ಬೆಳಗಾವಿ, ಮಾ. 18 : ಬೇಸಿಗೆಯ ಮಧ್ಯೆ ಸುರಿದ ಅಕಾಲಿಕ ಮಳೆಯ ಅಬ್ಬರಕ್ಕೆ ಮಹಿಳೆಯೊಬ್ಬರು ಬಲಿಯಾಗಿರುವ ಘಟನೆ ಬೆಳಗಾವಿ ತಾಲೂಕಿನ ಹೊಸೂರ ಗ್ರಾಮದಲ್ಲಿ ಸಂಭವಿಸಿದೆ.
ಮೃತರನ್ನು 34 ವರ್ಷದ ಪರ್ವಿನ್ ಬೇಪಾರಿ ಎಂದು ಗುರುತಿಸಲಾಗಿದೆ. ಪತಿ ಶರೀಫ್ ಬೇಪಾರಿ ಅಪಾಯದಿಂದ ಪಾರಾಗಿದ್ದು, ಗಾಯಗೊಂಡ ಅವರನ್ನು ಬೀಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ದಂಪತಿ ಕೋಳಿಗಳನ್ನು ಮಾರಾಟ ಮಾಡಲು ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಮಳೆ ಹೆಚ್ಚಾದ ಕಾರಣ ಪಾಳು ಮನೆಯ ಕೆಳಗೆ ಆಶ್ರಯ ಪಡೆದಿದ್ದರು. ಮಳೆಗೆ ನೆನೆದಿದ್ದ ಮಣ್ಣು ಮತ್ತು ಕಲ್ಲಿನಿಂದ ನಿರ್ಮಿತ ಗೋಡೆ ಏಕಾಏಕಿ ಕುಸಿದು ಪರ್ವಿನ್ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಈ ಘಟನೆ ಕಾಕತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.