LIVE TV LocalCrimeNationalInternationalPoliticsFinancialEducationTechnologyEntertainmentSportsHealthFeatureTravelingBeautyRecipes
National News

ಗ್ಯಾನೇಶ ಕುಮಾರ ಪದಚ್ಯುತಿ ನೋಟಿಸ್ ಸದ್ಯಕ್ಕಿಲ್ಲ; ಬೀದಿಗಿಳಿದು ಹೋರಾಟಕ್ಕೆ ‘ಇಂಡಿಯಾ’ ನಿರ್ಧಾರ

ಹೊಸದಿಲ್ಲಿ, ಅ. 1 : ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ ಕುಮಾರ ವಿರುದ್ಧ ಹೊಸದಾಗಿ ಪದಚ್ಯುತಿ ನೋಟಿಸ್‌ ಸಲ್ಲಿಸುವ ಪ್ರಸ್ತಾವವನ್ನು ಸದ್ಯಕ್ಕೆ ಮುಂದುವರಿಸದೆ, ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಹಾಗೂ ಚುನಾವಣಾ ಆಯೋಗದ ಕಾರ್ಯವೈಖರಿ ವಿರುದ್ಧ ರಾಜಕೀಯ, ಸಾರ್ವಜನಿಕ ಮತ್ತು ಕಾನೂನು ಹೋರಾಟವನ್ನು ತೀವ್ರಗೊಳಿಸಲು ‘ಇಂಡಿಯಾ’ ಒಕ್ಕೂಟ ಮುಂದಾಗಿದೆ. ಬುಧವಾರ ನಡೆದ ಒಕ್ಕೂಟದ ಸಭೆಯಲ್ಲಿ ಹೊಸ ಪದಚ್ಯುತಿ ನೋಟಿಸ್‌ ವಿಷಯ ಅಧಿಕೃತ ಚರ್ಚೆಗೆ ಬಂದಿಲ್ಲ ಎಂದು ವರದಿಯಾಗಿದೆ.

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಚುನಾವಣಾ ಆಯೋಗ ಮತ್ತು ಎಸ್‌ಐಆರ್‌ ವಿರುದ್ಧ ದೇಶವ್ಯಾಪಿ ಹೋರಾಟ ನಡೆಸುವುದು, ಜನರ ಬಳಿಗೆ ವಿಷಯವನ್ನು ಕೊಂಡೊಯ್ಯುವುದು ಹಾಗೂ ಕಾನೂನು ಹೋರಾಟ ಮುಂದುವರಿಸುವ ಬಗ್ಗೆ ಪ್ರಮುಖವಾಗಿ ಚರ್ಚಿಸಲಾಯಿತು. ಅಕ್ಟೋಬರ್ 2ರಿಂದ 8ರವರೆಗೆ ಜಿಲ್ಲಾ ಮಟ್ಟದಲ್ಲಿ ‘ಪ್ರಜಾಪ್ರಭುತ್ವ ಉಳಿಸಿ’ ಜಾಥಾ ನಡೆಸಲು ಹಾಗೂ ಅಕ್ಟೋಬರ್ 6ರಂದು ಪ್ರತಿಪಕ್ಷಗಳ ಸಂಸದರು ಚುನಾವಣಾ ಆಯೋಗದ ಕೇಂದ್ರ ಕಚೇರಿಗೆ ಮೆರವಣಿಗೆ ನಡೆಸಲು ನಿರ್ಧರಿಸಲಾಗಿದೆ.

ಗ್ಯಾನೇಶ ಕುಮಾರ ವಿರುದ್ಧ ಹೊಸ ಪದಚ್ಯುತಿ ನೋಟಿಸ್‌ ತರಲು ಪ್ರತಿಪಕ್ಷಗಳು ಈ ಹಿಂದೆ ಸಿದ್ಧತೆ ನಡೆಸಿದ್ದವು. ಚುನಾವಣಾ ಆಯೋಗದ ಇಬ್ಬರು ಆಯುಕ್ತರು ಎಸ್‌ಐಆರ್‌ಗೆ ಸಂಬಂಧಿಸಿದ ಕೆಲವು ನಿರ್ಧಾರಗಳ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದರು ಎಂಬ ವರದಿಗಳ ಹಿನ್ನೆಲೆಯಲ್ಲಿ ಈ ಪ್ರಸ್ತಾವ ಮುನ್ನೆಲೆಗೆ ಬಂದಿತ್ತು. ಆದರೆ ಬುಧವಾರದ ಸಭೆಯಲ್ಲಿ ಹೊಸ ನೋಟಿಸ್‌ ಸಲ್ಲಿಸುವುದಕ್ಕಿಂತ ಸಾರ್ವಜನಿಕ ಹೋರಾಟಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ.

ಸಭೆಯಲ್ಲಿ ಭಾಗವಹಿಸಿದ್ದ ಹಿರಿಯ ವಕೀಲ ಹಾಗೂ ಸಂಸದ ಕಪಿಲ್ ಸಿಬಲ್, ಸಂಸತ್ತಿನಲ್ಲಿ ಈಗಾಗಲೇ ಸಲ್ಲಿಸಲಾದ ಪದಚ್ಯುತಿ ನೋಟಿಸ್‌ಗಳ ಸ್ಥಿತಿ ಹಾಗೂ ಹೊಸ ನೋಟಿಸ್‌ನಿಂದ ಉಂಟಾಗಬಹುದಾದ ಕಾನೂನು ಮತ್ತು ಸಂಸದೀಯ ಪರಿಣಾಮಗಳ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ. ಸಂಖ್ಯಾಬಲದ ಕೊರತೆಯೂ ಹೊಸ ಪದಚ್ಯುತಿ ಪ್ರಕ್ರಿಯೆಯನ್ನು ತಕ್ಷಣ ಮುಂದುವರಿಸದಿರುವ ಚರ್ಚೆಯಲ್ಲಿ ಪ್ರಮುಖ ಅಂಶವಾಗಿದೆ.

ಇದರ ಬದಲಾಗಿ ಎಸ್‌ಐಆರ್‌ ಹಾಗೂ ಪ್ರತಿಪಕ್ಷಗಳು ಆರೋಪಿಸಿರುವ ಚುನಾವಣಾ ಅಕ್ರಮಗಳ ವಿರುದ್ಧ ಸುಪ್ರೀಂ ಕೋರ್ಟನಲ್ಲಿ ಕಾನೂನು ಹೋರಾಟವನ್ನು ಬಲಪಡಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ. ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರ ನೇಮಕಕ್ಕೆ ಸಂಬಂಧಿಸಿದ 2023ರ ಕಾಯ್ದೆಯ ಸಾಂವಿಧಾನಿಕ ಮಾನ್ಯತೆಯನ್ನು ಪ್ರಶ್ನಿಸಿರುವ ಪ್ರಕರಣದಲ್ಲಿಯೂ ಒಕ್ಕೂಟವು ಜಂಟಿಯಾಗಿ ಕಾನೂನು ಹೋರಾಟ ನಡೆಸುವ ಬಗ್ಗೆ ಚರ್ಚಿಸಿದೆ.

ಮುಖ್ಯ ಚುನಾವಣಾ ಆಯುಕ್ತರು ಹಾಗೂ ಚುನಾವಣಾ ಆಯುಕ್ತರಿಗೆ 2023ರ ಕಾಯ್ದೆಯಡಿ ನೀಡಲಾಗಿರುವ ಕಾನೂನು ರಕ್ಷಣೆಯ ಹಿನ್ನೆಲೆಯಲ್ಲಿ, ಅಂತಹ ರಕ್ಷಣೆ ಇಲ್ಲದ ಅಧಿಕಾರಿಗಳ ವಿರುದ್ಧ ಆರೋಪಗಳಿಗೆ ಸಾಕ್ಷ್ಯವಿದ್ದಲ್ಲಿ ಕಾನೂನು ಕ್ರಮಕ್ಕೆ ಮುಂದಾಗುವ ಸಾಧ್ಯತೆಯನ್ನೂ ಪ್ರತಿಪಕ್ಷ ನಾಯಕರು ಪರಿಶೀಲಿಸಿದ್ದಾರೆ. ಚುನಾವಣಾ ಆಯೋಗದ ಐಟಿ ವ್ಯವಸ್ಥೆಗೆ ಸಂಬಂಧಿಸಿದ ಅಧಿಕಾರಿಗಳ ಪಾತ್ರದ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ವರದಿಯಾಗಿದೆ.

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST