LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
State News

'ಸ್ತನ ಹಿಡಿದರೆ ಅತ್ಯಾಚಾರ ಯತ್ನವಲ್ಲ' ಎಂದ ಹೈಕೋರ್ಟ: ಸುಪ್ರೀಮ ಕೋರ್ಟ ತರಾಟೆ

ನವದೆಹಲಿ, 15: ಮಹಿಳೆಯ ಸ್ತನ ಹಿಡಿಯುವುದು, ಸಲ್ವಾರ್ ತೆಗೆಯಲು ಯತ್ನಿಸುವುದು ಹಾಗೂ ದೈಹಿಕ ದೌರ್ಜನ್ಯ ಎಸಗಿದ ಕೃತ್ಯವನ್ನು ಅತ್ಯಾಚಾರ ಯತ್ನ ಎಂದು ಪರಿಗಣಿಸಲಾಗದು ಎಂದು ಪಾಟ್ನಾ ಹೈಕೋರ್ಟ್ ನೀಡಿದ್ದ ತೀರ್ಪಿನ ಬಗ್ಗೆ ಸುಪ್ರೀಂ ಕೋರ್ಟ ಮಂಗಳವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಇಂತಹ ತೀರ್ಪುಗಳು ನ್ಯಾಯಾಂಗದ ಸೂಕ್ಷ್ಮತೆ ಮತ್ತು ಮಹಿಳೆಯರ ಹಕ್ಕುಗಳ ರಕ್ಷಣೆಗೆ ಧಕ್ಕೆ ತರುವಂತಿವೆ ಎಂದು ಅಭಿಪ್ರಾಯಪಟ್ಟಿರುವ ಸುಪ್ರೀಂ ಕೋರ್ಟ, ಈ ಸಂಬಂಧ ಶೀಘ್ರದಲ್ಲೇ ವಿವರವಾದ ಆದೇಶ ಹೊರಡಿಸುವುದಾಗಿ ತಿಳಿಸಿದೆ.

ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ನ್ಯಾಯಾಂಗದ ಧೋರಣೆಗಳನ್ನು ಪರಿಶೀಲಿಸಲು ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಪ್ರಕರಣದ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿ ಜೋಯ್ಮಾಲ್ಯ ಬಾಗ್ಚಿ ಹಾಗೂ ನ್ಯಾಯಮೂರ್ತಿ ವಿ. ಮೋಹನ್ ಅವರಿದ್ದ ಪೀಠ ನಡೆಸಿತು. ಈ ವೇಳೆ ಹಿರಿಯ ವಕೀಲೆ ಶೋಭಾ ಗುಪ್ತಾ ಅವರು ಪಾಟ್ನಾ ಹೈಕೋರ್ಟ್‌ನ ಇತ್ತೀಚಿನ ತೀರ್ಪನ್ನು ಪೀಠದ ಗಮನಕ್ಕೆ ತಂದರು.

ಇಂತಹ ತೀರ್ಪುಗಳನ್ನು ನೀಡುವ ಮುನ್ನ ನ್ಯಾಯಾಲಯಗಳಲ್ಲಿ ಸಮರ್ಪಕ ಅಧ್ಯಯನ ಹಾಗೂ ಸಂಶೋಧನೆ ನಡೆಯುತ್ತಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಕಳವಳ ವ್ಯಕ್ತಪಡಿಸಿದರು. ನ್ಯಾಯಾಲಯಗಳ ಸಿಬ್ಬಂದಿ ಅಗತ್ಯ ನೆರವು ನೀಡುತ್ತಿಲ್ಲ ಎಂಬ ಅಸಮಾಧಾನವನ್ನೂ ಅವರು ಹೊರಹಾಕಿದರು. ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳಲ್ಲಿ ನ್ಯಾಯಾಂಗವು ಹೆಚ್ಚು ಸಂವೇದನಾಶೀಲತೆ ಹಾಗೂ ಕಾನೂನುಬದ್ಧ ದೃಷ್ಟಿಕೋನ ಹೊಂದಿರಬೇಕು ಎಂದು ಪೀಠ ಅಭಿಪ್ರಾಯಪಟ್ಟಿತು.

ಇದೇ ವೇಳೆ, ಲೈಂಗಿಕ ದೌರ್ಜನ್ಯ ಪ್ರಕರಣಗಳ ವಿಚಾರಣೆಯಲ್ಲಿ ನ್ಯಾಯಾಂಗದ ಸೂಕ್ಷ್ಮತೆ ಕಾಪಾಡುವ ಉದ್ದೇಶದಿಂದ ರಾಷ್ಟ್ರೀಯ ನ್ಯಾಯಾಂಗ ಅಕಾಡೆಮಿಯ ತಜ್ಞರ ಸಮಿತಿ ಸಿದ್ಧಪಡಿಸಿರುವ ಮಾರ್ಗಸೂಚಿಗಳನ್ನು ಸುಪ್ರೀಂ ಕೋರ್ಟ್ ಅನುಮೋದಿಸಿದೆ. ದೇಶದ ಎಲ್ಲ ನ್ಯಾಯಾಲಯಗಳು ಈ ಕೈಪಿಡಿಯಲ್ಲಿ ಸೂಚಿಸಿರುವ ಪದಬಳಕೆ ಹಾಗೂ ಅಭಿವ್ಯಕ್ತಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ನಿರ್ದೇಶನ ನೀಡಿದೆ. ಎಫ್‌ಐಆರ್ ದಾಖಲಿಸುವಾಗ ಹಾಗೂ ಆರೋಪಪಟ್ಟಿ ಸಲ್ಲಿಸುವ ವೇಳೆ ಪೊಲೀಸರು ಕೂಡ ಇದೇ ಮಾರ್ಗಸೂಚಿಗಳನ್ನು ಅನುಸರಿಸುವಂತೆ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಲು ನ್ಯಾಯಾಲಯ ಆದೇಶಿಸಿದೆ.

ಪ್ರಕರಣದ ಹಿನ್ನೆಲೆಯಂತೆ, ಬಿಹಾರದ ಅಮರಪುರದ ಫೋಟೋ ಸ್ಟುಡಿಯೋವೊಂದರಲ್ಲಿ 2008ರಲ್ಲಿ ನಡೆದ ಘಟನೆಯಲ್ಲಿ ಆರೋಪಿಯು ಮಹಿಳೆಯನ್ನು ಸ್ಟುಡಿಯೋದೊಳಗೆ ಕೂಡಿ ಹಾಕಿ, ಬಾಗಿಲು ಮುಚ್ಚಿ, ಆಕೆಯ ಸಲ್ವಾರ್ ತೆಗೆಯಲು ಯತ್ನಿಸಿ ದೈಹಿಕ ಕಿರುಕುಳ ನೀಡಿದ್ದ ಎಂದು ಆರೋಪಿಸಲಾಗಿತ್ತು. ಈ ಪ್ರಕರಣದಲ್ಲಿ ಕೆಳ ನ್ಯಾಯಾಲಯ ಆರೋಪಿಗೆ ಅತ್ಯಾಚಾರ ಯತ್ನ ಹಾಗೂ ಕಾನೂನುಬಾಹಿರ ಬಂಧನದ ಆರೋಪಗಳಡಿ ಶಿಕ್ಷೆ ವಿಧಿಸಿತ್ತು.

ಆದರೆ, ಪಾಟ್ನಾ ಹೈಕೋರ್ಟ್ ಕೆಳ ನ್ಯಾಯಾಲಯದ ತೀರ್ಪನ್ನು ರದ್ದುಪಡಿಸಿ, ಅತ್ಯಾಚಾರ ಯತ್ನ ಸಾಬೀತುಪಡಿಸಲು ಅಗತ್ಯ ವೈದ್ಯಕೀಯ ಪುರಾವೆಗಳಿಲ್ಲ ಹಾಗೂ ತನಿಖಾಧಿಕಾರಿಯನ್ನು ವಿಚಾರಣೆಗೆ ಒಳಪಡಿಸಿಲ್ಲ ಎಂದು ಹೇಳಿತ್ತು. ಆರೋಪಿಯು ಮಹಿಳೆಯನ್ನು ಕೊಠಡಿಯೊಳಗೆ ಕೂಡಿ ಹಾಕಿ, ಆಕೆಯ ಸಲ್ವಾರ್ ತೆಗೆಯಲು ಯತ್ನಿಸಿ ಸ್ತನ ಹಿಡಿದಿದ್ದರೂ, ಅದನ್ನು ಅತ್ಯಾಚಾರ ಯತ್ನವೆಂದು ಪರಿಗಣಿಸಲು ಸಾಧ್ಯವಿಲ್ಲ. ಅದು ಮಹಿಳೆಯ ಘನತೆಗೆ ಧಕ್ಕೆ ಉಂಟುಮಾಡುವ ಕೃತ್ಯ ಮಾತ್ರ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿತ್ತು.

ಪಾಟ್ನಾ ಹೈಕೋರ್ಟ್‌ನ ಈ ವಿಶ್ಲೇಷಣೆಯ ಬಗ್ಗೆ ಸುಪ್ರೀಂ ಕೋರ್ಟ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಇಂತಹ ಪ್ರಕರಣಗಳ ವಿಚಾರಣೆಯಲ್ಲಿ ನ್ಯಾಯಾಂಗವು ಮಹಿಳೆಯರ ಹಕ್ಕುಗಳು, ಘನತೆ ಮತ್ತು ಕಾನೂನುಬದ್ಧ ರಕ್ಷಣೆಗೆ ಆದ್ಯತೆ ನೀಡುವ ಸಂವೇದನಾಶೀಲ ನಿಲುವು ಅನುಸರಿಸಬೇಕೆಂದು ಸ್ಪಷ್ಟಪಡಿಸಿದೆ.

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಾಡುಹಂದಿಗಳ ದಾಳಿಗೆ ಕಬ್ಬು ಬೆಳೆ ನಾಶಗದ್ದಲದ ನಡುವೆಯೇ ಮುಕ್ತಾಯ ಕಂಡ ಸಂಸತ್ ಅಧಿವೇಶನ: ಚರ್ಚೆಯಿಲ್ಲದೆ 11 ಮಸೂದೆಗಳ ಅಂಗೀಕಾರ300 ಅಡಿ ಕುಸಿದ ವಿಮಾನ, ಪೈಲಟ್ ಗಾಂಜಾ ಸೇವನೆ ಪತ್ತೆ!ಮಾನವ ಹಕ್ಕುಗಳ ಪಾಠ ನಿಲ್ಲಿಸಿ; ಫ್ರಾನ್ಸ್ ವಿರುದ್ಧ ಇರಾನ್ ಕಿಡಿ25 ಬಿಜೆಪಿ ನಾಯಕರು, ಹಿಂದುತ್ವ ಕಾರ್ಯಕರ್ತರ ವಿರುದ್ಧದ ಪ್ರಕರಣ ಹಿಂಪಡೆಯಲು ನ್ಯಾಯಾಲಯದ ಅನುಮತಿ!ದೇಶಕ್ಕೇ ಮಾದರಿಯಾಗುವಂತೆ ಗಣೇಶೋತ್ಸವ ಆಚರಿಸೋಣಪರಪ್ಪನ ಅಗ್ರಹಾರದಲ್ಲಿ ಪ್ರಜ್ವಲ್‌ ರೇವಣ್ಣ ಬಳಿ ಮೊಬೈಲ್‌, ಪೆನ್‌ಡ್ರೈವನಲ್ಲಿ ಅಶ್ಲೀಲ ವಿಡಿಯೋ ಪತ್ತೆ ; ವಿಐಪಿ ಸೆಲ್‌ನಿಂದ ಸಾಮಾನ್ಯ ಬ್ಯಾರಕ್‌ಗೆ ಸ್ಥಳಾಂತರಲಡಾಖ್‌ನ ಲೇಹ್‌ನಲ್ಲಿ 5.5 ತೀವ್ರತೆಯ ಭೂಕಂಪದೇಶಭಕ್ತಿಯ ಸರ್ಟಿಫಿಕೇಟ್ ನೀಡುವ ಮುನ್ನ ಆರ್‌ಎಸ್‌ಎಸ್‌ ತ್ರಿವರ್ಣ ಧ್ವಜದ ಇತಿಹಾಸ ಹೇಳಲಿ: ಪ್ರಿಯಾಂಕ್ ಖರ್ಗೆಖರ್ಗೆ ರ‍್ಯಾಲಿ ನಡೆದ ಸ್ಥಳದಲ್ಲಿ ‘ಶುದ್ಧೀಕರಣ’ ಹವನ; ಬಿಜೆಪಿ–ಕಾಂಗ್ರೆಸ್ ನಡುವೆ ವಾಕ್ಸಮರ