ಬೆಂಗಳೂರು, ಅ. 1 : (ಸಮದರ್ಶಿ ಸುದ್ದಿ) - ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ಪೂರ್ವಮುದ್ರಿತ ಫಾರಂ–7 ಅರ್ಜಿಗಳನ್ನು ದೊಡ್ಡ ಪ್ರಮಾಣದಲ್ಲಿ ಸಲ್ಲಿಸಿ ಅರ್ಹ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲು ಸಂಘಟಿತ ಸಂಚು ನಡೆಯುತ್ತಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಗಂಭೀರ ಆರೋಪ ಮಾಡಿದ್ದಾರೆ. ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಮತ್ತು ಕಾರ್ಯಕರ್ತರು ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿರುವ ಅವರು, ಪ್ರಕರಣದ ಕುರಿತು ಸಮಗ್ರ ಕ್ರಿಮಿನಲ್ ತನಿಖೆಗೆ ಆಗ್ರಹಿಸಿದ್ದಾರೆ.
ಗುರುವಾರ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಅಲ್ಪಸಂಖ್ಯಾತರು, ದಲಿತರು, ಹಿಂದುಳಿದ ವರ್ಗಗಳು ಹಾಗೂ ಪರಿಶಿಷ್ಟ ಪಂಗಡಗಳ ಮತದಾರರನ್ನು ಗುರಿಯಾಗಿಸಿಕೊಂಡು ಫಾರಂ–7 ಅರ್ಜಿಗಳನ್ನು ಸಲ್ಲಿಸಲಾಗುತ್ತಿದೆ ಎಂದು ಆರೋಪಿಸಿದರು. ಎಸ್‌ಐಆರ್ ಪ್ರಕ್ರಿಯೆಯನ್ನು ‘ದೊಡ್ಡ ವಂಚನೆ’ ಎಂದು ಬಣ್ಣಿಸಿದ ಅವರು, ಇಷ್ಟೊಂದು ದೊಡ್ಡ ಪ್ರಮಾಣದ ಅಕ್ರಮ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ ಕುಮಾರ ಅವರ ಗಮನಕ್ಕೆ ಬಾರದೆ ನಡೆಯಲು ಸಾಧ್ಯವೇ ಎಂಬ ಪ್ರಶ್ನೆಯನ್ನೂ ಎತ್ತಿದರು.
ರಾಜ್ಯದಲ್ಲಿ 45 ಲಕ್ಷಕ್ಕೂ ಹೆಚ್ಚು ಮತದಾರರ ಹೆಸರುಗಳಿಗೆ ಸಂಬಂಧಿಸಿದಂತೆ ಸಮಸ್ಯೆ ಸೃಷ್ಟಿಸುವ ಪ್ರಯತ್ನ ನಡೆದಿದೆ ಎಂದು ಶಿವಕುಮಾರ ಆರೋಪಿಸಿದ್ದಾರೆ. ವಿಜಯಪುರ, ಭಾಲ್ಕಿ, ಬೆಳಗಾವಿ, ಮೈಸೂರು, ಮೂಡಿಗೆರೆ, ಬೆಂಗಳೂರು ಸೇರಿದಂತೆ ವಿವಿಧೆಡೆ ಮತದಾರರ ಹೆಸರು, ವಿಳಾಸ ಹಾಗೂ ಇಪಿಐಸಿ ಸಂಖ್ಯೆಗಳನ್ನೇ ಮೊದಲೇ ಮುದ್ರಿಸಿರುವ ಫಾರಂ–7 ಅರ್ಜಿಗಳು ದೊಡ್ಡ ಪ್ರಮಾಣದಲ್ಲಿ ಸಲ್ಲಿಕೆಯಾಗಿವೆ ಎಂದು ಅವರು ಹೇಳಿದ್ದಾರೆ.
ಸೆಪ್ಟೆಂಬರ್ 22, 23 ಮತ್ತು 24ರಂದು ದೊಡ್ಡ ಪ್ರಮಾಣದಲ್ಲಿ ಫಾರಂ–7 ಅರ್ಜಿಗಳನ್ನು ಸಲ್ಲಿಸಲಾಗಿದೆ ಎಂದು ಆರೋಪಿಸಿದ ಅವರು, ಇತರ ಮತದಾರರ ಹೆಸರುಗಳನ್ನು ತೆಗೆದುಹಾಕುವಂತೆ ಅರ್ಜಿ ಸಲ್ಲಿಸಿದವರಲ್ಲಿ ಹಲವರು ಮತಗಟ್ಟೆ ಮಟ್ಟದ ಏಜೆಂಟರಲ್ಲ, ಬಿಜೆಪಿ ಕಾರ್ಯಕರ್ತರು ಎಂದು ದೂರಿದರು. ಕೆಲ ವ್ಯಕ್ತಿಗಳು ತಲಾ 84, 92, 241 ಹಾಗೂ 423 ಅರ್ಜಿಗಳನ್ನು ಸಲ್ಲಿಸಿರುವ ಪ್ರಕರಣಗಳಿವೆ ಎಂದೂ ಅವರು ಹೇಳಿದ್ದಾರೆ.
“ಮತದಾರರ ಹೆಸರು, ವಿಳಾಸ, ಇಪಿಐಸಿ ಸಂಖ್ಯೆ ಸೇರಿದಂತೆ ಎಲ್ಲ ಮಾಹಿತಿಯನ್ನೂ ಮೊದಲೇ ಮುದ್ರಿಸಿ ಫಾರಂ–7 ಸಿದ್ಧಪಡಿಸಲಾಗಿದೆ. ಇಷ್ಟೊಂದು ಪ್ರಮಾಣದ ಮತದಾರರ ದತ್ತಾಂಶ ಇವರಿಗೆ ಎಲ್ಲಿಂದ ಸಿಕ್ಕಿತು? ಈ ಅರ್ಜಿಗಳನ್ನು ಯಾರು ಮುದ್ರಿಸಿದರು? ಯಾರು ಹಣ ಒದಗಿಸಿದರು?” ಎಂಬ ಪ್ರಶ್ನೆಗಳನ್ನು ಮುಖ್ಯಮಂತ್ರಿ ಎತ್ತಿದ್ದಾರೆ.
ವಿಜಯಪುರ ಜಿಲ್ಲೆಯ ಬಬಲೇಶ್ವರ ಕ್ಷೇತ್ರದಲ್ಲಿ ಸುಮಾರು 15 ಸಾವಿರ ಮತದಾರರ ಹೆಸರುಗಳನ್ನು ತೆಗೆದುಹಾಕಲು ಪ್ರಯತ್ನಿಸಲಾಗಿದೆ, ಭಾಲ್ಕಿಯಲ್ಲಿ ಮೂರು ಸಾವಿರಕ್ಕೂ ಹೆಚ್ಚು ಹಾಗೂ ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ಏಳು ಸಾವಿರಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ಶಿವಕುಮಾರ ಆರೋಪಿಸಿದ್ದಾರೆ.
ಬೆಳಗಾವಿ, ಭಾಲ್ಕಿ, ಮೈಸೂರು ಸೇರಿದಂತೆ ಹಲವು ಕಡೆಗಳಲ್ಲಿ ಮತದಾರರ ಹೆಸರುಗಳನ್ನು ಅಕ್ರಮವಾಗಿ ತೆಗೆದುಹಾಕಲು ಯತ್ನಿಸಿದ ಆರೋಪಗಳಿಗೆ ಸಂಬಂಧಿಸಿದಂತೆ ಎಫ್‌ಐಆರ್‌ಗಳು ದಾಖಲಾಗಿವೆ ಎಂದು ಅವರು ತಿಳಿಸಿದರು. ರಾಜ್ಯದ ಕೆಲವೇ ಕ್ಷೇತ್ರಗಳಲ್ಲಿ ಅಲ್ಲದೆ ಹಲವೆಡೆ ಒಂದೇ ರೀತಿಯ ಪ್ರಕರಣಗಳು ವರದಿಯಾಗುತ್ತಿರುವುದರಿಂದ ಇದರ ಹಿಂದೆ ದೊಡ್ಡ ಜಾಲವಿರುವ ಅನುಮಾನವಿದೆ ಎಂದು ಹೇಳಿದರು.
ಮತದಾರರ ಪಟ್ಟಿಯ ಪರಿಷ್ಕರಣೆಯಲ್ಲಿ ಕ್ರಿಮಿನಲ್ ಕೃತ್ಯ ಎಸಗಿರುವುದು ಕಂಡುಬಂದರೆ ಸಂಬಂಧಪಟ್ಟವರ ವಿರುದ್ಧ ಎಫ್‌ಐಆರ್ ದಾಖಲಿಸಬೇಕು. ಫಾರಂ–7 ಅರ್ಜಿಗಳ ಮೂಲ, ಅವುಗಳನ್ನು ಸಿದ್ಧಪಡಿಸಿದವರು, ಮತದಾರರ ದತ್ತಾಂಶ ಪಡೆದ ವಿಧಾನ ಹಾಗೂ ದೊಡ್ಡ ಪ್ರಮಾಣದಲ್ಲಿ ಅರ್ಜಿ ಸಲ್ಲಿಸಿದವರ ಕುರಿತು ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ರಾಜ್ಯದ ಮತಗಟ್ಟೆ ಮಟ್ಟದ ಏಜೆಂಟರು, ಶಾಸಕರು, ಪಕ್ಷದ ಕಾರ್ಯಕರ್ತರು ಹಾಗೂ ಮತದಾರರು ತಮ್ಮ ಪ್ರದೇಶದಲ್ಲಿ ಸಲ್ಲಿಕೆಯಾಗಿರುವ ಅನುಮಾನಾಸ್ಪದ ಫಾರಂ–7 ಅರ್ಜಿಗಳ ಮಾಹಿತಿಯನ್ನು ತಕ್ಷಣ ತಮ್ಮ ಕಚೇರಿಗೆ ನೀಡುವಂತೆ ಶಿವಕುಮಾರ ಮನವಿ ಮಾಡಿದ್ದಾರೆ. ಅರ್ಹ ಮತದಾರರ ಮತದಾನದ ಹಕ್ಕನ್ನು ರಕ್ಷಿಸುವುದು ಮುಖ್ಯಮಂತ್ರಿಯಾಗಿ ತಮ್ಮ ಜವಾಬ್ದಾರಿ ಎಂದು ಅವರು ಹೇಳಿದ್ದಾರೆ.
25 ಜಿಲ್ಲೆ, 100 ಮತಗಟ್ಟೆಗಳಲ್ಲಿ ಸಮೀಕ್ಷೆ
ಇದೇ ವೇಳೆ ನಟ ಹಾಗೂ ಸಾಮಾಜಿಕ ಹೋರಾಟಗಾರ ಪ್ರಕಾಶ ರಾಜ್ ನೇತೃತ್ವದ ನಿಯೋಗವು ಎಸ್‌ಐಆರ್ ಪ್ರಕ್ರಿಯೆಗೆ ಸಂಬಂಧಿಸಿದ 23 ಪುಟಗಳ ಸಮೀಕ್ಷಾ ವರದಿಯನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರಿಗೆ ಸಲ್ಲಿಸಿದೆ. ಎಸ್‌ಐಆರ್ ವಿರೋಧಿ ಅಲಯನ್ಸ್ ಮತ್ತು ಸಿಟಿಜನ್ಸ್ ವೋಟ್ ಪ್ರೊಟೆಕ್ಷನ್ ಕಮಿಟಿ ಸಿದ್ಧಪಡಿಸಿರುವ ಈ ವರದಿಯು ರಾಜ್ಯದ 25 ಜಿಲ್ಲೆಗಳ 100 ಮತಗಟ್ಟೆಗಳಲ್ಲಿ ಮನೆಮನೆಗೆ ತೆರಳಿ ನಡೆಸಿದ ಪರಿಶೀಲನೆಯನ್ನು ಆಧರಿಸಿದೆ.
ತಮ್ಮ ನೋಂದಾಯಿತ ವಿಳಾಸದಲ್ಲೇ ವಾಸಿಸುತ್ತಿರುವ ಹಲವು ಮತದಾರರನ್ನು ‘ಗೈರು’, ‘ಸ್ಥಳಾಂತರಗೊಂಡವರು’ ಅಥವಾ ‘ಮೃತರು’ ಎಂದು ವರ್ಗೀಕರಿಸಲಾಗಿದೆ ಎಂದು ವರದಿ ಆರೋಪಿಸಿದೆ. ಬಡವರು, ದಲಿತರು, ಆದಿವಾಸಿಗಳು, ಅಲೆಮಾರಿ ಸಮುದಾಯಗಳು, ಅಲ್ಪಸಂಖ್ಯಾತರು ಹಾಗೂ ಮಹಿಳೆಯರ ಮೇಲೆ ಈ ಪ್ರಕ್ರಿಯೆ ಪರಿಣಾಮ ಬೀರಿದೆ ಎಂಬುದು ಸಮೀಕ್ಷೆಯ ಆರೋಪವಾಗಿದೆ. ಆದರೆ ಈ ಸಮೀಕ್ಷೆ ರಾಜ್ಯದ 50 ಸಾವಿರಕ್ಕೂ ಹೆಚ್ಚು ಮತಗಟ್ಟೆಗಳ ಪೈಕಿ 100 ಮತಗಟ್ಟೆಗಳನ್ನು ಮಾತ್ರ ಒಳಗೊಂಡ ಮಾದರಿ ಸಮೀಕ್ಷೆಯಾಗಿದೆ.
“ಇದು ಕೇವಲ ಚುನಾವಣೆಯ ಗೆಲುವು–ಸೋಲಿನ ಪ್ರಶ್ನೆಯಲ್ಲ; ಸಂವಿಧಾನ, ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವಕ್ಕೆ ಸಂಬಂಧಿಸಿದ ವಿಷಯ” ಎಂದು ಪ್ರಕಾಶ ರಾಜ್ ಹೇಳಿದ್ದು, ಎಸ್‌ಐಆರ್ ಪ್ರಕ್ರಿಯೆಯನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿದ್ದಾರೆ.