ಮುಂಬೈ, ಎ.29 : 90 ವರ್ಷದ ವಯೋವೃದ್ಧೆಯೊಬ್ಬರು ಹೂಡಿದ್ದ ಮಾನನಷ್ಟ ಮೊಕದ್ದಮೆಯನ್ನು ತಕ್ಷಣ ವಿಚಾರಣೆಗೆ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಬಾಂಬೆ ಹೈಕೋರ್ಟ್ ತಿಳಿಸಿ, ಪ್ರಕರಣವನ್ನು 2046ರ ನಂತರಕ್ಕೆ ಮುಂದೂಡಿದೆ.
ನ್ಯಾಯಮೂರ್ತಿ ಜಿತೇಂದ್ರ ಜೈನ್ ನೇತೃತ್ವದ ಏಕಸದಸ್ಯ ಪೀಠವು, 90 ವರ್ಷದ ತಾರಿಣಿಬೆನ್ ಹಾಗೂ 57 ವರ್ಷದ ಧವನಿ ದೇಸಾಯಿ ಅವರು ಹೂಡಿರುವ ವ್ಯಾಜ್ಯವು ಅಹಮಿಕೆಯ ಸಂಘರ್ಷವಾಗಿದ್ದು, ನ್ಯಾಯಾಂಗ ವ್ಯವಸ್ಥೆಗೆ ಅನಾವಶ್ಯಕ ಒತ್ತಡ ಉಂಟುಮಾಡುತ್ತಿದೆ ಎಂದು ಅಭಿಪ್ರಾಯಪಟ್ಟಿತು.
ಅಹಮಿಕೆಯ ಕಾರಣದಿಂದ ಮುಂದುವರಿಯುತ್ತಿರುವ ಈ ಪ್ರಕರಣವು ತುರ್ತು ವಿಚಾರಣೆ ಅಗತ್ಯವಿರುವ ಇತರ ಪ್ರಕರಣಗಳಿಗೆ ಅಡಚಣೆಯಾಗುತ್ತಿದೆ ಎಂದು ನ್ಯಾಯಾಲಯ ಕಿಡಿಕಾರಿತು. ನ್ಯಾಯಾಂಗದ ಅಮೂಲ್ಯ ಸಮಯವನ್ನು ಇಂತಹ ವ್ಯಾಜ್ಯಗಳು ವ್ಯರ್ಥ ಮಾಡುತ್ತಿವೆ ಎಂದು ಪೀಠ ಅಸಮಾಧಾನ ವ್ಯಕ್ತಪಡಿಸಿದೆ.
ಅಹಮಿಕೆಯ ಸಂಘರ್ಷದ ಸ್ವರೂಪ ಹೊಂದಿರುವ ಈ ಪ್ರಕರಣವನ್ನು ಕ್ಷಮಾಯಾಚನೆ ಮೂಲಕ ಬಗೆಹರಿಸಿಕೊಳ್ಳುವಂತೆ ನ್ಯಾಯಾಲಯ ಈ ಹಿಂದೆ ಸಲಹೆ ನೀಡಿದ್ದರೂ, ಅರ್ಜಿದಾರರು ಅದನ್ನು ಒಪ್ಪದೆ ಮೊಕದ್ದಮೆಯನ್ನು ಮುಂದುವರಿಸಿದ್ದಾರೆ.
2025ರಲ್ಲಿ ಶ್ಯಾಮ್ ಸಹಕಾರಿ ವಸತಿ ಸಂಘದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ನಡೆದ ಘಟನೆಗಳಿಂದ ಮಾನಸಿಕ ಕಿರುಕುಳ ಅನುಭವಿಸಿದ್ದೇವೆ ಎಂದು ಹೇಳಿ, 20 ಕೋಟಿ ರೂ. ಪರಿಹಾರಕ್ಕಾಗಿ ಅರ್ಜಿದಾರರು ಮನವಿ ಸಲ್ಲಿಸಿದ್ದರು.
ಅರ್ಜಿದಾರರು ವಯೋವೃದ್ಧೆಯಾಗಿರುವುದೇ ಆದ್ಯತೆ ನೀಡಲು ಕಾರಣವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ ನ್ಯಾಯಾಲಯ, ಪ್ರಕರಣವನ್ನು ಮುಂದಿನ 20 ವರ್ಷಗಳವರೆಗೆ ವಿಚಾರಣೆ ನಡೆಸಬಾರದು ಎಂದು ಸೂಚಿಸಿದೆ. 2046ರಲ್ಲಿ ವಿಚಾರಣೆಗೆ ಪಟ್ಟಿ ಮಾಡಲು ಆದೇಶ ನೀಡಲಾಗಿದೆ.