ಬೆಂಗಳೂರು, ಅ. ೮ (ಸಮದರ್ಶಿ ಸುದ್ದಿ): ಪ್ರಜಾಪ್ರಭುತ್ವ ಉಳಿಯಬೇಕಾದರೆ ಪ್ರತಿಯೊಬ್ಬ ನಾಗರಿಕನ ಮತದಾನದ ಹಕ್ಕು ಉಳಿಯಬೇಕು. ಮತದಾನದ ಹಕ್ಕು ಕಳೆದುಕೊಂಡರೆ ಉಳಿದೆಲ್ಲ ಹಕ್ಕುಗಳಿಗೂ ಅಪಾಯ ಎದುರಾಗಲಿದೆ. ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ ಕುಮಾರ ರಾಜೀನಾಮೆಯಿಂದ ಮಾತ್ರ ಹೋರಾಟ ನಿಲ್ಲುವುದಿಲ್ಲ. ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ರದ್ದಾಗುವವರೆಗೂ ಹೋರಾಟ ಮುಂದುವರಿಯಲಿದೆ ಎಂದು ಸಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಭಿಜೀತ ದೀಪ್ಕೆ ಘೋಷಿಸಿದ್ದಾರೆ.
ಗುರುವಾರ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಬೃಹತ್ ಪ್ರತಿಭಟನೆ ಹಾಗೂ ‘ಜನತಾ ನ್ಯಾಯಾಲಯ’ ಸಮಾವೇಶದಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸರ್ಕಾರ ಹಾಗೂ ಚುನಾವಣಾ ಆಯೋಗದ ವಿರುದ್ಧ ವಾಗ್ದಾಳಿ ನಡೆಸಿದರು.
ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕುವ ಮೂಲಕ ಪ್ರಜಾಪ್ರಭುತ್ವದ ಮೇಲೆ ದಾಳಿ ನಡೆಸಲಾಗುತ್ತಿದೆ. ಪ್ರಧಾನಿ ಮೋದಿ ಮತಗಳ ಕಳ್ಳತನದ ಮೂಲಕ ಅಧಿಕಾರಕ್ಕೆ ಬಂದಿದ್ದಾರೆ ಎಂದು ಆರೋಪಿಸಿದ ಅವರು, ಅಧಿಕಾರ ಉಳಿಸಿಕೊಳ್ಳಲು ಈ ಪ್ರಕ್ರಿಯೆ ನಡೆಸಲಾಗುತ್ತಿದೆ ಎಂದು ದೂರಿದರು.
ಬಿಜೆಪಿಯ ‘ಒಂದು ದೇಶ, ಒಂದು ಚುನಾವಣೆ’ ಘೋಷಣೆಯ ಹಿಂದೆ ‘ಒಂದು ದೇಶ, ಒಂದು ಪಕ್ಷ’ ಎಂಬ ಉದ್ದೇಶವಿದೆ. ಇದು ಹಿಟ್ಲರ್‌ನ ಸರ್ವಾಧಿಕಾರಿ ಧೋರಣೆಯನ್ನು ನೆನಪಿಸುತ್ತದೆ ಎಂದು ಟೀಕಿಸಿ, ‘ವೋಟ್ ಚೋರ್, ಗದ್ದಿ ಛೋಡ್’ ಘೋಷಣೆ ಕೂಗಿದರು.
ಮಹಾತ್ಮ ಗಾಂಧಿ ದೇಶದ ಆತ್ಮ, ಡಾ. ಬಿ.ಆರ್. ಅಂಬೇಡ್ಕರ್ ಬೆನ್ನೆಲುಬು ಹಾಗೂ ಜವಾಹರಲಾಲ್ ನೆಹರು ದೇಶದ ಮನಸ್ಸು. ಇವರು ಆಧುನಿಕ ಭಾರತದ ಅಡಿಪಾಯ ಹಾಕಿದ್ದಾರೆ. ಆದರೆ ಆರ್‌ಎಸ್‌ಎಸ್‌ಗೆ ಅಂಬೇಡ್ಕರ್, ಸಂವಿಧಾನ ಹಾಗೂ ಗಾಂಧಿ ಚಿಂತನೆಗಳಲ್ಲಿ ನಂಬಿಕೆಯಿಲ್ಲ. ಗೋಡ್ಸೆಯ ವಿಚಾರಧಾರೆಗೆ ಮಹತ್ವ ನೀಡಲಾಗುತ್ತಿದೆ ಎಂದು ಆರೋಪಿಸಿದರು.
ನೆಹರು ಅವರ ಕಾಲದಲ್ಲಿ ಸಾರ್ವತ್ರಿಕ ಮತದಾನದ ಹಕ್ಕು ಜಾರಿಗೆ ಬಂದಿದ್ದರೂ ಈಗ ಅದನ್ನೇ ಕಸಿದುಕೊಳ್ಳುವ ಪ್ರಯತ್ನ ನಡೆಯುತ್ತಿದೆ ಎಂದು ದೂರಿದರು.
೨೦೨೪ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ೨೪೦ ಸ್ಥಾನಗಳನ್ನು ಗಳಿಸಿತ್ತು. ಮತಗಳ ಅಂತರ ಕೇವಲ ಶೇ. ೨ರಷ್ಟಿತ್ತು ಎಂದು ಪ್ರತಿಪಾದಿಸಿದ ಅವರು, ಜನಬೆಂಬಲ ಕುಸಿಯುತ್ತಿರುವುದರಿಂದ ಬಿಜೆಪಿ ತನ್ನ ವಿರುದ್ಧ ಮತ ಚಲಾಯಿಸುವವರ ಹೆಸರುಗಳನ್ನು ತೆಗೆದುಹಾಕಿ, ಪ್ರಾದೇಶಿಕ ಪಕ್ಷಗಳನ್ನು ದುರ್ಬಲಗೊಳಿಸಲು ಮುಂದಾಗಿದೆ ಎಂದು ಆರೋಪಿಸಿದರು.
ಎಸ್‌ಐಆರ್ ಹೆಸರಿನಲ್ಲಿ ಬಡವರು ಹಾಗೂ ಯುವಜನರ ಹೆಸರುಗಳನ್ನು ತೆಗೆದುಹಾಕಲಾಗುತ್ತಿದೆ. ಕೇವಲ ಅಂಕಿಅಂಶಗಳನ್ನು ಹೇಳದೆ ಮತದಾನದ ಹಕ್ಕು ಕಳೆದುಕೊಂಡವರನ್ನು ಭೇಟಿಯಾಗಿ ಅವರ ಸಮಸ್ಯೆಗಳನ್ನು ಅರಿಯಬೇಕು ಎಂದು ಕರೆ ನೀಡಿದರು.
ಗ್ಯಾನೇಶ ಕುಮಾರ ಅವರನ್ನು ಹುದ್ದೆಯಿಂದ ತೆಗೆದುಹಾಕಿ, ಅವರ ವಿರುದ್ಧ ಪ್ರಕರಣ ದಾಖಲಿಸಬೇಕು. ಕ್ಷೇತ್ರ ಪುನರ್ವಿಂಗಡಣೆಯಿಂದ ದಕ್ಷಿಣ ಭಾರತದ ಲೋಕಸಭಾ ಸ್ಥಾನಗಳಿಗೆ ಧಕ್ಕೆಯಾಗುವ ಆತಂಕವಿದ್ದು, ದಕ್ಷಿಣ ಭಾರತ ದೇಶವನ್ನು ಮುನ್ನಡೆಸುವ ಸಾಮರ್ಥ್ಯ ಹೊಂದಿದೆ ಎಂದರು.
ಪ್ರಜಾಪ್ರಭುತ್ವವನ್ನು ಮರಳಿ ಪಡೆಯಲು ಶಾಂತಿಯುತ ಹೋರಾಟ ಅಗತ್ಯ. ಇಂದಿನ ಪ್ರತಿಭಟನೆ ಮುಂದಿನ ದೊಡ್ಡ ಹೋರಾಟಕ್ಕೆ ಮುನ್ನುಡಿಯಷ್ಟೇ ಎಂದು ಹೇಳಿದ ದೀಪ್ಕೆ, ‘ಗ್ಯಾನು, ನಿನ್ನ ಸರದಿ ಬಂತು’ ಎಂಬ ಘೋಷಣೆಯೊಂದಿಗೆ ಭಾಷಣ ಮುಕ್ತಾಯಗೊಳಿಸಿದರು.