LIVE TV LocalCrimeNationalInternationalPoliticsBusinessFinancialEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಎಸ್‌ಐಆರ್‌ ರದ್ದತಿಗೆ ಆಗ್ರಹ: ಅ.10ರಂದು ರಾಜ್ಯಾದ್ಯಂತ ಪಂಜಿನ ಪ್ರತಿಭಟನೆಗೆ ಕರೆ

ಬೆಂಗಳೂರು, ಅ. 9 (ಸಮದರ್ಶಿ ಸುದ್ದಿ): ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ ಕುಮಾರ ಅವರನ್ನು ವಜಾಗೊಳಿಸಿ, ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯನ್ನು ಸಂಪೂರ್ಣ ರದ್ದುಗೊಳಿಸುವಂತೆ ಆಗ್ರಹಿಸಿ ಅಕ್ಟೋಬರ್ 10ರಂದು ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸೇರಿದಂತೆ ವಿವಿಧ ಸಂಘಟನೆಗಳು ದೆಹಲಿಯಲ್ಲಿ ಹಮ್ಮಿಕೊಂಡಿರುವ ಬೃಹತ್ ಪ್ರತಿಭಟನೆಗೆ ‘ಎಸ್‌ಐಆರ್‌ ವಿರೋಧಿ ಒಕ್ಕೂಟ’ ಸಂಪೂರ್ಣ ಬೆಂಬಲ ಘೋಷಿಸಿದೆ. ಇದೇ ದಿನ ಕರ್ನಾಟಕದ ಎಲ್ಲ ತಾಲೂಕು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಸಂಜೆ 5 ಗಂಟೆಗೆ ಪಂಜಿನ ಪ್ರತಿಭಟನಾ ಸಭೆಗಳನ್ನು ನಡೆಸಲು ಕರೆ ನೀಡಿದೆ.

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಒಕ್ಕೂಟ, ದೆಹಲಿ ಪೊಲೀಸರು ಹಾಗೂ ಕೇಂದ್ರ ಸರ್ಕಾರ ಪ್ರತಿಭಟಿಸುವ ಪ್ರಜಾಸತ್ತಾತ್ಮಕ ಹಕ್ಕನ್ನು ಹತ್ತಿಕ್ಕುವ ಯಾವುದೇ ಪ್ರಯತ್ನ ನಡೆಸಿದರೆ ಅದನ್ನು ಸಹಿಸುವುದಿಲ್ಲ ಎಂದು ಎಚ್ಚರಿಸಿದೆ. ಶಾಂತಿಯುತ ಹೋರಾಟ ನಡೆಸುವ ಸ್ವಾತಂತ್ರ್ಯ ಪ್ರಜಾಪ್ರಭುತ್ವದ ಪ್ರಮುಖ ಆಶಯವಾಗಿದ್ದು, ಅದನ್ನು ರಕ್ಷಿಸಬೇಕು ಎಂದು ಒತ್ತಾಯಿಸಿದೆ.

ಗ್ಯಾನೇಶ ಕುಮಾರ ಅವರನ್ನು ಹುದ್ದೆಯಿಂದ ವಜಾಗೊಳಿಸುವುದು ಹಾಗೂ ಎಸ್‌ಐಆರ್‌ ಪ್ರಕ್ರಿಯೆಯನ್ನು ಸಂಪೂರ್ಣ ರದ್ದುಗೊಳಿಸುವುದು ಒಕ್ಕೂಟದ ಪ್ರಮುಖ ಬೇಡಿಕೆಗಳಾಗಿವೆ. ಈ ಆಗ್ರಹಗಳೊಂದಿಗೆ ರಾಜ್ಯದ ನಾಗರಿಕ ಸಂಘಟನೆಗಳು, ಯುವಜನರು, ಪ್ರಜಾಸತ್ತಾತ್ಮಕ ಶಕ್ತಿಗಳು ಹಾಗೂ ಮತದಾರರ ಹಕ್ಕುಗಳ ಪರ ಹೋರಾಡುವ ಸಂಘಟನೆಗಳು ಅಕ್ಟೋಬರ್ 10ರಂದು ಪಂಜಿನ ಪ್ರತಿಭಟನೆಗಳನ್ನು ಆಯೋಜಿಸುವಂತೆ ಮನವಿ ಮಾಡಿದೆ.

ಅಕ್ಟೋಬರ್ 8ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆದ ದಿಢೀರ್ ಪ್ರತಿಭಟನೆಗೆ ಸಾವಿರಾರು ಯುವಜನರು ಹಾಗೂ ವಿವಿಧ ನಾಗರಿಕ ಸಂಘಟನೆಗಳು ಬೆಂಬಲ ನೀಡಿದ್ದಕ್ಕಾಗಿ ಒಕ್ಕೂಟ ಕೃತಜ್ಞತೆ ಸಲ್ಲಿಸಿದೆ. ಎಸ್‌ಐಆರ್‌ ಪ್ರಕ್ರಿಯೆಯಿಂದ ಉಂಟಾಗಿರುವ ಸಮಸ್ಯೆಗಳ ವಿರುದ್ಧ ಯುವಜನರು ತೋರಿದ ಸ್ಪಂದನೆ ಮತದಾನದ ಹಕ್ಕಿನ ರಕ್ಷಣೆಗಾಗಿ ನಡೆಯುತ್ತಿರುವ ಹೋರಾಟಕ್ಕೆ ಹೊಸ ಬಲ ನೀಡಿದೆ ಎಂದು ತಿಳಿಸಿದೆ.

ಅಂದಿನ ಪ್ರತಿಭಟನೆಯಲ್ಲಿ ನೂರಾರು ಎಸ್‌ಐಆರ್‌ ಸಂತ್ರಸ್ತರು ಭಾಗವಹಿಸಿದ್ದರೂ ಕಾರ್ಯಕ್ರಮವನ್ನು ಅನಿರೀಕ್ಷಿತವಾಗಿ ಆಯೋಜಿಸಿದ್ದರಿಂದ ಅವರ ಸಮಸ್ಯೆಗಳು ಮತ್ತು ಅನುಭವಗಳಿಗೆ ಸೂಕ್ತ ಪ್ರಾತಿನಿಧ್ಯ ನೀಡಲು ಸಾಧ್ಯವಾಗಲಿಲ್ಲ. ಇದಕ್ಕಾಗಿ ವಿಷಾದ ವ್ಯಕ್ತಪಡಿಸಿರುವ ಒಕ್ಕೂಟ, ಮುಂದಿನ ಹೋರಾಟಗಳಲ್ಲಿ ಸಂತ್ರಸ್ತರ ಧ್ವನಿಗೆ ಹೆಚ್ಚಿನ ಆದ್ಯತೆ ನೀಡುವುದಾಗಿ ಹೇಳಿದೆ.

ಎಸ್‌ಐಆರ್‌ನಿಂದ ತೊಂದರೆಗೊಳಗಾದವರ ಸಮಸ್ಯೆಗಳನ್ನು ರಾಷ್ಟ್ರಮಟ್ಟದಲ್ಲಿ ಪ್ರಸ್ತಾಪಿಸಲು ಅಕ್ಟೋಬರ್ 15ರಂದು ದೆಹಲಿಯಲ್ಲಿ ‘ಜನತಾ ನ್ಯಾಯಾಲಯ’ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಕರ್ನಾಟಕದ ಸಂತ್ರಸ್ತರು ಇದರಲ್ಲಿ ಭಾಗವಹಿಸಿ ತಮ್ಮ ಅನುಭವಗಳು, ಸಮಸ್ಯೆಗಳು ಹಾಗೂ ನ್ಯಾಯದ ಬೇಡಿಕೆಗಳನ್ನು ಹಂಚಿಕೊಳ್ಳುವಂತೆ ಒಕ್ಕೂಟ ಮನವಿ ಮಾಡಿದೆ.

ಮತದಾನದ ಹಕ್ಕು ಪ್ರಜಾಪ್ರಭುತ್ವದ ಮೂಲಾಧಾರವಾಗಿದ್ದು, ಯಾವುದೇ ಅರ್ಹ ಮತದಾರರು ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ನೋಡಿಕೊಳ್ಳುವುದು ಚುನಾವಣಾ ವ್ಯವಸ್ಥೆಯ ಜವಾಬ್ದಾರಿಯಾಗಿದೆ. ಎಸ್‌ಐಆರ್‌ ಪ್ರಕ್ರಿಯೆಯಿಂದ ಉಂಟಾಗಿರುವ ಸಮಸ್ಯೆಗಳಿಗೆ ನ್ಯಾಯಯುತ ಪರಿಹಾರ ದೊರೆಯಬೇಕು. ಎಸ್‌ಐಆರ್‌ ಸಂಪೂರ್ಣ ರದ್ದಾಗುವವರೆಗೆ ಹಾಗೂ ಮತದಾರರ ಹಕ್ಕುಗಳಿಗೆ ನ್ಯಾಯ ದೊರೆಯುವವರೆಗೆ ಹೋರಾಟ ಮುಂದುವರಿಯಲಿದೆ ಎಂದು ಒಕ್ಕೂಟ ಸ್ಪಷ್ಟಪಡಿಸಿದೆ.

Author
Samadarshi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST