ಛತ್ರಪತಿ ಸಂಭಾಜಿನಗರ: ಭಾರತೀಯ ರೈಲ್ವೆಯ ಫಸ್ಟ್ ಎಸಿ ಕ್ಯಾಬಿನ್ ಅನ್ನು ನವದಂಪತಿಗಳಿಗಾಗಿ 'ಹನಿಮೂನ್ ಸೂಟ್' ಮಾದರಿಯಲ್ಲಿ ಅಲಂಕರಿಸಿದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ಜಲ್ನಾ ರೈಲು ನಿಲ್ದಾಣದ ಪ್ರಯಾಣ ಟಿಕೆಟ್ ಪರೀಕ್ಷಕ (ಟಿಟಿಇ) ಅವರನ್ನು ಅಮಾನತುಗೊಳಿಸಲಾಗಿದೆ. ಪ್ರಕರಣದ ಕುರಿತು ದಕ್ಷಿಣ ಮಧ್ಯ ರೈಲ್ವೆ ಅಧಿಕೃತ ತನಿಖೆಗೆ ಆದೇಶಿಸಿದೆ.
ಜುಲೈ 6ರಂದು ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್–ಬಲ್ಹರ್ಷ–ನಂದಿಗ್ರಾಮ್ ಎಕ್ಸ್‌ಪ್ರೆಸ್ ರೈಲು ಜಲ್ನಾ ರೈಲು ನಿಲ್ದಾಣದಲ್ಲಿದ್ದ ವೇಳೆ ಈ ಘಟನೆ ನಡೆದಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ ಫಸ್ಟ್ ಎಸಿ ಕ್ಯಾಬಿನ್ ಅನ್ನು ಬಲೂನ್‌ಗಳು, ಹೂವಿನ ಅಲಂಕಾರ, ಸಾವಿರಾರು ಗುಲಾಬಿ ದಳಗಳು ಹಾಗೂ ಗೋಡೆಯ ಮೇಲೆ 'I Love You' ಎಂಬ ಸಂದೇಶದೊಂದಿಗೆ ವಿಶೇಷವಾಗಿ ಸಜ್ಜುಗೊಳಿಸಿರುವುದು ಕಂಡುಬಂದಿದೆ. ಸಂಚಾರದಲ್ಲಿದ್ದ ರೈಲಿನ ಕ್ಯಾಬಿನ್ ಅನ್ನು ರೊಮ್ಯಾಂಟಿಕ್ ವಾತಾವರಣಕ್ಕೆ ತಕ್ಕಂತೆ ಅಲಂಕರಿಸಿರುವ ದೃಶ್ಯಗಳು ವ್ಯಾಪಕ ಚರ್ಚೆಗೆ ಕಾರಣವಾಗಿವೆ.
ಈ ಕುರಿತು ಪ್ರತಿಕ್ರಿಯಿಸಿದ ದಕ್ಷಿಣ ಮಧ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಎ. ಶ್ರೀಧರ್, "ಜಲ್ನಾದ ಟಿಟಿಇ ಅವರನ್ನು ಅಮಾನತುಗೊಳಿಸಲಾಗಿದೆ. ಪ್ರಕರಣದ ಕುರಿತು ಇಲಾಖಾ ತನಿಖೆ ನಡೆಯುತ್ತಿದೆ. ಫಸ್ಟ್ ಎಸಿ ಕ್ಯಾಬಿನ್ ಅನ್ನು ಅಲಂಕರಿಸಲು ದಂಪತಿ ಖಾಸಗಿ ಈವೆಂಟ್ ಸ್ಟೈಲಿಂಗ್ ಸಂಸ್ಥೆಯ ಸೇವೆ ಪಡೆದಿರುವುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಆ ಸಂಸ್ಥೆಯ ಸಿಬ್ಬಂದಿಗೆ ರೈಲಿನೊಳಗೆ ಪ್ರವೇಶಿಸಲು ಟಿಟಿಇ ಅವಕಾಶ ನೀಡಬಾರದಿತ್ತು" ಎಂದು ತಿಳಿಸಿದ್ದಾರೆ.
ಈ ಅಲಂಕಾರದ ಹೊಣೆ ಹೊತ್ತಿದ್ದ ಜಲ್ನಾದ ಈವೆಂಟ್ ಸ್ಟೈಲಿಂಗ್ ಸಂಸ್ಥೆ ತಕ್ಷಣ ಪ್ರತಿಕ್ರಿಯೆಗೆ ಲಭ್ಯವಾಗಲಿಲ್ಲ. ಆದರೆ ಈ ಹಿಂದೆ ನೀಡಿದ್ದ ಹೇಳಿಕೆಯಲ್ಲಿ, ನಂದಿಗ್ರಾಮ್ ಎಕ್ಸ್‌ಪ್ರೆಸ್‌ನ ಫಸ್ಟ್ ಎಸಿ ಕ್ಯಾಬಿನ್ ಅನ್ನು ಜಲ್ನಾದ ನವದಂಪತಿಗಳಿಗಾಗಿ ಮುಂಗಡ ಕಾಯ್ದಿರಿಸಲಾಗಿತ್ತು. ದಂಪತಿ ಛತ್ರಪತಿ ಸಂಭಾಜಿನಗರದಿಂದ ಕಾರಿನಲ್ಲಿ ಜಲ್ನಾಗೆ ಆಗಮಿಸಿದ್ದು, ರೈಲು ಹೊರಡುವ ಮುನ್ನ ತಮ್ಮ ಸಿಬ್ಬಂದಿ ಕ್ಯಾಬಿನ್ ಅನ್ನು ಅಲಂಕರಿಸಿದ್ದರು ಎಂದು ತಿಳಿಸಿತ್ತು.
ರೈಲು ಕ್ಯಾಬಿನ್ ಅಲಂಕರಿಸಲು ಯಾವುದೇ ಅಧಿಕೃತ ಅನುಮತಿಯ ಅಗತ್ಯವಿಲ್ಲ ಎಂಬ ವಾದವನ್ನೂ ಸಂಸ್ಥೆ ಮುಂದಿಟ್ಟಿದೆ. ಆದರೆ, ರೈಲ್ವೆ ನಿಯಮಗಳನ್ನು ಉಲ್ಲಂಘಿಸಿ ಖಾಸಗಿ ವ್ಯಕ್ತಿಗಳಿಗೆ ರೈಲಿನೊಳಗೆ ಪ್ರವೇಶ ನೀಡಲಾಗಿದೆಯೇ, ಭದ್ರತಾ ನಿಯಮಗಳನ್ನು ಪಾಲಿಸಲಾಗಿದೆಯೇ ಎಂಬ ಎಲ್ಲ ಆಯಾಮಗಳ ಕುರಿತು ದಕ್ಷಿಣ ಮಧ್ಯ ರೈಲ್ವೆ ತನಿಖೆ ಮುಂದುವರಿಸಿದೆ.