ಮೈಸೂರು, ಮೇ.12 : ವಿಶೇಷ ತೀವ್ರ ಪರಿಷ್ಕರಣೆ (ಎಸ್.ಐ.ಆರ್) ಹೆಸರಿನಲ್ಲಿ ರಾಜ್ಯದ 86 ಲಕ್ಷ ಮತದಾರರನ್ನು ಮತದಾರರ ಪಟ್ಟಿಯಿಂದ ಹೊರಗಿಡಲು ಬಿಜೆಪಿ ಸಂಚು ರೂಪಿಸಿದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಗಂಭೀರ ಆರೋಪ ಮಾಡಿದರು.
ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಚುನಾವಣೆಯಲ್ಲಿ ಮತಗಳನ್ನು ಕದಿಯುವ ಮೂಲಕ ಹಗಲು ದರೋಡೆ ನಡೆಸಲು ಮುಂದಾಗಿದೆ ಎಂದು ವಾಗ್ದಾಳಿ ನಡೆಸಿದರು.
ಕೇಂದ್ರ ಚುನಾವಣಾ ಆಯೋಗದ ಮೂಲಕ ದೇಶಾದ್ಯಂತ ಎಸ್.ಐ.ಆರ್ ಅಡಿಯಲ್ಲಿ ಮತದಾರರ ಪಟ್ಟಿಯ ಮ್ಯಾಪಿಂಗ್ ನಡೆಯುತ್ತಿದ್ದು, ಈಗಾಗಲೇ ಹರಿಯಾಣ, ಬಿಹಾರ, ಮಹಾರಾಷ್ಟ್ರ ಹಾಗೂ ಪಶ್ಚಿಮ ಬಂಗಾಳದಲ್ಲಿ ಲಕ್ಷಾಂತರ ಮತದಾರರನ್ನು ಕೈಬಿಟ್ಟು ಬಿಜೆಪಿ ಚುನಾವಣೆ ಗೆದ್ದಿದೆ ಎಂದು ಆರೋಪಿಸಿದರು. ಇದೀಗ ಕರ್ನಾಟಕದಲ್ಲೂ ಅದೇ ಮಾದರಿಯ ಚುನಾವಣಾ ಮ್ಯಾಪಿಂಗ್ ಕಾರ್ಯ ನಡೆಯುತ್ತಿದೆ ಎಂದು ಹೇಳಿದರು.
ರಾಜ್ಯದಲ್ಲಿ 2025-26ರ ವೇಳೆಗೆ ಸುಮಾರು 5.5 ಕೋಟಿ ಮತದಾರರಿದ್ದು, ಇದರಲ್ಲಿ ಶೇ.85ರಷ್ಟು ಮ್ಯಾಪಿಂಗ್ ಪೂರ್ಣಗೊಂಡಿದೆ. ಉಳಿದ ಶೇ.15ರಷ್ಟು ಅಂದರೆ ಸುಮಾರು 86 ಲಕ್ಷ ಮತದಾರರ ಮ್ಯಾಪಿಂಗ್ ಮಾಡದೇ ಅವರನ್ನು ಪಟ್ಟಿಯಿಂದ ಹೊರಗಿಡಲು ಯತ್ನ ನಡೆಯುತ್ತಿದೆ ಎಂದು ದೂರಿದರು.
ಮೈಸೂರು ಜಿಲ್ಲೆಯಲ್ಲಿ 11 ವಿಧಾನಸಭಾ ಕ್ಷೇತ್ರಗಳಿದ್ದು, ಒಟ್ಟು 27,99,744 ಮತದಾರರಿದ್ದಾರೆ. ಇದರಲ್ಲಿ 3,48,544 ಮಂದಿಯನ್ನು ಕೈಬಿಡಲು ಸಿದ್ಧತೆ ನಡೆದಿದೆ ಎಂದು ಆರೋಪಿಸಿದ ಅವರು, ಚಾಮುಂಡೇಶ್ವರಿ ಕ್ಷೇತ್ರದಲ್ಲಿ 71,521 ಹಾಗೂ ನರಸಿಂಹರಾಜ ಕ್ಷೇತ್ರದಲ್ಲಿ 59,749 ಮತದಾರರನ್ನು ಪಟ್ಟಿಯಿಂದ ಕೈಬಿಡುವ ಯತ್ನ ನಡೆದಿದೆ ಎಂದರು.
ನರಸಿಂಹರಾಜ ಕ್ಷೇತ್ರದಲ್ಲಿ ಕೈಬಿಡಲು ಉದ್ದೇಶಿಸಿರುವವರಲ್ಲಿ ಸುಮಾರು 40 ಸಾವಿರ ಮುಸ್ಲಿಂ ಮತದಾರರಿದ್ದಾರೆ. ಹೀಗೆ ಮಾಡಿದರೆ ಅಲ್ಪಸಂಖ್ಯಾತ ನಾಯಕರು ಚುನಾವಣೆಯಲ್ಲಿ ಹೇಗೆ ಗೆಲ್ಲಲು ಸಾಧ್ಯ ಎಂದು ಪ್ರಶ್ನಿಸಿದರು.
1985ರ ನಂತರ ಜನಿಸಿದವರ ಮ್ಯಾಪಿಂಗ್ ಪ್ರಕ್ರಿಯೆಯಲ್ಲಿ ಸಾಕಷ್ಟು ಗೊಂದಲಗಳಿವೆ. 2002ರ ಮತದಾರರ ಪಟ್ಟಿಯಲ್ಲಿದ್ದ ಹೆಸರು ಮತ್ತು 2025ರ ಪಟ್ಟಿಯಲ್ಲಿರುವ ಹೆಸರು ಒಂದೇ ರೀತಿಯಲ್ಲಿ ಹೊಂದಿಕೆಯಾಗಬೇಕು. ಸ್ವಲ್ಪ ವ್ಯತ್ಯಾಸ ಇದ್ದರೂ ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಲಾಗುತ್ತದೆ ಎಂದು ಹೇಳಿದರು.
ಮತದಾರರ ಗುರುತಿನ ಪರಿಶೀಲನೆಗಾಗಿ ತಂದೆ ಹಾಗೂ ತಾತನ ಮತದಾರರ ಗುರುತಿನ ಚೀಟಿಗಳನ್ನು ತರಬೇಕೆಂದು ಹೇಳಲಾಗುತ್ತಿದೆ. ಇದು ಸಾಮಾನ್ಯ ಜನರಿಗೆ ಸಾಧ್ಯವೇ ಎಂದು ಪ್ರಶ್ನಿಸಿದ ಅವರು, ತಂದೆಯ ಮ್ಯಾಪಿಂಗ್ ಆಗದಿದ್ದರೆ ಮಕ್ಕಳಿಗೂ ಮ್ಯಾಪಿಂಗ್ ಅನ್ವಯಿಸುವುದಿಲ್ಲ ಎಂಬ ನಿಯಮದ ಮೂಲಕ ಬಿಜೆಪಿ 2028ರ ಚುನಾವಣೆಯಲ್ಲಿ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಯತ್ನಿಸುತ್ತಿದೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ಪ್ರಧಾನ ಕಾರ್ಯದರ್ಶಿ ಎಂ.ಶಿವಣ್ಣ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪ್ರೇಮಾ ಶಂಕರ್, ಮುಖಂಡರಾದ ಬಿ.ಎಂ.ರಾಮು, ಅಬ್ರಹಾರ್, ಗಿರೀಶ್ ಹಾಗೂ ಮಾಧ್ಯಮ ವಕ್ತಾರ ಕೆ.ಮಹೇಶ್ ಉಪಸ್ಥಿತರಿದ್ದರು.