ಹುಬ್ಬಳ್ಳಿ, ಮೇ 9 : ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬ ತನ್ನ ಪತ್ನಿ, 6 ತಿಂಗಳ ಮಗು ಸೇರಿದಂತೆ ಕುಟುಂಬದ 5 ಜನರ ಮೇಲೆ ಆಸಿಡ್ ದಾಳಿ ನಡೆಸಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಹುಬ್ಬಳ್ಳಿಯ ತಾರಿಹಾಳದ ವಾಜಪೇಯಿ ನಗರದಲ್ಲಿ ಘಟನೆ ನಡೆದಿದ್ದು, ಸುರೇಶ ಬೈಲ್ ಪತ್ತಾರ (33) ಎಂಬಾತನನ್ನು ಆರೋಪಿಯಾಗಿ ಗುರುತಿಸಲಾಗಿದೆ.
ನಾದಿನಿಯರ ಫೋಟೋ ಕ್ಲಿಕ್ಕಿಸಿದ ವಿಚಾರವಾಗಿ ಪತಿ-ಪತ್ನಿ ನಡುವೆ ಜಗಳ ಆರಂಭಗೊಂಡಿದ್ದು, ವಾಗ್ವಾದ ತೀವ್ರಗೊಂಡ ಸಂದರ್ಭದಲ್ಲಿ ಕೋಪಗೊಂಡ ಸುರೇಶ ಸ್ಥಳದಲ್ಲಿದ್ದವರ ಮೇಲೆ ಆಸಿಡ್ ಎರಚಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯಲ್ಲಿ ಪತ್ನಿ ರಾಜೇಶ್ವರಿ (24), 6 ತಿಂಗಳ ಮಗು, ಶೃತಿ ಹಾಗೂ ರೇಷ್ಮಾ ಸೇರಿದಂತೆ ಒಟ್ಟು 5 ಮಂದಿ ಗಾಯಗೊಂಡಿದ್ದಾರೆ. ರಾಜೇಶ್ವರಿ ಅವರ ಸ್ಥಿತಿ ಗಂಭೀರವಾಗಿದ್ದು, ಮಗುವಿನ ಮುಖ ಮತ್ತು ಬಾಯಿಗೆ ಆಸಿಡ್ ತಗುಲಿ ಗಾಯಗಳಾಗಿವೆ. ಶೃತಿ ಹಾಗೂ ರೇಷ್ಮಾಗೆ ಸಣ್ಣಪುಟ್ಟ ಗಾಯಗಳಾಗಿವೆ.
ಆಸಿಡ್ ಎರಚುವ ವೇಳೆ ಆರೋಪಿಯಾದ ಸುರೇಶಗೂ ಗಾಯಗಳಾಗಿವೆ. ರಾಜೇಶ್ವರಿ ಅವರು ನಾದಿನಿಯರ ಫೋಟೋ ತೆಗೆದುಕೊಳ್ಳಬಾರದು ಎಂದು ಪತಿಗೆ ಎಚ್ಚರಿಕೆ ನೀಡಿದ್ದರು. ಆದರೆ, ಸುರೇಶ್ ಫೋಟೋ ಕ್ಲಿಕ್ಕಿಸುತ್ತಿದ್ದ ವಿಚಾರವಾಗಿ ಮತ್ತೆ ಜಗಳ ಉಂಟಾಗಿ ಅದು ಹಲ್ಲೆ ಮಟ್ಟಕ್ಕೆ ತಿರುಗಿದೆ ಎನ್ನಲಾಗಿದೆ.
ತಾಮ್ರ ಮತ್ತು ಹಿತ್ತಾಳೆ ತೊಳೆಯಲು ಬಳಸುತ್ತಿದ್ದ ರಾಸಾಯನಿಕವನ್ನು ಬಳಸಿಕೊಂಡು ಸುರೇಶ್ ದಾಳಿ ನಡೆಸಿದ್ದಾನೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಗಾಯಾಳುಗಳನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹುಬ್ಬಳ್ಳಿ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.