಕ ವಿಮಾನದಲ್ಲಿ ಫೇಸ್‌ಬುಕ್‌ ಲೈವ್‌ ಆರಂಭಿಸಿದ್ದರು. ಆಗ ವಿಮಾನ ಅಲ್ಲಾಡುತ್ತ ಪತನಗೊಂಡ ದೃಶ್ಯಗಳು ವಿಡಿಯೋ ಗೋಚರಿಸಿವೆ. ಅಪಘಾತಕ್ಕೆ ಕೆಲವು ಸೆಕೆಂಡುಗಳ ಮೊದಲಿನ ವಿಡಿಯೋ ಇದಾಗಿದೆ. ಅಪಘಾತದಲ್ಲಿ ಪ್ರಾಣ ಕಳೆದುಕೊಂಡ ಉತ್ತರಪ್ರದೇಶದ ಗಾಜಿಪುರದ ಯುವಕನೊಬ್ಬನ ಈ ವಿಡಿಯೋವನ್ನು ಸೆರೆ ಹಿಡಿದಿದ್ದಾನೆ.

72 ಜನರಿದ್ದ ನೇಪಾಳದ ಯೇತಿ ಏರ್‌ಲೈನ್ಸ್‌ಗೆ ಸೇರಿದ ವಿಮಾನವೊಂದು ನೇಪಾಳದ ಪೋಖರಾ ವಿಮಾನ ನಿಲ್ದಾಣದ ಬಳಿ ಅಪಘಾತಕ್ಕೆ ತುತ್ತಾಗಿತ್ತು. ಈ ದುರ್ಘಟನೆಯಲ್ಲಿ ವಿಮಾನದಲ್ಲಿದ್ದ 68 ಪ್ರಯಾಣಿಕರು, ನಾಲ್ವರು ಸಿಬ್ಬಂದಿ ಸೇರಿ ಎಲ್ಲಾ 72 ಜನರು ಸಾವನ್ನಪ್ಪಿದ್ದಾರೆ. ಭಾನುವಾರ ತಡರಾತ್ರಿವರೆಗೆ 69 ಶವಗಳನ್ನು ಪತ್ತೆ ಮಾಡಲಾಗಿದ್ದು, ಇನ್ನುಳಿದ ದೇಹಗಳಿಗೆ ಶೋಧ ನಡೆದಿದೆ. ಅಪಘಾತಕ್ಕೆ ತುತ್ತಾದ ವಿಮಾನದಲ್ಲಿ 5 ಭಾರತೀಯರು ಸೇರಿದಂತೆ 10 ವಿದೇಶಿ ಪ್ರಯಾಣಿಕರು ಕೂಡ ಇದ್ದರು. ಈ 10 ಜನರಲ್ಲಿ ಇಬ್ಬರು ಮಕ್ಕಳು ಎನ್ನಲಾಗಿದೆ. ತಾಂತ್ರಿಕ ದೋಷದಿಂದ ಅಪಘಾತ ಆಗಿರಬಹುದು ಎನ್ನಲಾಗಿದೆ. ಈ ನಡುವೆ ಘಟನೆ ಸಂಬಂಧ ತನಿಖೆಗೆ ನೇಪಾಳ ಸರ್ಕಾರ 5 ಜನರ ತಂಡ ರಚಿಸಿದೆ. ಇದು ನೇಪಾಳ ಕಳೆದ 30 ವರ್ಷದಲ್ಲಿ ಕಂಡ ಅತಿ ಭೀಕರ ವಾಯು ದುರಂತ ಎಂದು ಹೇಳಲಾಗಿದೆ.

72 ಜನರನ್ನು ಹೊತ್ತ ಯೇತಿ ಏರ್‌ಲೈನ್ಸ್‌ಗೆ ಸೇರಿದ 9ಎನ್‌-ಎಎನ್‌ಸಿ ಎಟಿಆರ್‌-72 ವಿಮಾನ ಭಾನುವಾರ ಬೆಳಿಗ್ಗೆ 10.33ಕ್ಕೆ ರಾಜಧಾನಿ ಕಾಠ್ಮಂಡುವಿನ ತ್ರಿಭುವನ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರಮುಖ ಪ್ರವಾಸಿ ತಾಣವಾದ ಪೋಖರಾಗೆ ಹೊರಟಿತ್ತು. ಬೆಳಗ್ಗೆ 11 ಗಂಟೆಗೆ ವಿಮಾನ ಇನ್ನೇನು ರನ್‌ವೇನತ್ತ ಇಳಿಯಲು ಸಜ್ಜಾಗುತ್ತಿದೆ ಎನ್ನುವ ಹಂತದಲ್ಲಿ, ಇದ್ದಕ್ಕಿದ್ದಂತೆ ವಿಚಿತ್ರ ರೀತಿಯಲ್ಲಿ ಮಗುಚಿಕೊಂಡು ವಿಮಾನ ನಿಲ್ದಾಣದ ಸಮೀಪದಲ್ಲೇ ಇರುವ ಸೇತಿ ನದಿಯ ಕಂದಕದಲ್ಲಿ ಪತನಗೊಂಡಿತು. ಲ್ಯಾಂಡಿಂಗ್‌ಗೆ ಕೇವಲ 10-20 ಸೆಕೆಂಡ್‌ ಇದ್ದಾಗ ಈ ಘಟನೆ ಸಂಭವಿಸಿದೆ.

ವಿಮಾನ ನೆಲಕ್ಕೆ ಅಪ್ಪಳಿಸುತ್ತಲೇ ಭಾರೀ ಸದ್ದಿನೊಂದಿಗೆ ಬೆಂಕಿ ಹತ್ತಿಕೊಂಡು ವಿಮಾನದ ಬಹುತೇಕ ಭಾಗ ಸುಟ್ಟುಹೋಯಿತು. ಕಂದಕದ ಪ್ರದೇಶಕ್ಕೆ ಅಗ್ನಿಶಾಮಕ ಸಿಬ್ಬಂದಿ ವಾಹನ ತಲುಪುವುದು ಸಾಧ್ಯವಾಗದ ಕಾರಣ ಹೆಚ್ಚಿನ ಜನರ ರಕ್ಷಣೆ ಸಾಧ್ಯವಾಗಿಲ್ಲ. ಘಟನಾ ಸ್ಥಳದಲ್ಲೇ 50ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ತೀವ್ರ ಗಾಯಗೊಂಡ ಕೆಲವರನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ ಅಷ್ಟರಲ್ಲೇ ಅವರು ಅಸುನೀಗಿದ್ದಾರೆ. ಅಪಘಾತದ ಹಿನ್ನೆಲೆಯಲ್ಲಿ ರವಿವಾರ ಪೋಖರಾ ವಿಮಾನ ನಿಲ್ದಾಣದಿಂದ ಹೊರಡುವ ಮತ್ತು ಆಗಮಿಸುವ ಎಲ್ಲಾ ವಿಮಾನಗಳ ಸಂಚಾರವನ್ನು ರದ್ದುಪಡಿಸಲಾಯಿತು.

ರವಿವಾರ ನೇಪಾಳದಲ್ಲಿ ನಡೆದ ವಿಮಾನ ಅಪಘಾತದಲ್ಲಿ 5 ಭಾರತೀಯರು ಕೂಡಾ ಸಾವನ್ನಪ್ಪಿದ್ದಾರೆ. ಮೃತ ಪ್ರಯಾಣಿಕರನ್ನು ಅಭಿಷೇಕ ಕುಶ್ವಾಹ (25), ಬಿಶಾಲ್‌ ಶರ್ಮಾ (22), ಅನಿಲ ಕುಮಾರ ರಾಜಭರ (27), ಸೋನು ಜೈಸ್ವಾಲ (35) ಮತ್ತು ಸಂಜಯ ಜೈಸ್ವಾಲ್‌ ಎಂದು ಗುರುತಿಸಲಾಗಿದೆ. ಇವರು ಪೋಖರಾಗೆ ಪ್ಯಾರಾ ಗ್ಲೈಡಿಂಗ್‌ ಮಾಡಲು ತೆರಳುತ್ತಿದ್ದರು. ಶುಕ್ರವಾರವಷ್ಟೇ ಕಾಠ್ಮಂಡುವಿಗೆ ಬಂದಿದ್ದರು. ಈ ಪೈಕಿ ಸೋನಿ ವಾರಾಣಸಿಯವರು. ಮೃತರ ಶವಗಳ ಗುರುತು ಪತ್ತೆಯ ಯತ್ನಗಳು ನಡೆದಿದೆ.

ಯೇತಿ ಏರ್‌ಲೈನ್ಸ್‌ನ ವಿಮಾನ ಅಪಘಾತಕ್ಕೆ ಸಾಕ್ಷಿಯಾದ ಪೋಖರಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕೇವಲ 15 ದಿನಗಳ ಹಿಂದಷ್ಟೇ ಉದ್ಘಾಟನೆಯಾಗಿತ್ತು. ಚೀನಾದ ರೋಡ್‌ ಆ್ಯಂಡ್‌ ಬೆಲ್ಟ ಯೋಜನೆಯಡಿ ಈ ವಿಮಾನ ನಿಲ್ದಾಣವನ್ನು ಸ್ವತಃ ಚೀನಾ ನಿರ್ಮಿಸಿ ನೇಪಾಳಕ್ಕೆ ಹಸ್ತಾಂತರಿಸಿತ್ತು. ಅನ್ನಪೂರ್ಣ ಪರ್ವತ ಶ್ರೇಣಿಗಳ ಸಾಲಲ್ಲಿ ನಿರ್ಮಾಣಗೊಂಡಿರುವ ನಿಲ್ದಾಣವನ್ನು 2023 ಜ.1ರಂದು ನೂತನ ಪ್ರಧಾನಿ ಪುಷ್ಪ ಕಮಲ ದಹಲ್‌ ‘ಪ್ರಚಂಡ’ ಉದ್ಘಾಟಿಸಿದ್ದರು.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.