LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureEditorialBeautyRecipes

ದೇಶದ ಪ್ರಧಾನಿಯ ಬಾಯಲ್ಲಿ ಸುಳ್ಳು ಹೇಳಿಕೆಗಳು ಶೋಭೆ ತರುವುದಿಲ್ಲ : ಸಿದ್ದರಾಮಯ್ಯ

ಬೆಂಗಳೂರು, ಮೇ 11 : ಮುಂದಿನ ಬಾರಿ ನಮ್ಮ ಸರಕಾರದ ವಿರುದ್ಧ ಆರೋಪ ಮಾಡುವ ಮುನ್ನ ಪೂರ್ವ ತಯಾರಿ ಮಾಡಿಕೊಂಡು ಬನ್ನಿ. ದೇಶದ ಪ್ರಧಾನಿಯ ಬಾಯಲ್ಲಿ ಸುಳ್ಳು ಹೇಳಿಕೆಗಳು ಶೋಭೆ ತರುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿಗೆ ತಿರುಗೇಟು ನೀಡಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ನರೇಂದ್ರ ಮೋದಿ ಬೆಂಗಳೂರಿನಲ್ಲಿ ಮಾತನಾಡಿದ್ದು ಪ್ರಧಾನಿಯಾಗಿಯೋ, ರಾಜ್ಯ ಬಿಜೆಪಿ ಅಧ್ಯಕ್ಷರಾಗಿಯೋ ಅಥವಾ ವಿರೋಧ ಪಕ್ಷದ ನಾಯಕರಾಗಿಯೋ ಎಂಬುದನ್ನು ಮೊದಲು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

ಪ್ರಧಾನಿ ಮಾತನಾಡಿದ ಭಾಷಣದಲ್ಲಿ ಕೇಂದ್ರ ಸರಕಾರದ ವೈಫಲ್ಯ ಮತ್ತು ರಾಜ್ಯ ಬಿಜೆಪಿಯ ದುಸ್ಥಿತಿಯನ್ನು ಸರಿಪಡಿಸಲಾಗದ ಅಸಹಾಯಕತೆ ಸ್ಪಷ್ಟವಾಗಿ ಗೋಚರಿಸಿತು ಎಂದು ಟೀಕಿಸಿರುವ ಸಿದ್ದರಾಮಯ್ಯ, ತಮ್ಮ ವೈಫಲ್ಯ ಮರೆಮಾಚಲು ಕಾಂಗ್ರೆಸ್ ಸರಕಾರದ ವಿರುದ್ಧ ಟೀಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಪಂಡಿತ್ ಜವಾಹರಲಾಲ್ ನೆಹರೂ, ಇಂದಿರಾಗಾಂಧಿ, ಅಟಲ್ ಬಿಹಾರಿ ವಾಜಪೇಯಿ ಸೇರಿದಂತೆ ಹಿಂದಿನ ಪ್ರಧಾನಿಗಳು ವಿರೋಧ ಪಕ್ಷಗಳನ್ನು ಟೀಕಿಸಲು ಎಂದಿಗೂ ಬೀದಿ ಭಾಷಣದ ಮಟ್ಟಕ್ಕೆ ಇಳಿದಿರಲಿಲ್ಲ. ಆದರೆ ನರೇಂದ್ರ ಮೋದಿ ತಮ್ಮ ಭಾಷಣಗಳ ಮೂಲಕ ಪ್ರಧಾನಿ ಹುದ್ದೆಯ ಘನತೆ ಮತ್ತು ಗಾಂಭೀರ್ಯಕ್ಕೆ ಧಕ್ಕೆ ತರುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

2024-25ರೊಳಗೆ ಭಾರತವನ್ನು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ದೇಶ ಮಾಡುವುದಾಗಿ ಹೇಳಿದ್ದ ಪ್ರಧಾನಿ ಈಗ ಚಿನ್ನ ಖರೀದಿಸಬೇಡಿ, ಪೆಟ್ರೋಲ್‌, ಖಾದ್ಯ ತೈಲ ಕಡಿಮೆ ಬಳಸಿ, ವಿದೇಶ ಪ್ರವಾಸ ತಪ್ಪಿಸಿ ಎಂದು ಜನರಿಗೆ ಮನವಿ ಮಾಡುತ್ತಿರುವುದು ಯಾವ ಅಭಿವೃದ್ಧಿಯ ಸಂಕೇತ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಪೆಟ್ರೋಲ್‌, ಡೀಸೆಲ್‌, ಅಡುಗೆ ಅನಿಲ ಹಾಗೂ ಖಾದ್ಯತೈಲ ದರ ಏರಿಕೆಯಿಂದ ಜನ ಸಾಮಾನ್ಯರು ಸಂಕಷ್ಟ ಅನುಭವಿಸುತ್ತಿದ್ದಾರೆ. ಇದಕ್ಕೆ ಕೇಂದ್ರದ ತಪ್ಪು ವಿದೇಶಾಂಗ ನೀತಿಯೇ ಕಾರಣ ಎಂದು ಅವರು ಆರೋಪಿಸಿದ್ದಾರೆ.

ಇರಾನ್‌ ವಿರುದ್ಧ ಇಸ್ರೇಲ್‌ ಮತ್ತು ಅಮೆರಿಕ ನಡೆಸುತ್ತಿರುವ ಯುದ್ಧದ ಪರಿಣಾಮ ಭಾರತ ಸಂಕಷ್ಟಕ್ಕೆ ಸಿಲುಕಿದೆ. ಇಂತಹ ಸಂದರ್ಭದಲ್ಲಿ ಭಾರತ ನ್ಯಾಯ ಮತ್ತು ನೀತಿಯ ಪರವಾಗಿ ಗಟ್ಟಿಯಾದ ನಿಲುವು ತೆಗೆದುಕೊಂಡಿದ್ದರೆ ಇಂದಿನ ಪರಿಸ್ಥಿತಿ ಎದುರಾಗುತ್ತಿರಲಿಲ್ಲ ಎಂದು ಅವರು ಹೇಳಿದ್ದಾರೆ.

ಬಿಜೆಪಿ ವಿಶ್ವಾಸದ್ರೋಹದ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿರುವ ಮುಖ್ಯಮಂತ್ರಿ, ಬಿಎಸ್‌ಪಿ, ಟಿಎಂಸಿ, ಡಿಎಂಕೆ, ಎಐಎಡಿಎಂಕೆ, ಶಿವಸೇನೆ ಸೇರಿದಂತೆ ಹಲವು ಪ್ರಾದೇಶಿಕ ಪಕ್ಷಗಳು ಬಿಜೆಪಿಯಿಂದ ವಿಶ್ವಾಸದ್ರೋಹ ಅನುಭವಿಸಿವೆ ಎಂದು ಟೀಕಿಸಿದ್ದಾರೆ.

ಕರ್ನಾಟಕ ಬಿಜೆಪಿಯೊಳಗೆ ಗುಂಪುಗಾರಿಕೆ ತಾರಕಕ್ಕೇರಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧವೇ ಹಲವು ಗುಂಪುಗಳು ಕಾರ್ಯನಿರ್ವಹಿಸುತ್ತಿವೆ. ರಾಜ್ಯ ಬಿಜೆಪಿ ಅಧ್ಯಕ್ಷರ ಮಾತಿಗೂ ಪಕ್ಷದಲ್ಲಿ ಬೆಲೆ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ವ್ಯಂಗ್ಯವಾಡಿದ್ದಾರೆ.

ಮೊದಲು ಕುಸಿಯುತ್ತಿರುವ ನಿಮ್ಮ ಮನೆಯನ್ನು ಭದ್ರಪಡಿಸಿಕೊಳ್ಳಿ, ಬಳಿಕ ಕಾಂಗ್ರೆಸ್ ಬಗ್ಗೆ ಮಾತನಾಡಿ ಎಂದು ಪ್ರಧಾನಿ ಮೋದಿಗೆ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಕಾಂಗ್ರೆಸ್ ಆಡಳಿತದಲ್ಲಿ ಕರ್ನಾಟಕದ ಆರ್ಥಿಕ ಪರಿಸ್ಥಿತಿ ಸುಭದ್ರವಾಗಿದೆ ಎಂದು ಹೇಳಿರುವ ಅವರು, ದೇಶದ ತಲಾ ಆದಾಯ 2.11 ಲಕ್ಷ ರೂ. ಇದ್ದರೆ ಕರ್ನಾಟಕದ ತಲಾ ಆದಾಯ 4.33 ಲಕ್ಷ ರೂ. ಇದೆ ಎಂದು ತಿಳಿಸಿದ್ದಾರೆ.

ದೇಶದ ಜಿಡಿಪಿ ಬೆಳವಣಿಗೆ ದರ ಶೇ.7.4 ಇದ್ದರೆ ಕರ್ನಾಟಕದ್ದು ಶೇ.8.1 ಆಗಿದೆ. ದೇಶದ ಜಿಡಿಪಿಯಲ್ಲಿ ಕರ್ನಾಟಕದ ಪಾಲು ಶೇ.9.19 ಆಗಿದ್ದು, ಜಿಎಸ್‌ಟಿ ಸಂಗ್ರಹದಲ್ಲಿ ಮಹಾರಾಷ್ಟ್ರದ ನಂತರ ಕರ್ನಾಟಕವೇ ಎರಡನೇ ಸ್ಥಾನದಲ್ಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

 

 

Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST