LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
State News

ಎಸ್‌ಐಆರ್ ವಿರುದ್ಧ ‘ಪರಿಶೋಧ-ಪ್ರತಿರೋಧ’ ಪ್ರವಾಸಕ್ಕೆ ಮುಂಡಗೋಡಿನಲ್ಲಿ ಚಾಲನೆ

ಮುಂಡಗೋಡು, ಸೆ. 22 : ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯ ಪರಿಣಾಮಗಳನ್ನು ಪರಿಶೀಲಿಸುವ ಉದ್ದೇಶದಿಂದ ‘ಎಸ್‌ಐಆರ್ ವಿರೋಧಿ ಕರ್ನಾಟಕ’, ನಾಗರಿಕ ಮತಕಾವಲು ಸಮಿತಿ, ಜಾತ್ಯತೀತ ಪಕ್ಷಗಳು ಹಾಗೂ ವಿವಿಧ ನಾಗರಿಕ ಸಂಘಟನೆಗಳ ಒಕ್ಕೂಟ ಹಮ್ಮಿಕೊಂಡಿರುವ ‘ಎಸ್‌ಐಆರ್ ಪರಿಶೋಧ ಹಾಗೂ ಪ್ರತಿರೋಧ ಪ್ರವಾಸ’ಕ್ಕೆ ಮಂಗಳವಾರ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನಲ್ಲಿ ಚಾಲನೆ ನೀಡಲಾಯಿತು. ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಪ್ರವಾಸ ಆರಂಭಿಸಲಾಯಿತು.

ಪ್ರವಾಸದ ಮೊದಲ ದಿನ ಮುಖಂಡರು ಮುಂಡಗೋಡು ತಾಲೂಕಿನ ಮೈನಳ್ಳಿಗೆ ಭೇಟಿ ನೀಡಿ ಸಿದ್ದಿ ಮತ್ತು ಗೌಳಿ ಸಮುದಾಯದವರೊಂದಿಗೆ ಸಂವಾದ ನಡೆಸಿದರು. ಎಸ್‌ಐಆರ್ ಪ್ರಕ್ರಿಯೆಯಲ್ಲಿ ಎದುರಾಗುತ್ತಿರುವ ದಾಖಲಾತಿ ಸಮಸ್ಯೆಗಳು, ತಾಂತ್ರಿಕ ತೊಡಕುಗಳು ಹಾಗೂ ಮತದಾರರ ಪಟ್ಟಿಗೆ ಸಂಬಂಧಿಸಿದ ಅಹವಾಲುಗಳನ್ನು ಆಲಿಸಿದರು. ಸಿದ್ದಿ ಮತ್ತು ಗೌಳಿ ಸಮುದಾಯದವರು ಜನಪದ ನೃತ್ಯ ಹಾಗೂ ಹಾಡುಗಳ ಮೂಲಕ ತಂಡವನ್ನು ಸ್ವಾಗತಿಸಿದರು.

ಎಸ್‌ಐಆರ್ ಪ್ರಕ್ರಿಯೆಯಿಂದ ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯುವ ಅಪಾಯವಿದೆ ಎಂಬುದು ಪ್ರವಾಸ ಆಯೋಜಕರ ಪ್ರಮುಖ ಆಕ್ಷೇಪವಾಗಿದೆ. ರಾಜ್ಯದ ವಿವಿಧೆಡೆ ಆಯ್ದ ಮತಗಟ್ಟೆಗಳಲ್ಲಿ ಮತದಾರರ ಪಟ್ಟಿಯನ್ನು ಪರಿಶೀಲಿಸಿ, ಸಮಸ್ಯೆ ಎದುರಿಸುತ್ತಿರುವವರನ್ನು ನೇರವಾಗಿ ಭೇಟಿಯಾಗಿ ಮಾಹಿತಿ ಸಂಗ್ರಹಿಸುವುದಾಗಿ ಸಂಘಟಕರು ತಿಳಿಸಿದ್ದಾರೆ.

ನಟ ಪ್ರಕಾಶ್ ರಾಜ್ ನೇತೃತ್ವದಲ್ಲಿ ಸೆ.22ರಿಂದ 30ರವರೆಗೆ ನಡೆಯಲಿರುವ ಈ ಪ್ರವಾಸವು ಹುಬ್ಬಳ್ಳಿ, ವಿಜಯಪುರ, ಕಲಬುರಗಿ, ಯಾದಗಿರಿ, ರಾಯಚೂರು, ಬಳ್ಳಾರಿ, ಕೊಪ್ಪಳ, ಚಿತ್ರದುರ್ಗ, ತುಮಕೂರು, ಚಿಕ್ಕಬಳ್ಳಾಪುರ, ಹಾಸನ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಕೊಡಗು, ಮೈಸೂರು ಮತ್ತು ಮಂಡ್ಯ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಗೆ ತೆರಳಲಿದೆ.

ಸಿಪಿಐ(ಎಂ) ರಾಜ್ಯ ಸಮಿತಿಯೂ ಈ ಪ್ರವಾಸಕ್ಕೆ ಬೆಂಬಲ ಘೋಷಿಸಿದ್ದು, ವಿವಿಧ ಜಿಲ್ಲೆ ಮತ್ತು ತಾಲೂಕು ಘಟಕಗಳು ಕಾರ್ಯಕ್ರಮಗಳಿಗೆ ಸಹಕಾರ ನೀಡುವಂತೆ ಕರೆ ನೀಡಿದೆ. ‘ಒಬ್ಬ ವ್ಯಕ್ತಿ–ಒಂದು ಮತ’ ಎಂಬ ಪ್ರಜಾಸತ್ತಾತ್ಮಕ ಹಕ್ಕಿನ ರಕ್ಷಣೆ ಹಾಗೂ ಎಸ್‌ಐಆರ್ ಪ್ರಕ್ರಿಯೆಯಲ್ಲಿನ ಸಮಸ್ಯೆಗಳನ್ನು ದಾಖಲಿಸುವುದು ಪ್ರವಾಸದ ಉದ್ದೇಶ ಎಂದು ಆಯೋಜಕರು ಹೇಳಿದ್ದಾರೆ.

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST