ಕಲಬುರಗಿ, ಅ. 3 : (ಸಮದರ್ಶಿ ಸುದ್ದಿ) - ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಹೆಸರಿನಲ್ಲಿ ಕೋಟ್ಯಂತರ ಮತದಾರರ ಮತದಾನದ ಹಕ್ಕನ್ನು ಕಸಿದುಕೊಂಡು ಅಧಿಕಾರಕ್ಕೆ ಬಂದ ಸರ್ಕಾರಗಳನ್ನು ವಜಾಗೊಳಿಸಿ, ಅಂತಹ ಕಡೆಗಳಲ್ಲಿ ಮತಪತ್ರಗಳ ಮೂಲಕ ಹೊಸದಾಗಿ ಚುನಾವಣೆ ನಡೆಸಬೇಕು ಎಂದು ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್‌ಐಆರ್ ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ವಿರುದ್ಧ ಕಾಂಗ್ರೆಸ್ ರಾಷ್ಟ್ರವ್ಯಾಪಿ ಹೋರಾಟ ನಡೆಸಲಿದೆ ಎಂದು ಘೋಷಿಸಿದರು.
‘2023ರಲ್ಲಿಯೇ ಚುನಾವಣಾ ಆಯುಕ್ತರು ತಪ್ಪು ಮಾಡಿದರೂ ಅವರ ವಿರುದ್ಧ ಕ್ರಮ ಕೈಗೊಳ್ಳದಿರುವ ರೀತಿಯಲ್ಲಿ ಕಾನೂನು ತರಲಾಗಿದೆ. ಇದರಿಂದ ಮುಖ್ಯ ಚುನಾವಣಾ ಆಯುಕ್ತರು ತಮ್ಮ ಅಧಿಕಾರವನ್ನು ಬಳಸಿಕೊಂಡು ಮನಬಂದಂತೆ ಮತದಾರರ ಪಟ್ಟಿಯನ್ನು ಪರಿಷ್ಕರಿಸುತ್ತಿದ್ದಾರೆ. ಮತದಾನದ ಪ್ರಕ್ರಿಯೆಯ ಬಗ್ಗೆ ಹೆಚ್ಚಿನ ಅರಿವಿಲ್ಲದ ಅನೇಕರು ತಮ್ಮ ಹಕ್ಕು ಕಳೆದುಕೊಂಡಿದ್ದಾರೆ’ ಎಂದು ಖರ್ಗೆ ಆರೋಪಿಸಿದರು.
‘ಇದರ ಲಾಭ ಪಡೆದುಕೊಂಡು ಬಿಜೆಪಿ ಹಲವು ರಾಜ್ಯಗಳಲ್ಲಿ ಅಧಿಕಾರಕ್ಕೆ ಬಂದಿದೆ. ಮತದಾನದ ಹಕ್ಕನ್ನು ಕಿತ್ತುಕೊಳ್ಳಲು ಕೇಂದ್ರ ಸರ್ಕಾರ ಚುನಾವಣಾ ಆಯೋಗದ ಮೂಲಕ ಎಸ್‌ಐಆರ್ ನಡೆಸುತ್ತಿದೆ. ಫಾರ್ಮ್-6 ಮತ್ತು ಫಾರ್ಮ್-7 ಬಳಸಿ ತಮಗೆ ಬೇಕಾದವರ ಹೆಸರುಗಳನ್ನು ಸೇರಿಸುವುದು ಹಾಗೂ ಬೇಡವಾದವರ ಹೆಸರುಗಳನ್ನು ತೆಗೆದುಹಾಕುವ ಕೆಲಸ ನಡೆಯುತ್ತಿದೆ. ಇದನ್ನು ಕಾಂಗ್ರೆಸ್ ಸಹಿಸುವುದಿಲ್ಲ’ ಎಂದು ಅವರು ಹೇಳಿದರು.
ತಮ್ಮ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ವಿವಿಧ ಪಕ್ಷಗಳ ಸಭೆಯಲ್ಲಿ ಎಸ್‌ಐಆರ್ ಅಕ್ರಮಗಳ ವಿರುದ್ಧ ಸಂಘಟಿತ ಹೋರಾಟ ನಡೆಸಲು ತೀರ್ಮಾನಿಸಲಾಗಿದೆ ಎಂದರು.
‘ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಒಬ್ಬ ಕಾಂಗ್ರೆಸ್ಸಿಗನಾಗಿ ಚುನಾವಣಾ ಆಯೋಗದ ಕಚೇರಿ ಎದುರು ಪ್ರತಿಭಟನೆ ನಡೆಸಿ ಜನರ ಮತದಾನದ ಹಕ್ಕು ಉಳಿಸುವ ಕೆಲಸ ಮಾಡಿದ್ದಾರೆ. ಆಯೋಗ ತಪ್ಪು ಮಾಡಿದಾಗ ಅದನ್ನು ಪ್ರಶ್ನಿಸುವ ಹಕ್ಕು ಪ್ರತಿಯೊಬ್ಬರಿಗೂ ಇದೆ. ಅದನ್ನು ಯಾರೂ ತಡೆಯಲು ಸಾಧ್ಯವಿಲ್ಲ’ ಎಂದು ಖರ್ಗೆ ಹೇಳಿದರು.
ಮತದಾರರ ಪಟ್ಟಿಯಿಂದ ಹೆಸರು ಕೈಬಿಡಲ್ಪಟ್ಟ ಹಲವರು ತಮ್ಮ ಮತದಾನದ ಹಕ್ಕನ್ನು ಮರಳಿ ಪಡೆಯಲು ನ್ಯಾಯಾಲಯಗಳ ಮೊರೆ ಹೋಗಿದ್ದಾರೆ. ಇಂತಹ ಪ್ರಕರಣಗಳನ್ನು ವಿಳಂಬ ಮಾಡದೆ ಕಾಲಮಿತಿಯೊಳಗೆ ವಿಚಾರಣೆ ನಡೆಸುವಂತೆ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
‘ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಜವಾಹರಲಾಲ್ ನೆಹರೂ ಅವರು ಮತದಾನದ ಹಕ್ಕನ್ನು ವಿಶೇಷವಾಗಿ ಬಡವರು ಹಾಗೂ ಸಾಮಾನ್ಯ ಜನರಿಗೆ ದೊರಕಿಸಿಕೊಟ್ಟರು. ಮತದಾನದ ಹಕ್ಕು ದೊರೆಯುವ ಮೊದಲು ಸಾಮಾನ್ಯ ಜನರನ್ನು ಯಾರೂ ಕೇಳುತ್ತಿರಲಿಲ್ಲ. ಈಗ ರಾಜಕೀಯ ಪಕ್ಷಗಳು ಮನೆಮನೆಗೆ ಬಂದು ಮತ ಕೇಳುತ್ತಿವೆ. ಆದ್ದರಿಂದ ಪ್ರತಿಯೊಬ್ಬ ಅರ್ಹ ನಾಗರಿಕನ ಮತದಾನದ ಹಕ್ಕನ್ನು ಉಳಿಸಬೇಕು’ ಎಂದು ಖರ್ಗೆ ಹೇಳಿದರು.