LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureEditorialBeautyRecipes

ವಿಶ್ವ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಇಳಿಕೆ: ದೇಶದಲ್ಲಿ ಇಂದು ಮತ್ತೆ ಪೆಟ್ರೋಲ್ 2.61 ರೂ., ಡೀಸೆಲ್ 2.71 ರೂ. ಏರಿಕೆ

ಹೊಸದಿಲ್ಲಿ, ಮೇ 25 : ವಿಶ್ವ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲದ ದರ ಬ್ಯಾರೆಲ್‌ಗೆ 5 ಶೇಕಡಕ್ಕೂ ಹೆಚ್ಚು ಇಳಿದು 100 ಡಾಲರ್‌ಗಿಂತ ಕೆಳಮಟ್ಟಕ್ಕೆ ಬಂದ ದಿನವೇ ದೇಶದಲ್ಲಿ ಇಂಧನ ದರ ಮತ್ತೆ ಹೆಚ್ಚಳವಾಗಿದೆ.

ಕೇಂದ್ರ ಸರ್ಕಾರ ಸೋಮವಾರ ಮತ್ತೆ ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆ ಘೋಷಿಸಿದ್ದು, ಪೆಟ್ರೋಲ್ ದರವನ್ನು ಲೀಟರ್‌ಗೆ 2.61 ರೂ. ಹಾಗೂ ಡೀಸೆಲ್ ದರವನ್ನು 2.71 ರೂ. ಹೆಚ್ಚಿಸಲಾಗಿದೆ. ಕಳೆದ 11 ದಿನಗಳಲ್ಲಿ ಇದು ನಾಲ್ಕನೇ ಬಾರಿ ಇಂಧನ ದರ ಏರಿಕೆಯಾಗಿದ್ದು, ಸಾಮಾನ್ಯ ಜನರ ಬದುಕಿನ ಮೇಲಿನ ಹಣದುಬ್ಬರದ ಒತ್ತಡ ಮತ್ತಷ್ಟು ಹೆಚ್ಚುವ ಆತಂಕ ಎದುರಾಗಿದೆ.

ಹೊಸ ಪರಿಷ್ಕರಣೆಯ ಬಳಿಕ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಪೆಟ್ರೋಲ್ ದರ ಈಗಾಗಲೇ 110 ರೂ. ಗಡಿ ದಾಟಿದ್ದು, ಮಂಗಳೂರಿನಲ್ಲಿ ಲೀಟರ್‌ಗೆ 110.43 ರೂ. ದಾಖಲಾಗಿದೆ. ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ ಪೆಟ್ರೋಲ್ ದರ ಲೀಟರ್‌ಗೆ 102.12 ರೂ. ಹಾಗೂ ಡೀಸೆಲ್ ದರ 95.20 ರೂ.ಗೆ ಏರಿಕೆಯಾಗಿದೆ.

ಚುನಾವಣೆಗಳು ಮುಗಿದ ಕೆಲ ದಿನಗಳ ನಂತರ ಕಳೆದ 11 ದಿನಗಳಲ್ಲಿ ಮಾತ್ರ ಪೆಟ್ರೋಲ್ ದರ ಒಟ್ಟಾರೆ 7.96 ರೂ. ಹೆಚ್ಚಳ ಕಂಡಿದೆ. ಡೀಸೆಲ್ ದರವೂ ನಿರಂತರ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸರಕು ಸಾಗಣೆ ವೆಚ್ಚ ಹೆಚ್ಚಳವಾಗುವ ಸಾಧ್ಯತೆ ಇದೆ. ಇದರ ಪರಿಣಾಮವಾಗಿ ತರಕಾರಿ, ಧಾನ್ಯ, ಹಾಲು ಸೇರಿದಂತೆ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆ ಸಂಭವಿಸುವ ಸಾಧ್ಯತೆಯಿದೆ.

ಮೇ 23ರಂದು ಕೂಡ ಇಂಧನ ದರ ಹೆಚ್ಚಳ ಮಾಡಲಾಗಿತ್ತು. ಆಗ ಪೆಟ್ರೋಲ್ ದರ 87 ಪೈಸೆ ಹಾಗೂ ಡೀಸೆಲ್ ದರ 91 ಪೈಸೆ ಏರಿಕೆಯಾಗಿತ್ತು. ಜೊತೆಗೆ ಸಿಎನ್‌ಜಿ ದರವನ್ನೂ ಕೆಜಿಗೆ 1 ರೂ. ಹೆಚ್ಚಿಸಿ ಹೊಸದಿಲ್ಲಿಯಲ್ಲಿ 81.09 ರೂ.ಗೆ ನಿಗದಿಪಡಿಸಲಾಗಿತ್ತು.

ಇರಾನ್ ಯುದ್ಧದ ಹಿನ್ನೆಲೆ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಅನಿಶ್ಚಿತತೆ ಉಂಟಾಗಿದ್ದು, ತೈಲ ಸಾಗಣೆಗೆ ಪ್ರಮುಖ ಮಾರ್ಗವಾದ ಹಾರ್ಮುಝ್ ಜಲಸಂಧಿಯ ಪರಿಸ್ಥಿತಿ ಬೆಲೆಗಳ ಮೇಲೆ ಪರಿಣಾಮ ಬೀರಿದೆ ಎಂದು ಹೇಳಲಾಗುತ್ತಿದೆಯಾದರೂ ಇಂಧನ ಬೆಲೆ 30 ಡಾಲರಗೂ ಕೆಳಗೆ ಇಳಿದ ಸಂದರ್ಭದಲ್ಲಿ ಬೆಲೆ ಇಳಿಸದೇ ಲಕ್ಷಾಂತರ ಕೋಟಿ ರೂಪಾಯಿ ಲಾಭವನ್ನು ತೈಲ ಕಂಪನಿಗಳು ಮಾಡಿಕೊಂಡವು. ಈಗ  ಫೆಬ್ರುವರಿ 28ರಿಂದ ಆರಂಭವಾದ ಎರಡು ತಿಂಗಳ ಯುದ್ಧದ ಬಳಿಕ ತೈಲ ಕಂಪೆನಿಗಳು ಬೆಲೆ ಏರಿಕೆ ಭಾರವನ್ನು ಜನರ ಮೇಲೆ ಹಾಕಿವೆ.

ವಿಶ್ವ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಇಳಿಕೆಯಾಗುತ್ತಿರುವ ಸಂದರ್ಭದಲ್ಲೇ ದೇಶದಲ್ಲಿ ನಿರಂತರ ಇಂಧನ ದರ ಏರಿಕೆ ನಡೆಯುತ್ತಿರುವುದು ವಿರೋಧ ಪಕ್ಷಗಳ ಟೀಕೆಗೆ ಕಾರಣವಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ದರ ಇಳಿದಾಗ ಅದರ ಲಾಭವನ್ನು ಜನರಿಗೆ ನೀಡದೇ, ಏರಿಕೆಯ ಭಾರ ಮಾತ್ರ ಸಾರ್ವಜನಿಕರ ಮೇಲೆ ಹಾಕಲಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ.

ದೇಶದಲ್ಲಿ ಎಪ್ರಿಲ್ 2022ರಿಂದ ಇಂಧನ ದರಗಳು ಬಹುತೇಕ ಸ್ಥಿರವಾಗಿದ್ದವು. 2024ರ ಲೋಕಸಭೆ ಚುನಾವಣೆಗೆ ಮುನ್ನ ಪೆಟ್ರೋಲ್ ಹಾಗೂ ಡೀಸೆಲ್ ದರವನ್ನು ಲೀಟರ್‌ಗೆ 2 ರೂ. ಇಳಿಸಲಾಗಿತ್ತು. ಆದರೆ ಇದೀಗ ನಿರಂತರ ದರ ಏರಿಕೆ ಮತ್ತೆ ಆರಂಭವಾಗಿರುವುದು ಜನರಲ್ಲಿ ಆತಂಕ ಮೂಡಿಸಿದೆ.

Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST