ಲಕ್ನೋ: ಉತ್ತರ ಪ್ರದೇಶದ ಫಿರೋಜಾಬಾದ್‌ನಲ್ಲಿ ಒಂದೂವರೆ ವರ್ಷದ ಮಗುವನ್ನು ಅತ್ಯಂತ ಕ್ರೂರವಾಗಿ ಹತ್ಯೆಗೈದ ಪ್ರಕರಣದ ಆರೋಪಿ ಜಿತೇಂದ್ರ ಅಲಿಯಾಸ್ ವಿರಾಜ್ (25)ಗೆ ಜಿಲ್ಲಾ ನ್ಯಾಯಾಲಯ ಮರಣದಂಡನೆ ವಿಧಿಸಿದೆ. ಘಟನೆ ನಡೆದ ಕೇವಲ 40 ದಿನಗಳಲ್ಲೇ ವಿಚಾರಣೆ ಪೂರ್ಣಗೊಳಿಸಿ ತೀರ್ಪು ಪ್ರಕಟಿಸಿರುವುದು ಗಮನಾರ್ಹವಾಗಿದೆ.
ಪ್ರಕರಣದ ವಿವರಗಳ ಪ್ರಕಾರ, ಕಿರಾಣಿ ಅಂಗಡಿ ನಡೆಸುತ್ತಿದ್ದ ಜಿತೇಂದ್ರನಿಗೆ 24 ವರ್ಷದ ಶಿಕ್ಷಕಿ ರತಿದೇವಿ ಅವರ ಮೇಲೆ ಪ್ರೀತಿ ಇತ್ತು. ಕೌಟುಂಬಿಕ ಭಿನ್ನಾಭಿಪ್ರಾಯಗಳಿಂದ ಪತಿಯಿಂದ ದೂರವಿದ್ದು ತಂದೆಯ ಮನೆಯಲ್ಲಿ ವಾಸಿಸುತ್ತಿದ್ದ ರತಿದೇವಿ, ತಮಗೆ ಈಗಾಗಲೇ ಮದುವೆಯಾಗಿದ್ದು, ಒಂದೂವರೆ ವರ್ಷದ ಗಂಡು ಮಗು (ಆರವ್) ಇದೆ ಎಂದು ತಿಳಿಸಿ ಜಿತೇಂದ್ರನ ಮದುವೆ ಪ್ರಸ್ತಾಪವನ್ನು ಹಲವು ಬಾರಿ ತಿರಸ್ಕರಿಸಿದ್ದರು.
ಈ ನಿರಾಕರಣೆಯಿಂದ ಆಕ್ರೋಶಗೊಂಡ ಜಿತೇಂದ್ರ, ಮಗುವೇ ತನ್ನ ಮದುವೆಗೆ ಅಡ್ಡಿಯಾಗಿದೆ ಎಂದು ಭಾವಿಸಿ ಕೊಲೆ ಸಂಚು ರೂಪಿಸಿದ್ದನೆಂದು ತನಿಖೆಯಲ್ಲಿ ಬಹಿರಂಗವಾಗಿದೆ.
ಕಳೆದ ಮೇ 31ರಂದು ಚಾಕೊಲೇಟ್ ಕೊಡಿಸುವ ನೆಪದಲ್ಲಿ ಆರವ್‌ನನ್ನು ಕರೆದುಕೊಂಡು ಹೋದ ಆರೋಪಿ, ಬಳಿಕ ಮಗುವನ್ನು ನೆಲಕ್ಕೆ ಬಡಿದು ಹತ್ಯೆಗೈದು ಪರಾರಿಯಾಗಿದ್ದ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದರು. ಬಂಧನದ ವೇಳೆ ಆತ ತಪ್ಪಿಸಿಕೊಳ್ಳಲು ಯತ್ನಿಸಿದ ಕಾರಣ ಪೊಲೀಸರ ಗುಂಡೇಟಿಗೆ ಆತನ ಕಾಲಿಗೆ ಗಾಯವಾಗಿತ್ತು.
ಪ್ರಕರಣದ ವಿಚಾರಣೆಯನ್ನು ತ್ವರಿತವಾಗಿ ನಡೆಸಿದ ಫಿರೋಜಾಬಾದ್ ಜಿಲ್ಲಾ ನ್ಯಾಯಾಲಯ, ಮಗುವಿನ ಮೇಲಿನ ಕ್ರೌರ್ಯ, ಅಪರಾಧದ ಗಂಭೀರತೆ ಹಾಗೂ ಸಾಕ್ಷ್ಯಾಧಾರಗಳನ್ನು ಪರಿಗಣಿಸಿ ಜಿತೇಂದ್ರ ಅಲಿಯಾಸ್ ವಿರಾಜ್‌ಗೆ ಮರಣದಂಡನೆ ವಿಧಿಸಿದೆ. ಘಟನೆ ನಡೆದ 40 ದಿನಗಳಲ್ಲೇ ತೀರ್ಪು ಪ್ರಕಟಿಸಿರುವುದು ಉತ್ತರ ಪ್ರದೇಶದ ಇತ್ತೀಚಿನ ತ್ವರಿತ ನ್ಯಾಯಾಂಗ ಪ್ರಕ್ರಿಯೆಗಳಲ್ಲೊಂದು ಎಂದು ಪರಿಗಣಿಸಲಾಗಿದೆ.