ಧಾರವಾಡ, ಆಗಸ್ಟ್ 31: ನಟ ಪ್ರಕಾಶ್ ರಾಜ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಮುದಾಯ ಸಂಘಟನೆಯ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಯತ್ನಿಸಿ ಗಲಾಟೆ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಬಿಜೆಪಿ–ಸಂಘಪರಿವಾರದ ಬೆಂಬಲಿಗರು ಎನ್ನಲಾದ ಕೆಲವರ ವಿರುದ್ಧ ದೂರು ದಾಖಲಾಗಿದೆ.
ಆಗಸ್ಟ್ 30ರಂದು ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಸಭಾಭವನದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಕೆಲವರು ಯತ್ನಿಸಿದ್ದು, ಈ ಕುರಿತು ಸಮುದಾಯ ಸಂಘಟನೆಯ ಧಾರವಾಡ ಅಧ್ಯಕ್ಷ ಬಿ.ಐ. ಇಳಿಗೇರ ಅವರು ಸೋಮವಾರ (ಆಗಸ್ಟ್ 31) ಧಾರವಾಡದ ಟೌನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಅವರು ಪೊಲೀಸರಿಗೆ ಮನವಿ ಮಾಡಿದ್ದಾರೆ.
ಕಾರ್ಯಕ್ರಮಕ್ಕೆ ಅತಿಥಿಗಳು ಆಗಮಿಸುವ ಸಂದರ್ಭದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘದ ಗೇಟ್ ಎದುರು ಕೆಲವರು ಗುಂಪುಗೂಡಿ ಘೋಷಣೆಗಳನ್ನು ಕೂಗುತ್ತಾ ಗಲಾಟೆ ನಡೆಸಿ ಕಾರ್ಯಕ್ರಮ ನಡೆಯದಂತೆ ಮಾಡಲು ಪ್ರಯತ್ನಿಸಿದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಈ ವೇಳೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಾಹಿತಿಗಳು, ಬರಹಗಾರರು, ಕವಿಗಳು ಹಾಗೂ ಉಪನ್ಯಾಸಕರು ಮಧ್ಯಪ್ರವೇಶಿಸಿ, ಅತಿಥಿಗಳನ್ನು ಸಭಾಂಗಣದೊಳಗೆ ಕರೆದೊಯ್ದರು. ನಂತರ ಕಾರ್ಯಕ್ರಮವು ಯಾವುದೇ ಅಡ್ಡಿಯಿಲ್ಲದೆ ಮುಂದುವರಿಯಿತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಕಾರ್ಯಕ್ರಮದ ಅಂತ್ಯದಲ್ಲಿ ಬಹುಭಾಷಾ ನಟ ಪ್ರಕಾಶ್ ರಾಜ್ ಅವರ ಕುರಿತು ವ್ಯಕ್ತಿಯೊಬ್ಬರು ಸಭಾಂಗಣದ ವೇದಿಕೆಯ ಮುಂಭಾಗಕ್ಕೆ ಬಂದು ಗಲಾಟೆ ನಡೆಸಿ ಕಾರ್ಯಕ್ರಮಕ್ಕೆ ತೊಂದರೆ ಉಂಟುಮಾಡಲು ಪ್ರಯತ್ನಿಸಿದರು ಎನ್ನಲಾಗಿದೆ. ಪೊಲೀಸರು ಮಧ್ಯಪ್ರವೇಶಿಸಿದ ಬಳಿಕ ಆ ವ್ಯಕ್ತಿಯನ್ನು ಸಭಾಂಗಣದಿಂದ ಹೊರಗೆ ಕಳುಹಿಸಲು ಪ್ರಯತ್ನಿಸಲಾಯಿತು. ಈ ಸಂದರ್ಭದಲ್ಲಿ ಕಾರ್ಯಕ್ರಮ ಆಯೋಜಕರು ಹಾಗೂ ಭಾಗವಹಿಸಿದ್ದವರು ಸಂಯಮದಿಂದ ವರ್ತಿಸಿದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಪೋಸ್ಟರ್‌ಗಳಿಗೆ ಮಸಿ; ಬ್ಯಾನರ್ ಹರಿದ ಆರೋಪ
ಕಾರ್ಯಕ್ರಮ ಮುಗಿದ ಬಳಿಕ ಅತಿಥಿಗಳು ಸಭಾಂಗಣದಿಂದ ಹೊರಬರುವ ಸಂದರ್ಭದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘದ ಗೇಟ್ ಬಳಿ ಹಾಕಲಾಗಿದ್ದ ಪ್ರಕಾಶ್ ರಾಜ್ ಅವರ ಪೋಸ್ಟರ್‌ಗಳಿಗೆ ಎಬಿವಿಪಿ ಸದಸ್ಯರು ಎನ್ನಲಾದ ಕೆಲವರು ಮಸಿ ಬಳಿದು, ಪೋಸ್ಟರ್ ಹಾಗೂ ಫ್ಲೆಕ್ಸ್ ಬ್ಯಾನರ್‌ಗಳನ್ನು ಹರಿದು ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಅಲ್ಲದೆ, ಪ್ರಕಾಶ್ ರಾಜ್ ವಿರುದ್ಧ ಘೋಷಣೆಗಳನ್ನು ಕೂಗುತ್ತಾ, ಅವರ ಮೇಲೆ ಹಲ್ಲೆ ನಡೆಸಲು ಸಂಚು ರೂಪಿಸಲಾಗಿತ್ತು ಎಂದೂ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇದರಿಂದ ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು ಎನ್ನಲಾಗಿದೆ.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರು ಈ ಕೃತ್ಯವನ್ನು ಖಂಡಿಸಿ, ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರನ್ನು ಒತ್ತಾಯಿಸಿದರು. ಬಳಿಕ ಪೊಲೀಸರು ಕೆಲವರನ್ನು ತಮ್ಮ ವಾಹನದಲ್ಲಿ ಕರೆದೊಯ್ದರು ಎಂದು ದೂರುದಾರರು ತಿಳಿಸಿದ್ದಾರೆ.
ದೂರು ನೀಡುವ ಸಂದರ್ಭದಲ್ಲಿ ‘ಎದ್ದೇಳು ಕರ್ನಾಟಕ’ ಸಂಘಟನೆಯ ಡಾ. ಇಸಬೆಲ್ ಝೇವಿಯರ್ ಸೇರಿದಂತೆ ವಿವಿಧ ಮುಖಂಡರು ಉಪಸ್ಥಿತರಿದ್ದರು. ಪ್ರಕರಣದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದು, ಗಲಾಟೆಯಲ್ಲಿ ಭಾಗಿಯಾಗಿದ್ದವರ ವಿರುದ್ಧದ ಆರೋಪಗಳ ಕುರಿತು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ.