LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureEditorialBeautyRecipes

ಜೀವ ಉಳಿಸಿದ ಮಾನವೀಯತೆ : ದಿಲ್ಲಿ ಅಗ್ನಿ ದುರಂತದಲ್ಲಿ ಮುಸ್ಲಿಂ ಯುವಕರ ಸಾಹಸಕ್ಕೆ ವ್ಯಾಪಕ ಮೆಚ್ಚುಗೆ

ಹೊಸದಿಲ್ಲಿ, ಜೂ. 4 : ದಕ್ಷಿಣ ದಿಲ್ಲಿಯ ಮಾಲ್ವಿಯಾ ನಗರದಲ್ಲಿರುವ ಹೋಟೆಲ್‌ನಲ್ಲಿ ಬುಧವಾರ ಸಂಭವಿಸಿದ ಭೀಕರ ಅಗ್ನಿ ದುರಂತ 21 ಮಂದಿಯ ಜೀವ ಕಸಿದುಕೊಂಡಿದ್ದರೂ, ಬೆಂಕಿಯ ಜ್ವಾಲೆಗಳ ನಡುವೆ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ರಕ್ಷಣಾ ಕಾರ್ಯದಲ್ಲಿ ತೊಡಗಿದ ಸ್ಥಳೀಯ ಯುವಕರ ಸಾಹಸ ಮಾನವೀಯತೆಯ ಹೊಸ ಅಧ್ಯಾಯ ಬರೆದಿದೆ. ಬೆಂಕಿ ಮತ್ತು ಹೊಗೆಯಿಂದ ಆವೃತವಾಗಿದ್ದ ಕಟ್ಟಡದೊಳಗೆ ಪದೇಪದೆ ಪ್ರವೇಶಿಸಿ ಸಿಲುಕಿದ್ದವರನ್ನು ರಕ್ಷಿಸಿದ ಐವರು ಮುಸ್ಲಿಂ ಯುವಕರ ಧೈರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಅಫ್ಜಲ್, ಮುಹಮ್ಮದ್ ಶಾರುಖ್, ಮುಹಮ್ಮದ್ ಅನೀಶ್, ಮುಹಮ್ಮದ್ ಆಮಿರ್ ಹಾಗೂ ಮುಹಮ್ಮದ್ ವಸೀಮ್ ಎಂಬ ಯುವಕರು ದಿಲ್ಲಿ ಪೊಲೀಸರೊಂದಿಗೆ ಕೈಜೋಡಿಸಿ ರಕ್ಷಣಾ ಕಾರ್ಯದಲ್ಲಿ ಭಾಗವಹಿಸಿದ್ದರು. ಬೆಂಕಿಯ ತೀವ್ರತೆ ಹೆಚ್ಚಾಗುತ್ತಿದ್ದರೂ ಅವರು ಹಿಂದೆ ಸರಿಯದೆ ಹಲವು ಬಾರಿ ಕಟ್ಟಡದೊಳಗೆ ಪ್ರವೇಶಿಸಿ ಸಿಲುಕಿದ್ದವರನ್ನು ಸುರಕ್ಷಿತ ಸ್ಥಳಗಳಿಗೆ ಕರೆದೊಯ್ದರು. ಅವರ ಸಮಯಪ್ರಜ್ಞೆ ಮತ್ತು ಸಾಹಸದಿಂದ ಹಲವರ ಜೀವ ಉಳಿದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಮಾಲ್ವಿಯಾ ನಗರದ ಬಿಜೆಪಿ ಶಾಸಕ ಸತೀಶ ಉಪಾಧ್ಯಾಯ ಈ ಯುವಕರ ಕಾರ್ಯವನ್ನು ಶ್ಲಾಘಿಸಿದ್ದು, ಅವರ ಭಾವಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಧೈರ್ಯಶಾಲಿ ಯುವಕರಿಗೆ ತಮ್ಮ ವಂದನೆಗಳು ಎಂದು ಅವರು ಬರೆದುಕೊಂಡಿದ್ದಾರೆ. ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಸಾವಿರಾರು ಮಂದಿ ಯುವಕರ ಸಾಹಸವನ್ನು ಕೊಂಡಾಡಿದ್ದಾರೆ.

ಅಗ್ನಿ ಅವಘಡ ಸಂಭವಿಸಿದ ಕೆಲವೇ ನಿಮಿಷಗಳಲ್ಲಿ ಸ್ಥಳೀಯ ನಿವಾಸಿಗಳು, ಅಂಗಡಿ ಮಾಲೀಕರು, ಕಾರ್ಮಿಕರು ಹಾಗೂ ಸುತ್ತಮುತ್ತಲಿನ ವಸತಿ ಗೃಹಗಳ ಅತಿಥಿಗಳು ಸ್ಥಳಕ್ಕೆ ಧಾವಿಸಿದ್ದರು. ಅಗ್ನಿಶಾಮಕ ದಳ ಆಗಮಿಸುವ ಮುನ್ನವೇ ರಕ್ಷಣಾ ಕಾರ್ಯ ಆರಂಭಗೊಂಡಿದ್ದು, ತುರ್ತು ಪರಿಸ್ಥಿತಿಯಲ್ಲಿ ಸ್ಥಳೀಯರ ಸಹಕಾರದಿಂದ ಅನೇಕ ಜೀವಗಳನ್ನು ಉಳಿಸಲು ಸಾಧ್ಯವಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಕ್ಷಣಾ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸಿದವರಲ್ಲಿ 61 ವರ್ಷದ ರಿಯಾಝುದ್ದೀನ್ ಕೂಡ ಒಬ್ಬರು. ಹೋಟೆಲ್ ಎದುರು ಹಾಸಿಗೆ ಅಂಗಡಿ ನಡೆಸುತ್ತಿರುವ ಅವರು, ಕಟ್ಟಡದಿಂದ ಜನರು ಜಿಗಿಯುತ್ತಿರುವುದನ್ನು ಕಂಡ ತಕ್ಷಣ ತಮ್ಮ ಅಂಗಡಿಯಲ್ಲಿದ್ದ ಹಾಸಿಗೆಗಳನ್ನು ರಸ್ತೆಯಲ್ಲಿ ಹಾಸಿದರು. ಮೇಲಿನ ಮಹಡಿಗಳಿಂದ ಜಿಗಿದವರು ಗಂಭೀರ ಗಾಯಗಳಿಂದ ಪಾರಾಗಲು ಇದು ನೆರವಾಯಿತು.

ಈ ಕಾರ್ಯಾಚರಣೆಯಲ್ಲಿ ಅವರಿಗೆ ಸುಮಾರು 2 ಲಕ್ಷ ರೂಪಾಯಿ ಮೌಲ್ಯದ ಹಾನಿಯಾಗಿದ್ದರೂ, ಹಲವರ ಜೀವ ಉಳಿಸಲು ಸಾಧ್ಯವಾಯಿತು ಎಂಬ ತೃಪ್ತಿ ಇದೆ ಎಂದು ಅವರು ಹೇಳಿದ್ದಾರೆ. ಕನಿಷ್ಠ 10 ಮಂದಿಯ ಜೀವ ಉಳಿದಿರುವುದು ತಮ್ಮ ಜೀವನದ ದೊಡ್ಡ ಸಂತೋಷ ಎಂದು ತಿಳಿಸಿದ್ದಾರೆ.

ಘಟನೆಯ ವೇಳೆ ಚಿತ್ರೀಕರಿಸಲಾದ ವೀಡಿಯೊಗಳಲ್ಲಿ ಕಟ್ಟಡದ ಮೇಲಿನ ಮಹಡಿಗಳಲ್ಲಿ ಸಿಲುಕಿದ್ದವರು ಹೊಗೆ ಮತ್ತು ಬೆಂಕಿಯಿಂದ ತಪ್ಪಿಸಿಕೊಳ್ಳಲು ಕಿಟಕಿಗಳ ಮೂಲಕ ಹೊರಗೆ ಬಾಗಿ ಸಹಾಯಕ್ಕಾಗಿ ಕೂಗುತ್ತಿರುವ ದೃಶ್ಯಗಳು ಕಂಡುಬಂದಿವೆ. ಕೆಲವರು ಜೀವ ಉಳಿಸಿಕೊಳ್ಳುವ ಸಲುವಾಗಿ ಮೇಲ್ಮಹಡಿಯಿಂದ ಕೆಳಗೆ ಜಿಗಿಯುವಂತೆಯೂ ಆಗಿತ್ತು.

ಸ್ಥಳೀಯರ ಪ್ರಕಾರ, ಹೋಟೆಲ್‌ನಲ್ಲಿ ತಂಗಿದ್ದ ಅತಿಥಿಗಳಲ್ಲಿ ಹಲವರು ಈ ಪ್ರದೇಶಕ್ಕೆ ಹೊಸಬರಾಗಿದ್ದು, ತುರ್ತು ನಿರ್ಗಮನ ಮಾರ್ಗಗಳ ಬಗ್ಗೆ ಮಾಹಿತಿ ಇರಲಿಲ್ಲ. ಇದರಿಂದಾಗಿ ಬೆಂಕಿ ಕಾಣಿಸಿಕೊಂಡ ಬಳಿಕ ಗೊಂದಲ ಮತ್ತಷ್ಟು ಹೆಚ್ಚಾಯಿತು.

ಸಾಕೇತ್‌ನ ಮ್ಯಾಕ್ಸ್ ಆಸ್ಪತ್ರೆ ಸಮೀಪ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿರುವ ವಾಸಿಮ್ ರಝಾ ಕೂಡ ರಕ್ಷಣಾ ಕಾರ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಅವರು ಹಲವು ಬಾರಿ ಹೊಗೆಯಿಂದ ತುಂಬಿದ್ದ ಕಟ್ಟಡದೊಳಗೆ ಪ್ರವೇಶಿಸಿ ಬದುಕುಳಿದವರನ್ನು ಹೊರಗೆ ಕರೆತಂದರು.

ನೆಲಮಾಳಿಗೆಯಿಂದ ಮೂರನೇ ಮಹಡಿಯವರೆಗೆ ಹಲವು ಮಂದಿಗೆ ತುರ್ತು ಚಿಕಿತ್ಸೆ ನೀಡಿ ಜೀವ ಉಳಿಸಲು ಪ್ರಯತ್ನಿಸಿದ್ದೇನೆ. ಕನಿಷ್ಠ 10 ಮಂದಿಗೆ ಸಿಪಿಆರ್ ನೀಡಿದ್ದೇನೆ ಎಂದು ವಾಸಿಮ್ ರಝಾ ತಿಳಿಸಿದ್ದಾರೆ.

ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆ ಆರಂಭಿಸಿದ ಬಳಿಕವೂ ಸ್ಥಳೀಯ ಸ್ವಯಂಸೇವಕರು ಅವರೊಂದಿಗೆ ಸೇರಿ ಕಟ್ಟಡದೊಳಗೆ ಶೋಧ ಕಾರ್ಯ ನಡೆಸಿದರು. ಒಳಗಿನ ಪರಿಸ್ಥಿತಿ ಅತ್ಯಂತ ಭೀಕರವಾಗಿತ್ತು ಎಂದು ರಕ್ಷಣಾ ಕಾರ್ಯದಲ್ಲಿ ಭಾಗವಹಿಸಿದ್ದವರು ವಿವರಿಸಿದ್ದಾರೆ.

ಬೆಂಕಿ ಭಾಗಶಃ ನಿಯಂತ್ರಣಕ್ಕೆ ಬಂದ ಬಳಿಕ ಕಟ್ಟಡದೊಳಗೆ ಪ್ರವೇಶಿಸಿದ ಮುಹಮ್ಮದ್ ಇಸ್ರಾರ್ ಖಾನ್, ಒಳಗೆ ಎಲ್ಲೆಡೆ ಹೊಗೆ, ಮಸಿ ಮತ್ತು ಗೊಂದಲದ ವಾತಾವರಣವಿತ್ತು. ಕೆಲವರು ಸಹಾಯಕ್ಕಾಗಿ ಅಳುತ್ತಿದ್ದರು, ಕೂಗುತ್ತಿದ್ದರು. ಅನೇಕರು ಗಂಭೀರವಾಗಿ ಗಾಯಗೊಂಡಿದ್ದರು. ಹಲವಾರು ಮೃತದೇಹಗಳನ್ನು ಹೊರಗೆ ಸಾಗಿಸಲು ಸಹ ನಾವು ನೆರವಾದೆವು ಎಂದು ತಿಳಿಸಿದ್ದಾರೆ.

ಅಗ್ನಿಶಾಮಕ ತುರ್ತು ಸೇವೆಯ ಮಾಜಿ ತರಬೇತುದಾರ ಮುಹಮ್ಮದ್ ಶೋಯೆಬ್ ಮಾತನಾಡಿ, ರಕ್ಷಣಾ ತಂಡಗಳು ಸ್ಥಳಕ್ಕೆ ತಲುಪುವ ಮೊದಲೇ ಹಲವರು ಕಟ್ಟಡದಿಂದ ಜಿಗಿದಿದ್ದರು. ಕನಿಷ್ಠ ಒಂಭತ್ತು ಮಂದಿ ಹೀಗೆ ಕೆಳಗೆ ಜಿಗಿದಿರುವುದನ್ನು ನೋಡಿದ್ದೇನೆ ಎಂದು ಹೇಳಿದ್ದಾರೆ.

ಅಧಿಕಾರಿಗಳ ಮಾಹಿತಿ ಪ್ರಕಾರ, ಘಟನೆಯಲ್ಲಿ 47 ಮಂದಿಯನ್ನು ರಕ್ಷಿಸಿ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಆದರೆ 21 ಮಂದಿ ಮೃತಪಟ್ಟಿದ್ದಾರೆ. ಮೃತರಲ್ಲಿ ಆಫ್ರಿಕಾದ ವಿವಿಧ ದೇಶಗಳ 9 ನಾಗರಿಕರು ಹಾಗೂ ತುರ್ಕಮೆನಿಸ್ತಾನದ 2 ನಾಗರಿಕರು ಸೇರಿದ್ದಾರೆ. ಗಾಯಗೊಂಡವರ ಪೈಕಿ ಐವರು ವಿದೇಶಿ ಪ್ರಜೆಗಳಾಗಿದ್ದಾರೆ.

ಪ್ರಾಥಮಿಕ ತನಿಖೆಯಲ್ಲಿ ಹೋಟೆಲ್ ನಿರ್ವಹಣೆಯ ಗಂಭೀರ ನಿರ್ಲಕ್ಷ್ಯ ಬೆಳಕಿಗೆ ಬಂದಿದೆ. ಅಗ್ನಿಶಾಮಕ ಇಲಾಖೆಯ ಕಡ್ಡಾಯ ಅನುಮತಿ ಪಡೆಯದೆ ಹೋಟೆಲ್ ನಡೆಸಲಾಗುತ್ತಿತ್ತು ಎನ್ನಲಾಗಿದೆ. ಕಟ್ಟಡದಲ್ಲಿ ಅಗತ್ಯ ಸುರಕ್ಷತಾ ವ್ಯವಸ್ಥೆಗಳು ಇರಲಿಲ್ಲ ಎಂಬ ಆರೋಪವೂ ಕೇಳಿಬಂದಿದೆ.

ಪೊಲೀಸರು ಹೋಟೆಲ್ ಮಾಲೀಕ ಲವ್ಕೇಶ್ ಬಜಾಜ್ ಅವರನ್ನು ಬಂಧಿಸಿದ್ದು, ಭಾರತೀಯ ನ್ಯಾಯ ಸಂಹಿತೆಯ ವಿವಿಧ ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ದಿಲ್ಲಿ ಮಹಾನಗರ ಪಾಲಿಕೆಯ ಪ್ರಕಾರ, ಕಟ್ಟಡಕ್ಕೆ ಕೇವಲ 6 ಕೊಠಡಿಗಳಿಗೆ ಮಾತ್ರ ಅನುಮೋದನೆ ದೊರೆತಿದ್ದರೂ, 20ಕ್ಕೂ ಹೆಚ್ಚು ಕೊಠಡಿಗಳನ್ನು ನಡೆಸಲಾಗುತ್ತಿತ್ತು. ಅಲ್ಲದೆ ಕಟ್ಟಡದಲ್ಲಿ ಒಂದೇ ಒಂದು ಪ್ರವೇಶ ಹಾಗೂ ನಿರ್ಗಮನ ದ್ವಾರವಿದ್ದು, ದುರಂತದ ವೇಳೆ ಜನರ ಸ್ಥಳಾಂತರ ಕಾರ್ಯಕ್ಕೆ ಇದು ದೊಡ್ಡ ಅಡ್ಡಿಯಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ದುರಂತದ ನಡುವೆಯೂ ಧರ್ಮ, ಜಾತಿ, ಭಾಷೆಯ ಎಲ್ಲ ಭೇದಗಳನ್ನು ಮೀರಿ ಮಾನವೀಯತೆಯ ಕೈ ಚಾಚಿದ ಸ್ಥಳೀಯ ಯುವಕರು, ವ್ಯಾಪಾರಿಗಳು ಮತ್ತು ಸ್ವಯಂಸೇವಕರ ಕಾರ್ಯ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ. ತಮ್ಮ ಜೀವದ ಹಂಗು ತೊರೆದು ಇತರರ ಪ್ರಾಣ ಉಳಿಸಲು ಧಾವಿಸಿದ ಅವರ ಸಾಹಸವನ್ನು ಸಾಮಾಜಿಕ ಜಾಲತಾಣಗಳಲ್ಲಿ ಸಾವಿರಾರು ಮಂದಿ ಕೊಂಡಾಡುತ್ತಿದ್ದಾರೆ.

Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಲಾರಿ ಡಿಕ್ಕಿಗೆ ಬೈಕ್ ಸವಾರನ ಸಾವು : ಅವೈಜ್ಞಾನಿಕ ವಿನ್ಯಾಸ ವಿರೋಧಿಸಿ ಪ್ರತಿಭಟನೆಮಹಿಳಾ ಸಂಘದ ಹೆಸರಲ್ಲಿ ₹43.40 ಲಕ್ಷ ವಂಚನೆ: ಇಬ್ಬರು ಮಹಿಳೆಯರ ಬಂಧನಕಡಲೆಕಾಯಿ ಗಂಟಲಲ್ಲಿ ಸಿಲುಕಿ 3 ವರ್ಷದ ಬಾಲಕನ ಸಾವುಡಿಟರ್ಜೆಂಟ್ ಸೇರಿಸಿ ಕೃತಕ ರಾಸಾಯನಿಕಯುಕ್ತ ಹಾಲು ತಯಾರಿಸುವ ರಾಕ್ಷಸರ ಜಾಲ ಪತ್ತೆ!10ನೇ ತರಗತಿಗೆ ಮೂರನೇ ಭಾಷೆ ಕಡ್ಡಾಯ; 2027–28ರಿಂದ ಸಿಬಿಎಸ್‌ಇ ಹೊಸ ನಿಯಮಬಿಜೆಪಿ ಸ್ವಾರ್ಥಕ್ಕೆ ಬಡವರ ಮಕ್ಕಳು ಬಲಿ: ಖರ್ಗೆಗೋಕಾಕ ಜಲಪಾತ ಸೇರಿ ರಾಜ್ಯದ 13 ಕಡೆ ರೋಪ್‌ ವೇ ಯೋಜನೆಗೆ ವೇಗರೋಟರಾಕ್ಟ್ ಕ್ಲಬ್ ಆಫ್ ಬೆಲಗಾಮ್ ಸೌಥಗೆ ನೂತನ ಪದಾಧಿಕಾರಿಗಳ ಪದಗ್ರಹಣ; ಅಧ್ಯಕ್ಷೆಯಾಗಿ ಮೋನಿಕಾ ಶಿಂಧೆ ಅಧಿಕಾರ ಸ್ವೀಕಾರಎಸ್‌ ಜಾನಕಿ ನಿಧನಕ್ಕೆ ಗಣ್ಯರ ಕಂಬನಿಮೌನವಾದ ಗಾನಕೋಗಿಲೆ ಎಸ್.‌ ಜಾನಕಿ; ಅನಾಥಗೊಂಡ ಸಂಗೀತ ಲೋಕ