ಭುವನೇಶ್ವರ, ಏ. 28 : ಒಡಿಶಾದ ಕಿಯೋಂಜಾರ್ ಜಿಲ್ಲೆಯ ಪಾಟ್ನಾ ಬ್ಲಾಕ್‌ನ ಮಲ್ಲಿಪಾಸಿ ಪ್ರದೇಶದಲ್ಲಿರುವ ಗ್ರಾಮೀಣ ಬ್ಯಾಂಕ್‌ನಲ್ಲಿ ಮಾನವೀಯತೆ, ಅರಿವು ಕೊರತೆ ಮತ್ತು ವ್ಯವಸ್ಥೆಯ ವೈಫಲ್ಯವನ್ನು ತೋರಿಸುವ ಘಟನೆ ಬೆಳಕಿಗೆ ಬಂದಿದೆ. ಬುಡಕಟ್ಟು ಸಮುದಾಯದ ಜಿತು ಮುಂಡಾ (50) ಎಂಬ ವ್ಯಕ್ತಿಯು ತನ್ನ ಮೃತ ಸಹೋದರಿಯ ಅಸ್ಥಿಪಂಜರವನ್ನು ಸಮಾಧಿಯಿಂದ ಅಗೆದು ಬ್ಯಾಂಕ್‌ಗೆ ತಂದು, ಸಾವಿನ ಪುರಾವೆ ನೀಡಲು ಯತ್ನಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಡಯಾನಾಳಿ ಗ್ರಾಮದ ನಿವಾಸಿಯಾದ ಜಿತು ಮುಂಡಾ, ಜನವರಿ 26, 2026ರಂದು ಮೃತಪಟ್ಟ ತನ್ನ ಅಕ್ಕ ಕಲ್ರಾ ಮುಂಡಾ (56) ಅವರ ಖಾತೆಯಲ್ಲಿ ಜಮಾ ಇದ್ದ ಸುಮಾರು ₹19,000 ರಿಂದ ₹20,000ರವರೆಗಿನ ಹಣವನ್ನು ಹಿಂಪಡೆಯಲು ಪದೇ ಪದೇ ಬ್ಯಾಂಕ್‌ಗೆ ಭೇಟಿ ನೀಡುತ್ತಿದ್ದನು. ಪ್ರತೀ ಬಾರಿ ಬ್ಯಾಂಕ್ ಸಿಬ್ಬಂದಿ ಮರಣ ಪ್ರಮಾಣಪತ್ರ ಹಾಗೂ ಕಾನೂನುಬದ್ಧ ಉತ್ತರಾಧಿಕಾರಿ ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸುತ್ತಿದ್ದರು. ಕೆಲ ಸಂದರ್ಭಗಳಲ್ಲಿ ಖಾತೆದಾರಳನ್ನೇ ಕರೆತರಬೇಕು ಎಂಬುದಾಗಿ ಹೇಳಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ.
ಆದರೆ, ಅನಕ್ಷರಸ್ಥನಾದ ಮುಂಡಾಗೆ ಈ ಪ್ರಕ್ರಿಯೆಗಳ ಅರ್ಥ ಹಾಗೂ ಅಗತ್ಯವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗಿರಲಿಲ್ಲ. ದಾಖಲೆಗಳೇ ಪುರಾವೆ ಎಂಬುದನ್ನು ತಿಳಿಯದ ಆತ, ತನ್ನ ಸಹೋದರಿಯ ಸಾವನ್ನು ನೇರವಾಗಿ ತೋರಿಸುವುದೇ ಸಾಕ್ಷಿ ಎಂದು ಭಾವಿಸಿ ಸಮಾಧಿಯನ್ನು ಅಗೆದು ಅಸ್ಥಿಪಂಜರವನ್ನು ಹೊರತೆಗೆದಿದ್ದಾನೆ. ಬಳಿಕ ಮೂಳೆಗಳನ್ನು ಚೀಲದಲ್ಲಿ ಸಂಗ್ರಹಿಸಿ ಬ್ಯಾಂಕ್‌ಗೆ ಬಂದು ಸಿಬ್ಬಂದಿಗೆ ತೋರಿಸಿದ್ದಾನೆ.
“ಸಹೋದರಿ ಸತ್ತಿದ್ದಾಳೆ ಎಂದು ನಾನು ಹಲವು ಬಾರಿ ಹೇಳಿದ್ದೆ. ಆದರೆ ಅವರು ಪುರಾವೆ ಕೇಳಿದರು. ಆದ್ದರಿಂದ ಅವಳನ್ನು ತಂದು ತೋರಿಸಿದೆ” ಎಂದು ಜಿತು ಮುಂಡಾ ಸ್ಥಳೀಯರಿಗೆ ತಿಳಿಸಿದ್ದಾನೆ ಎನ್ನಲಾಗಿದೆ.
ಈ ದೃಶ್ಯ ಕಂಡ ಬ್ಯಾಂಕ್ ಸಿಬ್ಬಂದಿ ಮತ್ತು ಗ್ರಾಹಕರು ಬೆಚ್ಚಿಬಿದ್ದು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪಾಟ್ನಾ ಪೊಲೀಸ್ ಠಾಣೆಯ ಅಧಿಕಾರಿ ಕಿರಣ ಪ್ರಸಾದ್ ಸಾಹು, ಪರಿಸ್ಥಿತಿಯನ್ನು ನಿಯಂತ್ರಿಸಿ ಮುಂಡಾವನ್ನು ಸಮಾಧಾನಪಡಿಸಿದರು. “ಅವರು ಅನಕ್ಷರಸ್ಥ ಬುಡಕಟ್ಟು ವ್ಯಕ್ತಿ. ಕಾನೂನುಬದ್ಧ ಉತ್ತರಾಧಿಕಾರಿ ಅಥವಾ ನಾಮನಿರ್ದೇಶನದ ಬಗ್ಗೆ ತಿಳಿದಿಲ್ಲ. ಬ್ಯಾಂಕ್ ಸಿಬ್ಬಂದಿಯೂ ಪ್ರಕ್ರಿಯೆಯನ್ನು ಸರಿಯಾಗಿ ತಿಳಿಸಲು ವಿಫಲರಾಗಿದ್ದಾರೆ” ಎಂದು ಅವರು ತಿಳಿಸಿದ್ದಾರೆ.
ಘಟನೆಯ ನಂತರ, ಅಧಿಕಾರಿಗಳ ಸಮಾಲೋಚನೆಯ ಮೂಲಕ ಮುಂಡಾ ಅಸ್ಥಿಪಂಜರವನ್ನು ಮರು ಸಮಾಧಿ ಮಾಡಲು ಒಪ್ಪಿಕೊಂಡನು. ಪೊಲೀಸರ ಸಮ್ಮುಖದಲ್ಲಿ ಅವಶೇಷಗಳನ್ನು ಮತ್ತೆ ಸಮಾಧಿ ಮಾಡಲಾಯಿತು.
ಇದೇ ವೇಳೆ, ಸ್ಥಳೀಯ ಅಭಿವೃದ್ಧಿ ಅಧಿಕಾರಿ ಮನಾಸ್ ದಂಡಪತ್ ಪತ್ರಿಕೆಗಳಿಗೆ ಪ್ರತಿಕ್ರಯಿಸಿ, “ಕಲ್ರಾ ಮುಂಡಾ ಅವರ ಉತ್ತರಾಧಿಕಾರಿ ಕುರಿತು ಯಾರೂ ನಮ್ಮನ್ನು ಸಂಪರ್ಕಿಸಿರಲಿಲ್ಲ. ಇಂದು ಈ ಘಟನೆ ಮೂಲಕ ವಿಷಯ ತಿಳಿದುಬಂದಿದೆ. ಸಮಸ್ಯೆ ಪರಿಹರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ” ಎಂದು ತಿಳಿಸಿದ್ದಾರೆ.
ಬ್ಯಾಂಕ್ ಮೂಲಗಳ ಪ್ರಕಾರ, ಕಲ್ರಾ ಮುಂಡಾ ಅವರ ಖಾತೆಯ ನಾಮನಿರ್ದೇಶಿತರೂ ಈಗಾಗಲೇ ಮೃತಪಟ್ಟಿದ್ದಾರೆ. ಹೀಗಾಗಿ, ನಿಯಮಾನುಸಾರ ಜಿತು ಮುಂಡಾ ಮಾತ್ರವೇ ಹಣದ ಏಕೈಕ ಹಕ್ಕುದಾರನಾಗಿದ್ದಾನೆ. ಈ ಹಿನ್ನೆಲೆಯಲ್ಲಿ, ಸ್ಥಳೀಯ ಆಡಳಿತವು ಬ್ಯಾಂಕ್ ಅಧಿಕಾರಿಗಳಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದು, ಜಿತು ಮುಂಡಾಗೆ ಶೀಘ್ರದಲ್ಲೇ ಹಣ ದೊರಕುವಂತೆ ವ್ಯವಸ್ಥೆ ಮಾಡಲಾಗುತ್ತದೆ ಎಂದು ಭರವಸೆ ನೀಡಲಾಗಿದೆ.
ಈ ಘಟನೆ ಗ್ರಾಮೀಣ ಮತ್ತು ಬುಡಕಟ್ಟು ಪ್ರದೇಶಗಳಲ್ಲಿ ಕಾನೂನು ಪ್ರಕ್ರಿಯೆಗಳ ಬಗ್ಗೆ ಅರಿವು ಕೊರತೆ, ಮಾಹಿತಿ ವಿನಿಮಯದ ಅಭಾವ ಹಾಗೂ ಸಾರ್ವಜನಿಕ ಸೇವೆಗಳ ಸರಿಯಾದ ಮಾರ್ಗದರ್ಶನದ ಅಗತ್ಯವನ್ನು ಸ್ಪಷ್ಟವಾಗಿ ಎತ್ತಿಹಿಡಿದಿದೆ.