ಬೆಂಗಳೂರು, ಸೆ 1 : (ಸಮದರ್ಶಿ ಸುದ್ದಿ) - ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಸಂಚು ಮತ್ತು ಮೋಸದ ಪ್ರಕ್ರಿಯೆಯಾಗಿದ್ದು, ಇದರ ಹಿಂದಿನ ಅಜೆಂಡಾ ದೇಶವನ್ನು ಹಾಳು ಮಾಡುವುದಾಗಿದೆ ಎಂದು ನಟ ಪ್ರಕಾಶ್ ರಾಜ್ ಆರೋಪಿಸಿದ್ದಾರೆ.
ನಗರದ ಫ್ರೀಡಂಪಾರ್ಕ್‌ನಲ್ಲಿ ಮಂಗಳವಾರ ‘ಎಸ್‌ಐಆರ್ ವಿರೋಧಿ ಒಕ್ಕೂಟ’ ಆಯೋಜಿಸಿದ್ದ ‘ಚುನಾವಣಾ ಆಯೋಗ ಚಲೋ’ ಹೋರಾಟದಲ್ಲಿ ಮಾತನಾಡಿದ ಅವರು, ಎಸ್‌ಐಆರ್ ರದ್ದುಗೊಳಿಸಿ, ಈ ಹಿಂದಿನಂತೆ ಎಲ್ಲರನ್ನೂ ಒಳಗೊಂಡ ರೀತಿಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ನಡೆಸಬೇಕು ಎಂದು ಆಗ್ರಹಿಸಿದರು.
1950ರಲ್ಲಿ ನಡೆದ ಮತದಾರರ ಪರಿಷ್ಕರಣೆಯ ಉದ್ದೇಶ ಎಲ್ಲರನ್ನೂ ಒಳಗೊಳ್ಳುವುದಾಗಿತ್ತು. ಹಿಂದಿನ ಪರಿಷ್ಕರಣೆಗಳೂ ದೇಶದ ನಾಗರಿಕರಿಗೆ ಗೌರವ ನೀಡುವ ರೀತಿಯಲ್ಲಿ ನಡೆದಿದ್ದವು. ಆದರೆ, ಈಗ ಅದೇ ಪ್ರಕ್ರಿಯೆ ಏಕೆ ಸಂಚಿನ ರೂಪ ಪಡೆದಿದೆ ಎಂದು ಪ್ರಶ್ನಿಸಿದ ಅವರು, ಮುಖ್ಯ ಚುನಾವಣಾ ಆಯುಕ್ತರನ್ನು ಆಯ್ಕೆ ಮಾಡುವ ಪ್ರಕ್ರಿಯೆಯಿಂದಲೇ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವ ಕೆಲಸ ಆರಂಭವಾಗಿದೆ. ಚುನಾವಣಾ ಆಯುಕ್ತರನ್ನು ಪ್ರಶ್ನಾತೀತರನ್ನಾಗಿ ಮಾಡಲಾಗಿದೆ ಎಂದು ಟೀಕಿಸಿದರು.
ಆರ್‌ಟಿಐ ಕಾರ್ಯಕರ್ತೆ ಅಂಜಲಿ ಭಾರದ್ವಾಜ್ ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಕೇಳಿದಾಗ, ಎಸ್‌ಐಆರ್ ಚುನಾವಣಾ ಆಯೋಗದ ನಿರ್ಧಾರವಲ್ಲ ಎಂಬುದು ತಿಳಿದುಬಂದಿದೆ. ಹಾಗಾದರೆ ಇದು ಯಾರ ನಿರ್ಧಾರ, ಯಾರ ಸಂಚು? ಎಸ್‌ಐಆರ್ ಜಾರಿಗೆ ಇಷ್ಟು ತರಾತುರಿ ಏಕೆ? ಜನರಿಗೆ ಈ ಕುರಿತು ಸರಿಯಾದ ಮಾಹಿತಿ ನೀಡಲು ಸರ್ಕಾರ ಏಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರಕಾಶ್ ರಾಜ್ ಪ್ರಶ್ನಿಸಿದರು.
‘ಸ್ಥಳಾಂತರಗೊಂಡವರು’ ಎಂದು ಗುರುತಿಸಿರುವ ಮತದಾರರ ಕುರಿತು ಮಾತನಾಡಿದ ಅವರು, ಸ್ಥಳಾಂತರಗೊಳ್ಳುವುದು ಅಪರಾಧವೇ? ಅದಕ್ಕಾಗಿ ಅವರ ಮತದಾನದ ಹಕ್ಕನ್ನೇ ಕಿತ್ತುಕೊಳ್ಳುತ್ತೀರಾ ಎಂದು ಪ್ರಶ್ನಿಸಿದರು. 16 ಲಕ್ಷ ಜನರು ಮೃತಪಟ್ಟಿದ್ದಾರೆ ಎಂಬ ಮಾಹಿತಿಯನ್ನು ಹೇಗೆ ನಂಬಬೇಕು? ಮತದಾರರ ಪಟ್ಟಿಯಲ್ಲಿ ‘ಇತರರು’ ಎಂದು ನಮೂದಿಸಿರುವವರು ಯಾರು ಎಂಬುದನ್ನು ಸ್ಪಷ್ಟಪಡಿಸಬೇಕು ಎಂದರು.
ಕರ್ನಾಟಕದಲ್ಲಿ 1.5 ಕೋಟಿ ಜನರನ್ನು ಕೈಕಟ್ಟಿ ನಿಲ್ಲಿಸುವ ಪ್ರಯತ್ನವನ್ನು ಒಪ್ಪಿಕೊಳ್ಳುವುದಿಲ್ಲ. ಜನರು ಅಧಿಕಾರಿಗಳ ಮುಂದೆ ಭಯದಿಂದ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಬಾರದು. ಎಸ್‌ಐಆರ್ ರದ್ದಾಗಲೇಬೇಕು ಎಂದು ಪ್ರಕಾಶ್ ರಾಜ್ ಒತ್ತಾಯಿಸಿದರು.
ಕರ್ನಾಟಕ ಜನಶಕ್ತಿಯ ರಾಜ್ಯಾಧ್ಯಕ್ಷ ನೂರ್ ಶ್ರೀಧರ್ ಮಾತನಾಡಿ, ಬೇಡಿಕೆಗಳ ಕುರಿತು ಸ್ಪಷ್ಟ ನಿರ್ಧಾರವಾಗುವವರೆಗೆ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದರು.
ಹೋರಾಟದಲ್ಲಿ ಮಹಂತೇಶ್, ಮುಹಮ್ಮದ್ ಯೂಸುಫ್ ಕನ್ನಿ, ಫಾ. ಅರುಣ್ ಲೂಯಿಸ್, ಜೆ.ಎಂ. ವೀರಸಂಗಯ್ಯ, ಸೀತಾರಾಮ ಗುಂಡಪ್ಪ, ತಾಹೇರ್ ಹುಸೇನ್, ಜಿ.ಎನ್. ನಾಗರಾಜ್, ಎನ್. ವೆಂಕಟೇಶ್, ಕೆ.ಎಲ್. ಅಶೋಕ, ತಾರಾರಾವ್, ಕೆ.ವಿ. ಭಟ್, ವಿಠ್ಠಲ್ ಹೆಗಡೆ, ಸಿ.ಎಸ್. ದ್ವಾರಕನಾಥ್ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಹಾಗೂ ಡಾ. ವಿಜಯಮ್ಮ, ಪ್ರೊ. ಎಸ್.ಜಿ. ಸಿದ್ದರಾಮಯ್ಯ, ಪ್ರೊ. ಎಲ್.ಎನ್. ಮುಕುಂದರಾಜ್, ಕೆ.ವಿ. ನಾಗರಾಜಮೂರ್ತಿ ಸೇರಿದಂತೆ ಸಾಹಿತಿಗಳು ಭಾಗವಹಿಸಿದ್ದರು.
‘ಪ್ರತಿಯೊಬ್ಬರ ಮತಕ್ಕೂ ಸಮಾನ ಮೌಲ್ಯ’
ಚಿತ್ರನಟ ಕಿಶೋರ್ ಮಾತನಾಡಿ, ದೇಶದ ಶ್ರೀಮಂತರ ಮತವಾಗಲಿ, ಬಡ ರೈತ-ಕಾರ್ಮಿಕರ ಮತವಾಗಲಿ ಎಲ್ಲ ಮತಗಳಿಗೂ ಸಮಾನ ಮೌಲ್ಯವಿದೆ. ಈ ಪ್ರಜಾಪ್ರಭುತ್ವದ ಹಕ್ಕನ್ನೇ ಕಿತ್ತುಕೊಳ್ಳುವ ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿದರು.
ಅರ್ಹ ಮತದಾರರನ್ನು ಪಟ್ಟಿಯಿಂದ ತೆಗೆದುಹಾಕುವ ಮೂಲಕ ಅವರ ಮತದಾನದ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ. ಮತ್ತೊಂದೆಡೆ, ತಮ್ಮ ಮತಬ್ಯಾಂಕ್‌ಗೆ ಸೇರಿದವರ ಮತಗಳನ್ನು ಉಳಿಸಿಕೊಂಡು ಶಾಶ್ವತವಾಗಿ ಅಧಿಕಾರದಲ್ಲಿ ಮುಂದುವರಿಯುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು.
ಐದು ಪ್ರಮುಖ ಬೇಡಿಕೆಗಳು
- ಯಾವುದೇ ಮತದಾರರನ್ನು ಸಮರ್ಪಕ ಕಾರಣವಿಲ್ಲದೆ ಮತದಾರರ ಪಟ್ಟಿಯಿಂದ ಹೊರಗಿಡಬಾರದು. ಡಿಲೀಟ್ ಆಗಿರುವ ಹೆಸರುಗಳ ಮರುಸೇರ್ಪಡೆಗೆ ಮೇಲ್ಮನವಿ ಅವಕಾಶ ವಿಸ್ತರಿಸಬೇಕು.
- ಅರ್ಹ ಮತದಾರರನ್ನು ಪಟ್ಟಿಗೆ ಸೇರಿಸಲು ಪ್ರತಿ ಬೂತ್‌ನ ಪ್ರತಿ ಮನೆಗೂ ತಲುಪುವ ವಿಶೇಷ ಅಭಿಯಾನ ನಡೆಸಬೇಕು.
- ಸ್ಥಳಾಂತರಗೊಂಡ ಮತದಾರರಿಗೆ ನಮೂನೆ-8 ಮೂಲಕ ಪ್ರಸ್ತುತ ವಿಳಾಸಕ್ಕೆ ನೋಂದಣಿ ವರ್ಗಾಯಿಸಿಕೊಳ್ಳಲು ಅವಕಾಶ ನೀಡಬೇಕು.
- 43 ಲಕ್ಷ ಮತದಾರರಿಗೆ ನೀಡಿರುವ ನೋಟಿಸ್‌ಗಳ ವಿವರಗಳನ್ನು ಬಹಿರಂಗಪಡಿಸಬೇಕು.
- ಗ್ರಾಮ ಮತ್ತು ವಾರ್ಡ್ ಸಭೆಗಳನ್ನು ಪರಿಣಾಮಕಾರಿಯಾಗಿ ನಡೆಸಿ, ಆಕ್ಷೇಪಣೆ ಮತ್ತು ಮೇಲ್ಮನವಿಗೆ ಆರು ತಿಂಗಳ ಕಾಲಾವಕಾಶ ನೀಡಬೇಕು.
ಹಲವು ಹೋರಾಟಗಾರರು ಪೊಲೀಸ್ ವಶಕ್ಕೆ
ಫ್ರೀಡಂಪಾರ್ಕ್‌ನಲ್ಲಿ ನಡೆಯುತ್ತಿದ್ದ ಧರಣಿ ಸ್ಥಳಕ್ಕೆ ಚುನಾವಣಾ ಆಯೋಗದ ಪ್ರತಿನಿಧಿಗಳು ಆಗಮಿಸಿ ಮನವಿ ಸ್ವೀಕರಿಸಬೇಕೆಂದು ಎಸ್‌ಐಆರ್ ವಿರೋಧಿ ಒಕ್ಕೂಟ ಆಹ್ವಾನಿಸಿತ್ತು. ಆದರೆ ಪ್ರತಿನಿಧಿಗಳು ಆಗಮಿಸದ ಹಿನ್ನೆಲೆಯಲ್ಲಿ ಪ್ರಕಾಶ್ ರಾಜ್ ಮತ್ತು ನಾಗರಿಕ ಸಂಘಟನೆಗಳ ಮುಖಂಡರ ನೇತೃತ್ವದಲ್ಲಿ ಪ್ರತಿಭಟನಾಕಾರರು ಆಯೋಗದ ಕಚೇರಿಗೆ ಮುತ್ತಿಗೆ ಹಾಕಲು ಮುಂದಾದರು.
ಈ ವೇಳೆ ನಟರಾದ ಪ್ರಕಾಶ್ ರಾಜ್, ಕಿಶೋರ್, ದಸಂಸ ಹಿರಿಯ ನಾಯಕ ಎನ್. ವೆಂಕಟೇಶ್, ಜನಶಕ್ತಿಯ ರಾಜ್ಯಾಧ್ಯಕ್ಷ ನೂರ್ ಶ್ರೀಧರ್ ಸೇರಿದಂತೆ ದಲಿತ, ರೈತ, ಮಹಿಳಾ ಮತ್ತು ಭಾಷಾ ಚಳವಳಿಯ ಹಲವು ಹೋರಾಟಗಾರರನ್ನು ಪೊಲೀಸರು ವಶಕ್ಕೆ ಪಡೆದರು.
ರಾಜ್ಯ ಸರ್ಕಾರದ ಪ್ರತಿನಿಧಿಯಾಗಿ ಮನವಿ ಸ್ವೀಕರಿಸಿದ ಅರಣ್ಯ ಸಚಿವ ರಾಮಲಿಂಗಾರೆಡ್ಡಿ, ಎಸ್‌ಐಆರ್ ವಿಚಾರದಲ್ಲಿ ರಾಜ್ಯ ಸರ್ಕಾರ ಅಸಹಾಯಕವಾಗಿಲ್ಲ. ಇದರ ಗಂಭೀರತೆ ಸರ್ಕಾರಕ್ಕೆ ತಿಳಿದಿದೆ ಎಂದು ಹೇಳಿದರು. ನಾಗರಿಕ ಸಂಘಟನೆಗಳ ಹಕ್ಕೊತ್ತಾಯಗಳನ್ನು ಮುಖ್ಯಮಂತ್ರಿಗೆ ತಲುಪಿಸುವುದಾಗಿ ತಿಳಿಸಿದರು.