ePaper
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಕಾಗದದಲ್ಲಿಯೇ ಓಡುತ್ತಿದೆ ವಂದೇ ಮಾತರಂ ಭಾರತ ರೈಲು: ಕಾಂಗ್ರೆಸ್ ಟೀಕೆ

ಹುಬ್ಬಳ್ಳಿ : ಕೇವಲ 20 ಕೋಟಿ ರೂಪಾಯಿ ವೆಚ್ಚದಲ್ಲಿ ನವೀಕರಣ ಕೈಗೊಂಡ ಧಾರವಾಡ ರೈಲು ನಿಲ್ದಾಣವನ್ನು ಲೋಕಾರ್ಪಣೆಗೆ ಆಗಮಿಸಿದ ಕೇಂದ್ರ ರೈಲ್ವೆ ಸಚಿವರು ಮತ್ತದೇ ಹಳೆ ವಂದೇ ಮಾತರಂ ಭಾರತ ರೈಲು ಸೇವೆ ಒದಗಿಸುವ ಘೋಷಣೆಯನ್ನು ಮುಂದಿನ ಚುನಾವಣಾ ದೃಷ್ಟಿಯಲ್ಲಿ ಇಟ್ಟುಕೊಂಡು ಮಾಡಿದ್ದಾರೆ ಎಂದು ಕಾಂಗ್ರೆಸ್‌ ವಕ್ತಾರ ವಸಂತ ಲದವಾ ಟೀಕಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಫೆಬ್ರುವರಿ 24 , 2019 ರಂದು ನಗರದಲ್ಲಿ ನಡೆದ ಮನ್ ಕಿ ಬಾತ ಕಾರ್ಯಕ್ರಮದಲ್ಲಿ ಜಿಲ್ಲೆಯ ಕೇಂದ್ರ ಸಚಿವರು ಹುಬ್ಬಳ್ಳಿ - ಬೆಂಗಳೂರು ಮದ್ಯ 2021ರ ಒಳಗೆ ವಂದೇ ಮಾತರಂ ಭಾರತ ಎಕ್ಸಪ್ರೆಸ್ ರೈಲು ಸಂಚಾರ ಆರಂಭಿಸುತ್ತೇವೆ ಎಂದು ಘೋಷಣೆ ಮಾಡಿದ್ದರು.

ಈ ರೈಲು ಕೇವಲ ನಾಲ್ಕು ಗಂಟೆ ಅವಧಿಯಲ್ಲಿ ಬೆಂಗಳೂರು ತಲುಪಲಿದೆ ಎಂದು ಪ್ರಚಾರ ಗಿಟ್ಟಿಸಿಕೊಂಡಿದ್ದರು. ಆದರೆ ಇಂದಿಗೂ ಮಹಾನಗರದ ಜನ ಬೆಂಗಳೂರು ತಲುಪಬೇಕಾದರೆ ಕನಿಷ್ಟ 7 ಗಂಟೆ ಅವಧಿ ಬೇಕಾಗುತ್ತದೆ.

ಈ ಬಗ್ಗೆ ಇಂದಿಗೂ ಯಾವುದೇ ಕ್ರಮ ಕೈಗೊಳ್ಳದೇ ಮತ್ತೆ ಜಿಲ್ಲೆಯ ಕೇಂದ್ರ ಸಚಿವರ ಉಪಸ್ಥಿತಿಯಲ್ಲಿ ರೈಲ್ವೆ ಸಚಿವರು ಧಾರವಾಡದಲ್ಲಿ ಮತ್ತೆ ಅದೇ ಘೋಷಣೆ ಮಾಡಿದ್ದಾರೆ. ಕೇಂದ್ರ ಸರ್ಕಾರ ಕೇವಲ ಘೋಷಣೆಯ ಸರ್ಕಾರ ಎಂಬುದು ಸಾಬೀತುಪಡಿಸಿದ್ದಾರೆ ಎಂದು ಲದವಾ ಹೇಳಿದ್ದಾರೆ.

ಸಚಿವರು ರಾಜ್ಯದ ರೈಲ್ವೆ ಕಾಮಗಾರಿಗಳಿಗೆ ಕೇಂದ್ರ ಸರ್ಕಾರ ಸಾಕಷ್ಟು ಹಣ ನೀಡಿದೆ ಎಂದು ಹೇಳುತ್ತಿರುವಾಗ ಕೇಂದ್ರ ಸರ್ಕಾರ 2001ರಲ್ಲಿಯೇ ಪ್ರಾರಂಭವಾಗಬೇಕಿದ್ದ ವಂದೇ ಮಾತರಂ ಭಾರತ ರೈಲು 2022 ಕಳೆಯುತ್ತ ಬಂದರೂ ಇನ್ನೂ ಏಕೆ ಪ್ರಾರಂಭವಾಗಿಲ್ಲವೆಂದು ಲದವಾ ಪ್ರಶ್ನಿಸಿದ್ದಾರೆ.

ಹಿಂದಿನ ಕಾಂಗ್ರೆಸ್ ಸರ್ಕಾರ ಹುಬ್ಬಳ್ಳಿ-ಧಾರವಾಡ ಮಧ್ಯದಲ್ಲಿ ವಾಣಿಜ್ಯೋದ್ಯಮಗಳ ಅನುಕೂಲಕ್ಕಾಗಿ ನವಲೂರ ಸ್ಟೇಷನನಲ್ಲಿ ಆಧುನಿಕ, ಸುಸಜ್ಜಿತ ಸರಕು ಸಾಗಣೆ ಟರ್ಮಿನಸ್ ಅಭಿವೃದ್ಧಿಗೆ 50 ಕೋಟಿ ರೂಪಾಯಿಗಳ ಮೌಲ್ಯದ 100 ಎಕರೆ ಭೂಮಿ ರೈಲ್ವೆ ಇಲಾಖೆಗೆ ಪುಕ್ಕಟೆಯಾಗಿ ಹಂಚಿಕೆ ಮಾಡಿತ್ತು.

ಆದರೆ ಇಂದಿನ ಕೇಂದ್ರ ಸರ್ಕಾರ ಮತ್ತು ರೈಲ್ವೆ ಇಲಾಖೆ ಇಂದಿಗೂ ಅದನ್ನು ಅಭಿವೃದ್ಧಿಪಡಿಸಿಲ್ಲ. ಅಂದಿನ ರಾಜ್ಯದ ಕಾಂಗ್ರೆಸ್ ಸರಕಾರ ಈ ಭೂಮಿ ಕೇವಲ ನಿಗದಿತ ಕಾರಣಕ್ಕಾಗಿ ಉಪಯೋಗಿಸಲು ಮತ್ತು ಅಧುನಿಕ ಟರ್ಮಿನಸ್ 3 ವರ್ಷದೊಳಗಾಗಿ ಅಭಿವೃದ್ಧಿಪಡಿಸಬೇಕೆಂಬ ಷರತ್ತುಗಳೊಂದಿಗೆ ಪುಕ್ಕಟೆಯಾಗಿ ಹಂಚಿಕೆ ಮಾಡಿತ್ತು.

ನಿಗದಿತ ಅವಧಿಯೊಳಗೆ ನಿಗದಿತ ಉದ್ದೇಶಿತ ಟರ್ಮಿನಸ್ ಅಭಿವೃದ್ಧಿಪಡಿಸದಿದ್ದರೆ ಉಚಿತವಾಗಿ ನೀಡಿದ ಭೂಮಿಯನ್ನು ರಾಜ್ಯ ಸರ್ಕಾರ ಹಿಂಪಡೆದುಕೊಳ್ಳುವ ಕರಾರು ಸಹಿತ ಮಾಡಿತ್ತು.

ಆದರೆ ರೈಲ್ವೆ ಇಲಾಖೆ ನಿರ್ಲಕ್ಷ್ಯದಿಂದ ಈ ಅಭಿವೃದ್ಧಿ ಕಾರ್ಯ ಇಂದಿಗೂ ಕಾರ್ಯಗತವಾಗದೇ ಉಳಿದಿದೆ. ಆದರೆ ಇಂದಿಗೂ ಕೇವಲ ಘೋಷಣೆ ಮಾತ್ರ ಮಾಡುತ್ತಿರುವ ಸರ್ಕಾರ ಅಭಿವೃದ್ಧಿ ಮಾಡುತ್ತಿಲ್ಲ ಎಂದು ವಸಂತ ಲದವಾ ಟೀಕಿಸಿದ್ದಾರೆ.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.