ಬೆಂಗಳೂರು, ಅ. 6 (ಸಮದರ್ಶಿ ಸುದ್ದಿ): ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ನೆಪದಲ್ಲಿ ಬಿಜೆಪಿ–ಜೆಡಿಎಸ್ ಕಾರ್ಯಕರ್ತರಿಗೆ ರಾಜ್ಯ ಸರ್ಕಾರ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿ, ಉಭಯ ಪಕ್ಷಗಳ ಮುಖಂಡರು ಮಂಗಳವಾರ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರನ್ನು ಭೇಟಿ ಮಾಡಿ ಕ್ರಮಕ್ಕೆ ಮನವಿ ಮಾಡಿದರು.
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ಹಾಗೂ ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ನೇತೃತ್ವದ ನಿಯೋಗವು ರಾಜ್ಯಪಾಲರನ್ನು ಭೇಟಿ ಮಾಡಿ ಎಸ್‌ಐಆರ್‌ಗೆ ಸಂಬಂಧಿಸಿದ ಬೆಳವಣಿಗೆಗಳ ಕುರಿತು ಚರ್ಚಿಸಿತು.
ಎಸ್‌ಐಆರ್ ಪ್ರಕ್ರಿಯೆಯಲ್ಲಿ ಕಾಂಗ್ರೆಸ್ ಹಾಗೂ ರಾಜ್ಯ ಸರ್ಕಾರ ಹಸ್ತಕ್ಷೇಪ ಮಾಡುತ್ತಿದ್ದು, ಅಧಿಕಾರ ದುರುಪಯೋಗದ ಮೂಲಕ ಪರಿಷ್ಕರಣೆ ಪ್ರಕ್ರಿಯೆಯನ್ನು ಹಾಳು ಮಾಡಲಾಗುತ್ತಿದೆ ಎಂದು ನಿಯೋಗ ಆರೋಪಿಸಿತು. ರಾಜಕೀಯ ಸ್ವಾರ್ಥಕ್ಕಾಗಿ ಜನರನ್ನು ದಾರಿ ತಪ್ಪಿಸುವುದರ ಜತೆಗೆ, ರಾಜ್ಯದ ಪ್ರಜೆಗಳಲ್ಲದವರ ಹೆಸರುಗಳನ್ನು ಮತದಾರರ ಪಟ್ಟಿಯಲ್ಲಿ ಉಳಿಸುವ ಅಥವಾ ಹೊಸದಾಗಿ ಸೇರಿಸುವ ಹುನ್ನಾರ ನಡೆಯುತ್ತಿದೆ. ಇದಕ್ಕೆ ಅವಕಾಶ ನೀಡಬಾರದು ಎಂದು ರಾಜ್ಯಪಾಲರಿಗೆ ಮನವಿ ಮಾಡಿತು.
‘ಕಾಂಗ್ರೆಸ್‌ಗೆ ಚುನಾವಣೆಯ ಭಯ ಆರಂಭವಾಗಿದೆ. ಎನ್‌ಡಿಎ ಅಧಿಕಾರಕ್ಕೆ ಬರಲಿದೆ ಎಂಬ ಮಾಹಿತಿ ಅವರಿಗೆ ಸಿಕ್ಕಿರುವುದರಿಂದ ಬಿಜೆಪಿ–ಜೆಡಿಎಸ್ ಕಾರ್ಯಕರ್ತರಿಗೆ ಕಿರುಕುಳ ನೀಡಲಾಗುತ್ತಿದೆ’ ಎಂದು ಮುಖಂಡರು ಆರೋಪಿಸಿದರು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ವಿರುದ್ಧವೂ ತೀವ್ರ ಆರೋಪಗಳನ್ನು ಮಾಡಿ, ರಾಜ್ಯ ಸರ್ಕಾರವನ್ನು ವಜಾಗೊಳಿಸಬೇಕು ಎಂದು ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು, ಸಂಸದರಾದ ಪಿ.ಸಿ. ಮೋಹನ್, ಮಲ್ಲೇಶ್ ಬಾಬು, ವಿಧಾನಪರಿಷತ್ ಸದಸ್ಯರಾದ ಎಸ್.ಎಲ್. ಭೋಜೇಗೌಡ, ಟಿ.ಎ. ಶರವಣ, ಶಾಸಕರಾದ ಮಂಜುಳಾ ಅರವಿಂದ ಲಿಂಬಾವಳಿ, ಮುನಿರಾಜು, ಶ್ರೀವತ್ಸ ಸೇರಿದಂತೆ ಹಲವು ಮುಖಂಡರು ನಿಯೋಗದಲ್ಲಿದ್ದರು.
ಪೊಲೀಸ್ ಠಾಣೆಗಳು ಕಾಂಗ್ರೆಸ್ ಕಚೇರಿಗಳಾಗಿವೆ: ಅಶೋಕ
ರಾಜಪಾಲರ ಭೇಟಿಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಆರ್. ಅಶೋಕ, ರಾಜ್ಯದ ಪೊಲೀಸ್ ಠಾಣೆಗಳು ಕಾಂಗ್ರೆಸ್ ಕಚೇರಿಗಳಂತೆ ಕಾರ್ಯನಿರ್ವಹಿಸುತ್ತಿವೆ ಎಂದು ಆರೋಪಿಸಿದರು. ಸುಳ್ಳು ದೂರುಗಳ ಆಧಾರದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರನ್ನು ಠಾಣೆಗಳಿಗೆ ಕರೆಸಿ ವಿಚಾರಣೆ ನಡೆಸಲಾಗುತ್ತಿದೆ ಎಂದರು.
‘ಯಾರು ಬೇಕಾದರೂ ಮತದಾರರ ಪಟ್ಟಿಗೆ ಸಂಬಂಧಿಸಿದ ಅರ್ಜಿ ನಮೂನೆ–7 ಸಲ್ಲಿಸಬಹುದು. ಪ್ರಕರಣ ದಾಖಲಿಸುವಂತೆ ಯಾರಿಗೂ ಸೂಚಿಸಿಲ್ಲ ಎಂದು ಚುನಾವಣಾ ಆಯೋಗವೇ ಸ್ಪಷ್ಟಪಡಿಸಿದೆ. ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಿದರೆ ಸಂಬಂಧಿಸಿದ ಮತದಾರರು ಅದನ್ನು ಪ್ರಶ್ನಿಸಲು ಅವಕಾಶವಿದೆ. ಇದರಲ್ಲಿ ಪೊಲೀಸರು ಅಥವಾ ರಾಜ್ಯ ಸರ್ಕಾರ ಮಧ್ಯಪ್ರವೇಶಿಸುವಂತಿಲ್ಲ. ಆದರೂ ನಮೂನೆ–7 ಸಲ್ಲಿಸಿದವರ ವಿರುದ್ಧ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ’ ಎಂದು ಅಶೋಕ ಆರೋಪಿಸಿದರು.