ಬೆಂಗಳೂರು, ಸೆ 1 : (ಸಮದರ್ಶಿ ಸುದ್ದಿ) - ಉತ್ತರ ವಿಭಾಗದ ಡಿಸಿಪಿ ನೇಮಗೌಡ ಅವರ ಮೇಲೆ ಯೂತ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಹಲ್ಲೆ ನಡೆಸಿದ್ದಾರೆ ಎನ್ನಲಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕಳೆದ ಭಾನುವಾರ ಸಂಜೆ ಬಿಜೆಪಿ ಕಚೇರಿ ಬಳಿ ನಡೆದ ಗಲಾಟೆ ವೇಳೆ ಘಟನೆ ನಡೆದಿದೆ ಎನ್ನಲಾಗಿದೆ.
ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ್ದ ಕಾಂಗ್ರೆಸ್ ಕಾರ್ಯಕರ್ತರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದರು. ಈ ಸಂದರ್ಭದಲ್ಲಿ ಯೂತ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಅವರು ಕರ್ತವ್ಯದಲ್ಲಿದ್ದ ಪೊಲೀಸರೊಂದಿಗೆ ಘರ್ಷಣೆಗೆ ಇಳಿದಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ಮಂಜುನಾಥ್ ಅವರು ಲಾಠಿ ಚಾರ್ಜ್ ನಡೆಸುತ್ತಿದ್ದ ಡಿಸಿಪಿ ನೇಮಗೌಡ ಅವರೊಂದಿಗೆ ತಳ್ಳಾಟ ನಡೆಸುತ್ತಿರುವ ದೃಶ್ಯಗಳು ಕಂಡುಬರುತ್ತವೆ ಎಂದು ಜೆಡಿಎಸ್ ಆರೋಪಿಸಿದೆ. ಡಿಸಿಪಿ ಅವರ ಮೇಲೆ ಹಲ್ಲೆ ನಡೆಸಿರುವುದು ವಿಡಿಯೋದಲ್ಲೇ ಸ್ಪಷ್ಟವಾಗಿದೆ ಎಂದು ಜೆಡಿಎಸ್ ಹೇಳಿದೆ.
‘ಪೊಲೀಸ್ ಅಧಿಕಾರಿಯ ಮೇಲೆಯೇ ಹಲ್ಲೆ; ಕ್ರಮ ಏಕೆ ಇಲ್ಲ?’
ಈ ವಿಡಿಯೋವನ್ನು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಂಚಿಕೊಂಡಿರುವ ಜೆಡಿಎಸ್, ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.
“ಮಂಜುನಾಥ್ ಮತ್ತು ಅವರ ಗ್ಯಾಂಗ್ ಬೀದಿ ರೌಡಿಗಳಂತೆ ಹಲ್ಲೆ ನಡೆಸಿರುವುದು ವಿಡಿಯೋ ಸಾಕ್ಷಿಯಲ್ಲೇ ಸ್ಪಷ್ಟವಾಗಿದೆ. ಪ್ರಿಯಾಂಕ್ ಖರ್ಗೆ ಅವರೇ, ನೀವೇನು ರಾಜ್ಯದ ಗೃಹ ಸಚಿವರೋ ಅಥವಾ ಕೇವಲ ವಿಪಕ್ಷಗಳಿಗಷ್ಟೇ ಗೃಹ ಸಚಿವರೋ?” ಎಂದು ಜೆಡಿಎಸ್ ಪ್ರಶ್ನಿಸಿದೆ.
ಕರ್ತವ್ಯನಿರತ ಐಪಿಎಸ್ ಅಧಿಕಾರಿಯ ಮೇಲೆಯೇ ಹಲ್ಲೆ ನಡೆದಿದ್ದರೂ ಎಫ್‌ಐಆರ್ ದಾಖಲಿಸಿಲ್ಲ, ಬಂಧನವೂ ಆಗಿಲ್ಲ ಎಂದು ಜೆಡಿಎಸ್ ಆರೋಪಿಸಿದೆ. ಕಾಂಗ್ರೆಸ್ ಸರ್ಕಾರದ ಮೌನವೇ ಗೂಂಡಾಗಿರಿಗೆ ಪರವಾನಗಿ ನೀಡಿದಂತಾಗಿದೆಯೇ ಎಂದು ಪ್ರಶ್ನಿಸಿದೆ.
ಪೊಲೀಸರ ಮೇಲೆಯೇ ಕೈ ಮಾಡಿದರೂ ಎಫ್‌ಐಆರ್ ದಾಖಲಿಸದೆ ಪೊಲೀಸರ ಕೈಕಟ್ಟಿ ಹಾಕಿರುವುದು ಯಾರು? ಸ್ವಪಕ್ಷೀಯರ ವಿರುದ್ಧ ಕ್ರಮ ಕೈಗೊಳ್ಳದೆ ಅವರನ್ನು ರಕ್ಷಿಸಲು ಪೊಲೀಸ್ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆಯೇ ಎಂದು ಜೆಡಿಎಸ್ ಆರೋಪಿಸಿದೆ.
ಕಾನೂನು ಎಲ್ಲರಿಗೂ ಒಂದೇ ಆಗಿದ್ದರೆ, ಪೊಲೀಸರ ಮೇಲೆ ಹಲ್ಲೆ ನಡೆಸಿದ ಆರೋಪದ ಕಾಂಗ್ರೆಸ್ ಕಾರ್ಯಕರ್ತರನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಗೃಹ ಸಚಿವರನ್ನು ಒತ್ತಾಯಿಸಿದೆ.