ಲಂಡನ್, ಸೆ 10 : (ಸಮದರ್ಶಿ ಸುದ್ದಿ) - ಕಿಂಗ್‌ಫಿಶರ್ ಏರ್‌ಲೈನ್ಸ್‌ನ ಸುಮಾರು ₹9 ಸಾವಿರ ಕೋಟಿ ಸಾಲ ಪ್ರಕರಣದಲ್ಲಿ ಭಾರತಕ್ಕೆ ಬೇಕಾಗಿರುವ ಉದ್ಯಮಿ ವಿಜಯ್ ಮಲ್ಯ, ಭಾರತ ಸರ್ಕಾರ ತಮ್ಮ ವಿರುದ್ಧ ಅನ್ಯಾಯವಾಗಿ ನಡೆದುಕೊಂಡಿದ್ದು, ತಮ್ಮನ್ನು ‘ಪ್ರಚಾರದ ಸಾಧನ’ವಾಗಿ ಬಳಸಿಕೊಂಡಿದೆ ಎಂದು ಆರೋಪಿಸಿದ್ದಾರೆ.
ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಸರಣಿ ಪೋಸ್ಟ್‌ಗಳನ್ನು ಮಾಡಿರುವ ಮಲ್ಯ, ತಾವು ಉದ್ದೇಶಪೂರ್ವಕವಾಗಿ ಭಾರತದಿಂದ ದೂರ ಉಳಿದಿಲ್ಲ. 1992ರಿಂದ ಬ್ರಿಟನ್‌ನ ಖಾಯಂ ನಿವಾಸಿಯಾಗಿದ್ದು, ಅಲ್ಲಿನ ಕಾನೂನು ಪ್ರಕ್ರಿಯೆಗಳ ಕಾರಣದಿಂದ ದೇಶ ತೊರೆಯಲು ನಿರ್ಬಂಧವಿದೆ. ಹೀಗಿರುವಾಗ ತಮ್ಮನ್ನು ‘ಪಲಾಯನವಾದಿ’ ಎಂದು ಕರೆಯುವುದು ಸರಿಯಲ್ಲ ಎಂದು ಹೇಳಿದ್ದಾರೆ.
ಜಾರಿ ನಿರ್ದೇಶನಾಲಯ ಬಾಂಬೆ ಹೈಕೋರ್ಟಿಗೆ ಸಲ್ಲಿಸಿರುವ ಅಫಿಡವಿಟ್ ಉಲ್ಲೇಖಿಸಿರುವ ಅವರು, ತಮ್ಮ ಆಸ್ತಿಗಳಿಂದ ₹14,131.60 ಕೋಟಿ ವಸೂಲಿ ಮಾಡಿ ಬ್ಯಾಂಕುಗಳಿಗೆ ಹಸ್ತಾಂತರಿಸಿರುವುದನ್ನು ಇಡಿಯೇ ದಾಖಲಿಸಿದೆ ಎಂದು ಪ್ರತಿಪಾದಿಸಿದ್ದಾರೆ.
“2021ರಲ್ಲಿಯೇ ₹14 ಸಾವಿರ ಕೋಟಿಗೂ ಹೆಚ್ಚು ಹಣ ಬ್ಯಾಂಕುಗಳಿಗೆ ಹಸ್ತಾಂತರಿಸಲಾಗಿದೆ. ಆದರೂ ಐದು ವರ್ಷಗಳ ಬಳಿಕವೂ ನನ್ನನ್ನು ಬ್ಯಾಂಕುಗಳಿಗೆ ವಂಚನೆ ಮಾಡಿದ ವ್ಯಕ್ತಿ ಎಂದು ಬಿಂಬಿಸಲಾಗುತ್ತಿದೆ” ಎಂದು ಮಲ್ಯ ಆಕ್ಷೇಪಿಸಿದ್ದಾರೆ.
ಸಾಲದ ಮೊತ್ತಕ್ಕಿಂತ ಹೆಚ್ಚಿನ ಹಣ ವಸೂಲಿಯಾಗಿದ್ದರೆ, ಹೆಚ್ಚುವರಿ ಹಣವನ್ನು ತಮಗೆ ಯಾವಾಗ ಹಿಂದಿರುಗಿಸಲಾಗುತ್ತದೆ ಎಂಬ ಪ್ರಶ್ನೆಯನ್ನು ಮಾಧ್ಯಮಗಳು ಏಕೆ ಕೇಳುತ್ತಿಲ್ಲ ಎಂದೂ ಅವರು ಪ್ರಶ್ನಿಸಿದ್ದಾರೆ.
ತಾವು ನಿರಂತರವಾಗಿ ಅನ್ಯಾಯ ಎದುರಿಸುತ್ತಿರುವುದನ್ನು ವ್ಯಂಗ್ಯವಾಗಿ ಪ್ರಸ್ತಾಪಿಸಿರುವ ಮಲ್ಯ, “ಇಷ್ಟೆಲ್ಲ ಅನ್ಯಾಯಗಳನ್ನು ಎದುರಿಸುವ ಬದಲು ಜಿರಲೆಯಾಗಿ ಬದುಕುವುದೇ ಉತ್ತಮವಾಗಿರಬಹುದೇನೋ” ಎಂದು ಹೇಳಿದ್ದಾರೆ.