LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureEditorialBeautyRecipes

ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂದು ನಿರ್ಣಯ ಕೈಗೊಳ್ಳಲು ಜೂನ್ 2ರವರೆಗೆ ಗಡುವು

ಬೆಳಗಾವಿ, ಮೇ 26 : ಬೆಳಗಾವಿ ಮಹಾನಗರಪಾಲಿಕೆ ಸಭೆಯಲ್ಲಿ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬ ನಿರ್ಣಯವನ್ನು ಜೂನ್ 2ರೊಳಗೆ ಅಂಗೀಕರಿಸಬೇಕು. ಇಲ್ಲವಾದರೆ ಜೂನ್ 4ರಂದು ರಾಜ್ಯದ ಎಲ್ಲ ಕನ್ನಡಪರ ಸಂಘಟನೆಗಳ ಸಭೆ ನಡೆಸಿ ಒಂದು ದಿನ ಕರ್ನಾಟಕ ಬಂದ್ ಕುರಿತು ತೀರ್ಮಾನ ಕೈಗೊಳ್ಳಲಾಗುವುದು ಎಂದು ಕನ್ನಡ ಸಂಘಟನೆಗಳ ಒಕ್ಕೂಟ ಎಚ್ಚರಿಕೆ ನೀಡಿದೆ.

ನಗರದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಕನ್ನಡಪರ ಹೋರಾಟಗಾರ ವಾಟಾಳ ನಾಗರಾಜ ಮಾತನಾಡಿ, ಬೆಳಗಾವಿ ಮಹಾನಗರಪಾಲಿಕೆ ಸಭೆಯಲ್ಲಿ ರಾಜ್ಯ ಪರ ನಿರ್ಣಯ ಅಂಗೀಕರಿಸುವಂತೆ ಒತ್ತಾಯಿಸಿದರು.

ಈ ಹಿಂದೆ ಮಹಾರಾಷ್ಟ್ರ ಏಕೀಕರಣ ಸಮಿತಿ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲಿಕೆಗೆ ಆಯ್ಕೆಯಾಗುತ್ತಿದ್ದ ವೇಳೆ ಬೆಳಗಾವಿ, ನಿಪ್ಪಾಣಿ, ಖಾನಾಪುರ, ಕಾರವಾರ, ಬೀದರ ಹಾಗೂ ಭಾಲ್ಕಿ ಪ್ರದೇಶಗಳು ಮಹಾರಾಷ್ಟ್ರಕ್ಕೆ ಸೇರಬೇಕು ಎಂಬ ನಿರ್ಣಯಗಳನ್ನು ಕೈಗೊಂಡು ರಾಜ್ಯ ಸರ್ಕಾರಕ್ಕೆ ಕಳುಹಿಸಲಾಗುತ್ತಿತ್ತು. ಇದೇ ನಿರ್ಣಯಗಳನ್ನು ಆಧಾರವನ್ನಾಗಿ ಮಾಡಿಕೊಂಡು ಮಹಾರಾಷ್ಟ್ರ ಸರ್ಕಾರ 2004ರಲ್ಲಿ ಗಡಿ ವಿವಾದ ಪ್ರಕರಣದಲ್ಲಿ ತನ್ನ ವಾದ ಮಂಡಿಸಿತ್ತು ಎಂದು ಅವರು ಆರೋಪಿಸಿದರು.

ಪ್ರಸ್ತುತ ಮಹಾರಾಷ್ಟ್ರ ಏಕೀಕರಣ ಸಮಿತಿಯ ಸದಸ್ಯರ ಸಂಖ್ಯೆ ಕೇವಲ 3ಕ್ಕೆ ಇಳಿದಿದೆ. ಆದರೆ, 58 ಸದಸ್ಯರ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ 35 ಸದಸ್ಯರನ್ನು ಹೊಂದಿದ್ದರೂ, ಬಹುತೇಕ ಸದಸ್ಯರು ಮರಾಠಿ ಪರ ನಿಲುವು ಹೊಂದಿರುವುದರಿಂದ ಕರ್ನಾಟಕ ಪರ ನಿರ್ಣಯ ಕೈಗೊಳ್ಳಲು ಹಿಂಜರಿಕೆ ತೋರಲಾಗುತ್ತಿದೆ ಎಂದು ವಾಟಾಳ ನಾಗರಾಜ ಆರೋಪಿಸಿದರು.

ಕಳೆದ ಪಾಲಿಕೆ ಚುನಾವಣೆ ಭಾಷಾ ಆಧಾರದ ಬದಲಾಗಿ ಪಕ್ಷ ಆಧಾರಿತವಾಗಿ ನಡೆದಿದ್ದರಿಂದ ಪರಿಸ್ಥಿತಿ ಬದಲಾಗಿದೆ. ಆದರೂ ಈಗಿನ ಪಾಲಿಕೆ ಸದಸ್ಯರು ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬುದನ್ನು ಸ್ಪಷ್ಟಪಡಿಸುವ ನಿರ್ಣಯ ಅಂಗೀಕರಿಸಬೇಕಾಗಿದೆ ಎಂದು ಅವರು ಆಗ್ರಹಿಸಿದರು.

ಸುದ್ದಿಗೋಷ್ಠಿ ಬಳಿಕ ವಾಟಾಳ ನಾಗರಾಜ ನೇತೃತ್ವದಲ್ಲಿ ಕನ್ನಡಪರ ಕಾರ್ಯಕರ್ತರು ಬೆಳಗಾವಿ ಮಹಾನಗರ ಪಾಲಿಕೆಗೆ ಮುತ್ತಿಗೆ ಹಾಕಲು ಮುಂದಾದರು. ಈ ವೇಳೆ ಪೊಲೀಸರು ವಾಟಾಳ ನಾಗರಾಜ ಸೇರಿದಂತೆ ಹಲವು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದರು.

ನಂತರ ಮಾತನಾಡಿದ ವಾಟಾಳ ನಾಗರಾಜ, ಬೆಳಗಾವಿ ಕರ್ನಾಟಕದ ಗಂಡು ಮೆಟ್ಟಿದ ನಾಡು. ಜೂನ್ 2ರೊಳಗೆ ಯಾವುದೇ ಪಕ್ಷದವರಾಗಿರಲಿ, ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಹಾಗೂ ಗಡಿವಿವಾದದಲ್ಲಿ ಮಹಾಜನ ವರದಿ ಅಂತಿಮ ಎಂಬ ನಿರ್ಣಯವನ್ನು ಪಾಲಿಕೆ ಸಭೆಯಲ್ಲಿ ಅಂಗೀಕರಿಸಬೇಕು ಎಂದು ಒತ್ತಾಯಿಸಿದರು.

ಇಲ್ಲವಾದರೆ ಬೆಳಗಾವಿಯಲ್ಲಿ ಕಂಡು ಕೇಳದ ರೀತಿಯ ಹೋರಾಟ ಆರಂಭವಾಗಲಿದೆ. ಜೂನ್ 4ರಂದು ರಾಜ್ಯಮಟ್ಟದ ಕನ್ನಡಪರ ಸಂಘಟನೆಗಳ ಸಭೆ ಕರೆದು ಅಂತಿಮ ಚರ್ಚೆ ನಡೆಸಿ ಅಖಂಡ ಕರ್ನಾಟಕ ಬಂದ್‌ಗೆ ಕರೆ ನೀಡಲಾಗುವುದು ಎಂದು ಎಚ್ಚರಿಕೆ ನೀಡಿದರು.

Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST