ದಾವಣಗೆರೆ, ಅ. ೮: ಆನ್‌ಲೈನ್ ಗೇಮ್‌ನಲ್ಲಿ ಹಣ ಹೂಡುವಂತೆ ಸ್ನೇಹಿತರು ನಿರಂತರ ಒತ್ತಡ ಹೇರಿ, ಹಣ ನೀಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರಿಂದ ಮನನೊಂದ 13 ವರ್ಷದ ಬಾಲಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚನ್ನಗಿರಿ ತಾಲೂಕಿನ ಪಾಂಡೊಮಟ್ಟಿಯಲ್ಲಿ ನಡೆದಿದೆ.
ಗ್ರಾಮದ ಮನೋಜ್ ಟಿ.ಆರ್. (13) ಮೃತಪಟ್ಟ ಬಾಲಕ. ‘ಫ್ರೀ ಫೈರ್’ ಆನ್‌ಲೈನ್ ಗೇಮ್‌ನಲ್ಲಿ ಹಣ ಹಾಕುವಂತೆ ಗ್ರಾಮದ ನಾಲ್ವರು ಬಾಲಕರು ಮನೋಜ್‌ಗೆ ಒತ್ತಾಯಿಸುತ್ತಿದ್ದರು. ಹಣ ತರದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು ಎಂದು ಮೃತ ಬಾಲಕನ ಪೋಷಕರು ಆರೋಪಿಸಿದ್ದಾರೆ.
ಸ್ನೇಹಿತರ ಒತ್ತಡಕ್ಕೆ ಮಣಿದ ಮನೋಜ್, ಮನೆಯಲ್ಲಿ ಇಟ್ಟಿದ್ದ ಸುಮಾರು 4 ಲಕ್ಷ ರೂ. ಹಣವನ್ನು ತೆಗೆದುಕೊಂಡು ಹೋಗಿದ್ದ ಎನ್ನಲಾಗಿದೆ. ಮನೆಯಲ್ಲಿ ಹಣ ಕಡಿಮೆಯಾಗಿರುವುದನ್ನು ಗಮನಿಸಿದ ಕುಟುಂಬದವರು ವಿಚಾರಿಸಿದಾಗ, ನಾಲ್ವರು ಬಾಲಕರು ಆನ್‌ಲೈನ್ ಗೇಮ್‌ಗಾಗಿ ಹಣ ತರುವಂತೆ ಒತ್ತಡ ಹೇರುತ್ತಿದ್ದ ವಿಷಯ ಬೆಳಕಿಗೆ ಬಂದಿದೆ.
ಹಣಕ್ಕಾಗಿ ಮನೋಜ್ ಮೇಲೆ ಹಲ್ಲೆಯನ್ನೂ ನಡೆಸಲಾಗಿತ್ತು. ನಿರಂತರ ಬೆದರಿಕೆ, ಹಣಕ್ಕಾಗಿ ಕಿರುಕುಳ ಹಾಗೂ ಹಲ್ಲೆಯಿಂದ ಮಾನಸಿಕವಾಗಿ ನೊಂದ ಬಾಲಕ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಪೋಷಕರು ದೂರಿದ್ದಾರೆ.
ಘಟನೆ ಸಂಬಂಧ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಾಲಕನ ಸಾವಿಗೆ ಕಾರಣವಾದ ಪರಿಸ್ಥಿತಿಗಳು ಹಾಗೂ ಆರೋಪಗಳ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.