ಬಾಗಲಕೋಟ, ಅ. 7 (ಸಮದರ್ಶಿ ಸುದ್ದಿ): ಅಕ್ರಮ ಭ್ರೂಣಲಿಂಗ ಪತ್ತೆ ಹಾಗೂ ಗರ್ಭಪಾತ ನಡೆಸಲಾಗುತ್ತಿದೆ ಎನ್ನಲಾದ ಜಾಲವನ್ನು ಪತ್ತೆಹಚ್ಚಲು ಜಮಖಂಡಿ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ್ ಗರ್ಭಿಣಿಯಂತೆ ಮಾರುವೇಷ ಧರಿಸಿ, ಆರೋಗ್ಯ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳೊಂದಿಗೆ ಮಹಾರಾಷ್ಟ್ರಕ್ಕೆ ತೆರಳಿ ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ಅಂತರರಾಜ್ಯ ಜಾಲವೊಂದು ಬಯಲಾಗಿದೆ.
ಕರ್ನಾಟಕದ ಗರ್ಭಿಣಿಯರನ್ನು ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ತ ತಾಲೂಕಿನ ಜಾಡರ ಬಬಲಾದಿ ಗ್ರಾಮಕ್ಕೆ ಕರೆದೊಯ್ದು ಅಕ್ರಮವಾಗಿ ಭ್ರೂಣಲಿಂಗ ಪತ್ತೆ ಮಾಡಲಾಗುತ್ತಿದೆ ಹಾಗೂ ಗರ್ಭಪಾತ ನಡೆಸಲಾಗುತ್ತಿದೆ ಎಂಬ ಮಾಹಿತಿ ಅಧಿಕಾರಿಗಳಿಗೆ ಲಭಿಸಿತ್ತು. ಇದರ ಬೆನ್ನಲ್ಲೇ ಬಾಗಲಕೋಟೆ ಜಿಲ್ಲಾಧಿಕಾರಿ ಸಂಗಪ್ಪ ಅವರ ನಿರ್ದೇಶನದಲ್ಲಿ ಆರೋಗ್ಯ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳ ವಿಶೇಷ ತಂಡ ರಚಿಸಿ ರಹಸ್ಯ ಕಾರ್ಯಾಚರಣೆ ನಡೆಸಲಾಗಿದೆ.
ಈ ಜಾಲದಲ್ಲಿ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬ ಶಂಕೆ ಎದುರಿಸುತ್ತಿದ್ದ ಮಹಾಲಿಂಗಪುರದ ಕವಿತಾ ಬಾಡನವರ ಅವರನ್ನು ಸೋಮವಾರ ಮಧ್ಯಾಹ್ನ ಸುಮಾರು 3.30ಕ್ಕೆ ಅಧಿಕಾರಿಗಳು ವಿಚಾರಣೆ ನಡೆಸಿದಾಗ ಪ್ರಕರಣಕ್ಕೆ ಮಹತ್ವದ ಸುಳಿವು ಲಭಿಸಿದೆ.
ವಿಚಾರಣೆ ವೇಳೆ ಮಹಾರಾಷ್ಟ್ರದ ಜಾಡರ ಬಬಲಾದಿಯಲ್ಲಿ ಅಕ್ರಮ ಭ್ರೂಣಲಿಂಗ ಪತ್ತೆ ನಡೆಸಲಾಗುತ್ತಿದೆ ಎಂಬ ಮಾಹಿತಿ ದೊರೆತಿದೆ. ಅಲ್ಲದೆ, ಈಗಾಗಲೇ ಮೂರ್ನಾಲ್ಕು ಗರ್ಭಿಣಿಯರನ್ನು ಸ್ಕ್ಯಾನಿಂಗ್ ಹಾಗೂ ಗರ್ಭಪಾತಕ್ಕಾಗಿ ಅಲ್ಲಿಗೆ ಕರೆದೊಯ್ಯಲಾಗಿದೆ ಎಂಬ ಮಾಹಿತಿಯೂ ಅಧಿಕಾರಿಗಳಿಗೆ ಸಿಕ್ಕಿದೆ ಎಂದು ಜಿಲ್ಲಾಧಿಕಾರಿ ಸಂಗಪ್ಪ ತಿಳಿಸಿದ್ದಾರೆ.
ಈ ಮಾಹಿತಿ ಆಧರಿಸಿ ಜಾಲವನ್ನು ಸಾಕ್ಷ್ಯ ಸಮೇತ ಪತ್ತೆಹಚ್ಚಲು ಅಧಿಕಾರಿಗಳೇ ಗರ್ಭಿಣಿ ಹಾಗೂ ಆಕೆಯ ಸಂಬಂಧಿಕರ ಸೋಗಿನಲ್ಲಿ ತೆರಳುವ ಡಿಕಾಯ್ ಕಾರ್ಯಾಚರಣೆ ನಡೆಸಲು ನಿರ್ಧರಿಸಿದರು.
ಗರ್ಭಿಣಿಯಾದ ಎಸಿ; ನಾದಿನಿ, ತಾಯಿಯಾದ ಅಧಿಕಾರಿಗಳು
ಜಾಲದ ಸದಸ್ಯರಿಗೆ ಯಾವುದೇ ಅನುಮಾನ ಬಾರದಂತೆ ಅಧಿಕಾರಿಗಳು ಯೋಜನೆ ರೂಪಿಸಿದ್ದರು. ಜಮಖಂಡಿ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ್ ಗರ್ಭಿಣಿಯಂತೆ ವೇಷ ಧರಿಸಿದರೆ, ಮೆಡಿಕಲ್ ಆಕ್ಟ್ ಉಪನಿರ್ದೇಶಕಿ ಡಾ. ಶೋಭಾ ಟಿ.ಆರ್. ನಾದಿನಿಯಂತೆ ಅವರೊಂದಿಗೆ ತೆರಳಿದ್ದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುವರ್ಣಾ ಕುಲಕರ್ಣಿ ಗರ್ಭಿಣಿಯ ತಾಯಿಯಂತೆ ನಟಿಸಿದ್ದರು.
ರಬಕವಿ-ಬನಹಟ್ಟಿ ತಹಶೀಲ್ದಾರ್ ಗಿರೀಶ ಸ್ವಾದಿ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿ ಮನು ಕೂಡ ವಿಶೇಷ ಕಾರ್ಯಾಚರಣೆ ತಂಡದಲ್ಲಿದ್ದರು.
ರಾತ್ರಿ ಸುಮಾರು 9.30ಕ್ಕೆ ಅಧಿಕಾರಿಗಳ ತಂಡ ಮಹಾರಾಷ್ಟ್ರದ ಜಾಡರ ಬಬಲಾದಿ ಗ್ರಾಮ ತಲುಪಿತು. ಭ್ರೂಣದ ಲಿಂಗ ಪತ್ತೆ ಮಾಡಿಸಿಕೊಳ್ಳಬೇಕೆಂಬ ನೆಪದಲ್ಲಿ ತಂಡವು ನಿಖಿಲ್ ತೇಲಿ ಎಂಬಾತನನ್ನು ಸಂಪರ್ಕಿಸಿತು.
ನಿಖಿಲ್, ಸ್ಕ್ಯಾನಿಂಗ್ ಅನ್ನು ತೋಟದ ಮನೆಯೊಂದರಲ್ಲಿ ನಡೆಸಲಾಗುವುದು ಎಂದು ತಿಳಿಸಿದ್ದಾನೆ ಎನ್ನಲಾಗಿದೆ. ಬಳಿಕ ನಿಖಿಲ್‌ನ ತಾಯಿ ದಾನಕ್ಕ ತೇಲಿ ಸ್ಕ್ಯಾನಿಂಗ್‌ಗೆ ಹಣ ಕೇಳಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆದರೆ ಪೋರ್ಟೆಬಲ್ ಸ್ಕ್ಯಾನಿಂಗ್ ಯಂತ್ರವನ್ನು ಅಲ್ಲಿರಿಸದೆ ಕರ್ಜಗಿ ಗ್ರಾಮದ ಕವಿತಾ ಗೋಡೆಕರ್ ಅವರ ಮನೆಯಲ್ಲಿ ಇರಿಸಲಾಗಿದೆ ಎಂಬ ಮಾಹಿತಿ ತಂಡಕ್ಕೆ ದೊರೆತಿದೆ.
ಸ್ಕ್ಯಾನಿಂಗ್‌ಗೆ ಸಿದ್ಧತೆ ನಡೆಯುತ್ತಿದ್ದಾಗಲೇ ದಾಳಿ
ಮಾಹಿತಿ ದೊರೆಯುತ್ತಿದ್ದಂತೆ ಅಧಿಕಾರಿಗಳ ತಂಡ ಕರ್ಜಗಿ ಗ್ರಾಮದಲ್ಲಿರುವ ಕವಿತಾ ಗೋಡೆಕರ್ ಮತ್ತು ಆಕೆಯ ಪತಿ ಬಸವರಾಜ ಗೋಡೆಕರ್ ಅವರ ಮನೆಗೆ ತೆರಳಿತು.
ಅಧಿಕಾರಿಗಳು ಅಲ್ಲಿಗೆ ತಲುಪಿದಾಗ ಪೋರ್ಟೆಬಲ್ ಅಲ್ಟ್ರಾಸೌಂಡ್ ಯಂತ್ರ ಬಳಸಿ ಸ್ಕ್ಯಾನಿಂಗ್ ನಡೆಸಲು ಸಿದ್ಧತೆ ನಡೆಯುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಕ್ಷಣ ಕಾರ್ಯಪ್ರವೃತ್ತರಾದ ಅಧಿಕಾರಿಗಳು ದಾಳಿ ನಡೆಸಿ ಅಲ್ಲಿದ್ದ ಪೋರ್ಟೆಬಲ್ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಯಂತ್ರ ಹಾಗೂ ಅದಕ್ಕೆ ಸಂಬಂಧಿಸಿದ ಉಪಕರಣಗಳನ್ನು ವಶಪಡಿಸಿಕೊಂಡರು.
ಜಾಲದ ಪ್ರಮುಖ ನಿರ್ವಾಹಕ ಎಂದು ಅಧಿಕಾರಿಗಳು ಗುರುತಿಸಿರುವ ಸಂಜಯ್ ವಾಘ್ಮೋರೆ ಅಲಿಯಾಸ್ ಪಾಟೀಲ ಕಾರ್ಯಾಚರಣೆಯ ಸುಳಿವು ಪಡೆದು ಪರಾರಿಯಾಗಿದ್ದಾನೆ. ಆತನ ಪತ್ತೆಗೆ ಶೋಧ ಕಾರ್ಯ ಮುಂದುವರಿದಿದೆ.
ದಾಳಿಯ ನಂತರ ವಶಪಡಿಸಿಕೊಂಡ ಪೋರ್ಟೆಬಲ್ ಸ್ಕ್ಯಾನಿಂಗ್ ಯಂತ್ರವನ್ನು ಅಧಿಕಾರಿಗಳು ಮಹಾರಾಷ್ಟ್ರದ ಉಮದಿ ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋಗಿ ಅಲ್ಲಿನ ಸಕ್ಷಮ ವೈದ್ಯಕೀಯ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಸಂಜಯ್ ವಾಘ್ಮೋರೆ, ನಿಖಿಲ್ ತೇಲಿ, ದಾನಕ್ಕ ತೇಲಿ ಹಾಗೂ ಕವಿತಾ ಗೋಡೆಕರ್ ವಿರುದ್ಧ ಉಮದಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ಗರ್ಭಧಾರಣಾಪೂರ್ವ ಮತ್ತು ಪ್ರಸವಪೂರ್ವ ರೋಗನಿರ್ಣಯ ತಂತ್ರಗಳ (ಪಿಸಿಪಿಎನ್‌ಡಿಟಿ) ಕಾಯ್ದೆ ಉಲ್ಲಂಘನೆ, ಅಧಿಕೃತ ಅನುಮತಿ ಇಲ್ಲದೆ ವೈದ್ಯಕೀಯ ವೃತ್ತಿ ನಡೆಸಿದ ಆರೋಪ, ಅಪರಾಧ ಸಂಚು ಹಾಗೂ ಅಪರಾಧಕ್ಕೆ ಸಹಕಾರ ನೀಡಿದ ಆರೋಪಗಳಡಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕದ ಗರ್ಭಿಣಿಯರನ್ನು ಮಹಾರಾಷ್ಟ್ರಕ್ಕೆ ಕರೆದೊಯ್ಯುತ್ತಿದ್ದ ಆರೋಪ
ಪ್ರಕರಣದಲ್ಲಿ ಹೊರಬಂದಿರುವ ಪ್ರಮುಖ ಅಂಶವೆಂದರೆ ಕರ್ನಾಟಕದ ಗರ್ಭಿಣಿಯರನ್ನು ಮಹಾರಾಷ್ಟ್ರಕ್ಕೆ ಕರೆದೊಯ್ದು ಅಕ್ರಮವಾಗಿ ಭ್ರೂಣಲಿಂಗ ಪತ್ತೆ ಮಾಡಲಾಗುತ್ತಿತ್ತು ಎಂಬ ಆರೋಪ.
ಜಾಡರ ಬಬಲಾದಿಯಲ್ಲಿ ಅಕ್ರಮ ಭ್ರೂಣಲಿಂಗ ಪತ್ತೆ ನಡೆಸಲಾಗುತ್ತಿದೆ ಹಾಗೂ ಮೂರ್ನಾಲ್ಕು ಗರ್ಭಿಣಿಯರನ್ನು ಈಗಾಗಲೇ ಸ್ಕ್ಯಾನಿಂಗ್ ಮತ್ತು ಗರ್ಭಪಾತಕ್ಕಾಗಿ ಅಲ್ಲಿಗೆ ಕರೆದೊಯ್ಯಲಾಗಿದೆ ಎಂಬ ಮಾಹಿತಿ ಆಧರಿಸಿಯೇ ಅಧಿಕಾರಿಗಳು ಈ ಕಾರ್ಯಾಚರಣೆ ನಡೆಸಿದ್ದಾರೆ.
ಹೀಗಾಗಿ ಕರ್ನಾಟಕ-ಮಹಾರಾಷ್ಟ್ರ ಗಡಿ ಪ್ರದೇಶವನ್ನು ಬಳಸಿಕೊಂಡು ವ್ಯವಸ್ಥಿತ ಜಾಲ ಕಾರ್ಯನಿರ್ವಹಿಸುತ್ತಿತ್ತೇ, ಈ ಜಾಲದ ವ್ಯಾಪ್ತಿ ಎಷ್ಟು ದೊಡ್ಡದಾಗಿದೆ ಮತ್ತು ಇದರ ಹಿಂದೆ ಇನ್ನೂ ಯಾರೆಲ್ಲ ಇದ್ದಾರೆ ಎಂಬುದನ್ನು ಪತ್ತೆಹಚ್ಚುವುದು ತನಿಖೆಯ ಮುಂದಿನ ಪ್ರಮುಖ ಭಾಗವಾಗಿದೆ.
ಬಾಗಲಕೋಟ ಜಿಲ್ಲಾಧಿಕಾರಿ ಸಂಗಪ್ಪ ಅವರ ನಿರ್ದೇಶನದಲ್ಲಿ ಈ ವಿಶೇಷ ಕಾರ್ಯಾಚರಣೆ ತಂಡ ರಚಿಸಲಾಗಿತ್ತು. ಜಮಖಂಡಿ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ್, ಮೆಡಿಕಲ್ ಆಕ್ಟ್ ಉಪನಿರ್ದೇಶಕಿ ಡಾ. ಶೋಭಾ ಟಿ.ಆರ್., ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುವರ್ಣಾ ಕುಲಕರ್ಣಿ, ರಬಕವಿ-ಬನಹಟ್ಟಿ ತಹಶೀಲ್ದಾರ್ ಗಿರೀಶ ಸ್ವಾದಿ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿ ಮನು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಕಾರ್ಯಾಚರಣೆಯ ವಿವರ ನೀಡಲು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ. ಜಗದೀಶ್ ಹಾಗೂ ಡಾ. ಸುವರ್ಣಾ ಕುಲಕರ್ಣಿ ಉಪಸ್ಥಿತರಿದ್ದರು.