ePaper
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

2026ರ ಕರ್ನಾಟಕ ಬಜೆಟ್‌ : 4.48 ಲಕ್ಷ ಕೋಟಿ ರೂ. ಗಾತ್ರದ ಬಜೆಟ್ ಮಂಡಿಸಿದ ಸಿದ್ದರಾಮಯ್ಯ ; ಯಾರಿಗೆ ಎಷ್ಟು ಅನುದಾನ? ಇಲ್ಲಿದೆ ವಿವರ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಕರ್ನಾಟಕದ 2026-27ನೇ ಸಾಲಿನ ಬಜೆಟ್ ಮಂಡಿಸಿದ್ದು, ಈ ಬಾರಿಯ ಬಜೆಟ್‌ನ ಒಟ್ಟು ಗಾತ್ರ 4,48,004 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.ಕಳೆದ ವರ್ಷಕ್ಕೆ ಹೋಲಿಸಿದರೆ ಬಜೆಟ್ ಗಾತ್ರದಲ್ಲಿ ಏರಿಕೆಯಾಗಿದೆ. ಕಳೆದ ವರ್ಷ 2025-26ನೇ ಸಾಲಿನ ಬಜೆಟ್‌ನಲ್ಲಿ ಪರಿಷ್ಕೃತ ಅಂದಾಜು 3,95,307 ಕೋಟಿ ರೂ.ಗಳಷ್ಟಿತ್ತು.
ಬಜೆಟ್‌ ಹಂಚಿಕೆಯಲ್ಲಿ ಎಂದಿನಂತೆ ಶಿಕ್ಷಣ ಕ್ಷೇತ್ರಕ್ಕೆ ಒತ್ತು ನೀಡಲಾಗಿದ್ದು, ಗ್ಯಾರಂಟಿ ಯೋಜನೆಗಳ ಹಿನ್ನೆಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹ ದೊಡ್ಡ ಪಾಲು ಪಡೆದುಕೊಂಡಿದೆ.

ಯಾವ ವಲಯಕ್ಕೆ ಎಷ್ಟು ಅನುದಾನ?
ಪಶುಸಂಗೋಪನೆ ಹಾಗೂ ಮೀನುಗಾರಿಕೆ – 4084 ಕೋಟಿ
ಕೃಷಿ ಮತ್ತು ತೋಟಗಾರಿಕೆ – 8373 ಕೋಟಿ
ಆಹಾರ, ನಾಗರೀಕ ಸರಬರಾಜು – 7942 ಕೋಟಿ
ಲೊಕೋಪಯೋಗಿ – 11424 ಕೋಟಿ
ಸಮಾಜ ಕಲ್ಯಾಣ ಇಲಾಖೆ- 18612 ಕೋಟಿ
ಕಂದಾಯ ಇಲಾಖೆ- 19845 ಕೋಟಿ
ಆರೋಗ್ಯ ಕುಟುಂಬ ಕಲ್ಯಾಣ – 17818 ಕೋಟಿ
ಶಿಕ್ಷಣ ಇಲಾಖೆ- 47224 ಕೋಟಿ
ಮಹಿಳಾ ಮಕ್ಕಳ ಕಲ್ಯಾಣ – 34929 ಕೋಟಿ
ಇಂಧನ ಇಲಾಖೆ- 29947 ಕೋಟಿ
ಗ್ರಾಮೀಣಾಭಿವೃದ್ಧಿ ಇಲಾಖೆ- 26559 ಕೋಟಿ
ನೀರಾವರಿ- 22436 ಕೋಟಿ
ನಗರಾಭಿವೃದ್ಧಿ,ವಸತಿ ಇಲಾಖೆ- 22203 ಕೋಟಿ
ಒಳಾಡಳಿತ ಬಂದರು- 23100 ಕೋಟಿ
ಇತರೆ ವೆಚ್ಚ- 172757 ಕೋಟಿ
ಇತರೆ ವಲಯಗಳು: 1,72,757 ಕೋಟಿ ರೂ. (37%)
ಒಟ್ಟು ಬಂಡವಾಳ ಜಮೆ: 1,32,190 ಕೋಟಿ ರೂ.
ಇದರಲ್ಲಿ ಬಹಿರಂಗ ಮಾರುಕಟ್ಟೆ ಸಾಲದ (Open market loans) ಮೂಲಕವೇ ಅತಿ ಹೆಚ್ಚು ಅಂದರೆ 1,22,340 ಕೋಟಿ ರೂ. ಸಂಗ್ರಹಿಸಲು ಅಂದಾಜಿಸಲಾಗಿದೆ. ಕೇಂದ್ರ ಸರ್ಕಾರದಿಂದ 6,810 ಕೋಟಿ ರೂ. ಸಾಲ ನಿರೀಕ್ಷಿಸಲಾಗಿದೆ.
ಒಟ್ಟು ವೆಚ್ಚ: 1,09,998 ಕೋಟಿ ರೂ.
ಇದರಲ್ಲಿ ಮೂಲಸೌಕರ್ಯ ಮತ್ತು ಇತರ ಬಂಡವಾಳ ವೆಚ್ಚಕ್ಕಾಗಿ (Capital Expenditure) 71,924 ಕೋಟಿ ರೂ. ಮೀಸಲಿಡಲಾಗಿದೆ. ಮಾರುಕಟ್ಟೆ ಸಾಲಗಳ ಮರುಪಾವತಿಗಾಗಿ 29,007 ಕೋಟಿ ರೂ. ಹಾಗೂ ಕೇಂದ್ರ ಸರ್ಕಾರದ ಸಾಲದ ಮರುಪಾವತಿಗೆ 2,700 ಕೋಟಿ ರೂ.ಗಳನ್ನು ನಿಗದಿಪಡಿಸಲಾಗಿದೆ.

56,432 ಹುದ್ದೆ ಭರ್ತಿ ಮಾಡುವ ಬಗ್ಗೆ ಮುಖ್ಯಮಂತ್ರಿ ಘೋಷಣೆ ಮಾಡಿದ್ದಾರೆ. ರಾಜ್ಯದ ಪ್ರಮುಖ ಇಲಾಖೆಗಳಲ್ಲಿ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡುವುದರ ಮೂಲಕ ಆಡಳಿತ ವ್ಯವಸ್ಥೆಯನ್ನು ಬಲಪಡಿಸುತ್ತಿದ್ದೇವೆ. ನಮ್ಮ ಚುನಾವಣಾ ಪ್ರಣಾಳಿಕೆಯಂತೆ ಉದ್ಯೋಗ ಸೃಷ್ಟಿಗೆ ನಾವು ಆದ್ಯತೆ ನೀಡಿದ್ದೇವೆ. ಈ ವರ್ಷ 56,432 ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಿದ್ದೇವೆ. ಉದ್ಯೋಗ ನೇಮಕಾತಿಗಳಲ್ಲಿ ನ್ಯಾಯಾಲಯದ ಪ್ರಕರಣಗಳಿಂದ ಉಂಟಾಗಿದ್ದ ವಿಳಂಬವನ್ನು ಪರಿಗಣಿಸಿ ವಯೋಮಿತಿಯಲ್ಲಿ ಒಂದು ಬಾರಿಗೆ ಐದು ವರ್ಷಗಳ ಸಡಿಲಿಕೆ ನೀಡಿದ್ದೇವೆ ಎಂದು ತಿಳಿಸಿದ್ದಾರೆ.

ಅರಣ್ಯ ಇಲಾಖೆಯಲ್ಲಿ 2000 ಹುದ್ದೆಗಳ ನೇಮಕಾತಿ
ಅರಣ್ಯ ಇಲಾಖೆಯಲ್ಲಿ 2000 ಹುದ್ದೆಗಳ ನೇಮಕಾತಿ ಮಾಡುವುದು ಎಂದು ಬಜೆಟ್​ನಲ್ಲಿ ಘೋಷಣೆ ಮಾಡಲಾಗಿದೆ. ಮೈಸೂರು ಮೃಗಾಲಯ ಹಾಗೂ ಬನ್ನೇರುಘಟ್ಟ ಮೃಗಾಲಯದಲ್ಲಿ ಪ್ರವಾಸಿಗರನ್ನು ಆಕರ್ಷಿಸಲು ಪಿಪಿಪಿ ಮಾದರಿಯಲ್ಲಿ ಪ್ರಕೃತಿ ನಿರೂಪಣ ಕೇಂದ್ರ ಸ್ಥಾಪನೆ, ಬೆಂಗಳೂರಿನ ಮಾದಪ್ಪನಹಳ್ಳಿಯ 153 ಎಕರೆ ಪ್ರದೇಶದಲ್ಲಿ ಸಾಂಸ್ಕೃತಿಕ ನಾಯಕ ಬಸವಣ್ಣ ಜೈವಿಕ ಉದ್ಯಾನ ನಿರ್ಮಾಣ ಮಾಡುವ ಬಗ್ಗೆ ಪ್ರಸ್ತಾಪಿಸಲಾಗಿದೆ.
ಅಬಕಾರಿ ಸುಂಕ ದರ ನಿಗದಿ ಸ್ಲ್ಯಾಬ್ ಇಳಿಕೆ…ಆದರೆ….
ಅಬಕಾರಿ ಸುಂಕ ದರ ನಿಗದಿ ಸ್ಲ್ಯಾಬ್ ಇಳಿಕೆ ಮಾಡಲಾಗಿದೆ. ಇದರಿಂದ ಮದ್ಯಪ್ರಿಯರಿಗೆ ಕೊಂಚ ಆರಾಮ ಸಿಗುವ ಸಾಧ್ಯತೆ ಇದೆ. 16 ಸ್ಲಾಬ್ ಬದಲು 8ಸ್ಲ್ಯಾಬ್ ಮೂಲಕ ತೆರಿಗೆ ಸಂಗ್ರಹ ಮಾಡಲು ಸರ್ಕಾರ ನಿರ್ಧರಿಸಿದೆ. ಆದರೆ ಮದ್ಯದ ಅಂಶವಿರುವ ಪಾನಿಯಗಳಿಗೂ ಅಬಕಾರಿ ಸುಂಕ ವಿಸ್ತರಣೆ ಮಾಡುವುದನ್ನು ಪ್ರಸ್ತಾಪ ಮಾಡಲಾಗಿದೆ. ಪ್ರತಿ ಲೀಟರ್‌ನಲ್ಲಿ ಮದ್ಯದ ಅಂಶದ ಆಧಾರದ ಮೇಲೆ ಅಬಕಾರಿ ಸುಂಕ ನಿರ್ಧಾರ ಮಾಡಲಾಗುತ್ತದೆ ಎಂದು ಸರ್ಕಾರ ಹೇಳಿದೆ.

ಪ್ರತ್ಯೇಕ ನಿಗಮಗಳ ಸ್ಥಾಪನೆ
ಕುಂಬಾರ, ತಿಗಳ, ಗಾಣಿಗ, ಕೊಡವ, ಉಪ್ಪಾರ, ಈಡಿಗ, ಕಾಡುಗೊಲ್ಲ ಸಮುದಾಯಗಳ ಅಭಿವೃದ್ಧಿಗೆ ಪ್ರತ್ಯೇಕ ನಿಗಮಗಳ ಸ್ಥಾಪನೆ ಮಾಡಲು ಈ ಬಾರಿ ಬಜೆಟ್​​ನಲ್ಲಿ ಪ್ರಸ್ತಾಪಿಸಲಾಗಿದೆ. ಸವಿತಾ ಸಮಾಜದವರು ಸೆಲೂನ್‌ಗಳನ್ನ ತೆರೆಯಲು ಶೇ 4 ರ ಬಡ್ಡಿದರದಲ್ಲಿ ಹತ್ತು ಲಕ್ಷ ರೂ ವರೆಗೆ ಸಾಲ ಮತ್ತು ಸಹಾಯಧನ ನೀಡುವುದಾಗಿ ಬಜೆಟ್‌ನಲ್ಲಿ ಹೇಳಿದ್ದಾರೆ.

ಮಡಿವಾಳ ಸಮುದಾಯದ ನಿರುದ್ಯೋಗಿಗಳಿಗೆ ಆಧುನಿಕ ಲಾಂಡ್ರಿ ಸ್ಥಾಪನೆಗೆ ಶೇ 4. ರ ಬಡ್ಡಿ ದರದಲ್ಲಿ ಐದು ಲಕ್ಷರೂವರೆಗೆ ಸಾಲ ಸೌಲಭ್ಯ.
ಕಾರವಾರದಲ್ಲಿ 450 ಬೆಡ್ ಮಲ್ಟಿ ಸ್ಪೆಷಲ್ ಹಾಸ್ಪಿಟಲ್ ಗೆ ಅನುಮೋದನೆ
ಕಾರವಾರದಲ್ಲಿ 198 ಕೋಟಿ ವೆಚ್ಚದಲ್ಲಿ 450 ಬೆಡ್ ಮಲ್ಟಿ ಸ್ಪೆಷಲ್ ಹಾಸ್ಪಿಟಲ್ ಗೆ ಅನುಮೋದನೆ ನೀಡಲಾಗಿದೆ. ಆರೋಗ್ಯದ ಸೌಕರ್ಯ ಒದಗಿಸುವ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ರೈತ ಮಾಲ್​ ಸ್ಥಾಪನೆಗೆ ನಿರ್ಧಾರ
ರಾಜ್ಯದ ರೈತರಿಗೆ ಅನುಕೂಲವಾಗುವ ದೃಷ್ಟಿಯಿಂದ ರೈತ ಮಾಲ್ ಸ್ಥಾಪನೆಗೆ ಸರ್ಕಾರ ನಿರ್ಧಾರ ಮಾಡಿದೆ. ಒಂದೇ ಸೂರಿ ನಡಿ ಎಲ್ಲಾ ಕೃಷಿ ಉತ್ಪನ್ನ ಲಭ್ಯವಾಗುವ ದೃಷ್ಟಿಯಿಂದ ಎಂಎಸ್‌ಐಎಲ್‌ (MSIL) ಮೂಲಕ ಕೃಷಿ ಮಾಲ್ ಸ್ಥಾಪನೆ ಮಾಡಲು ಬಜೆಟ್​​ನಲ್ಲಿ ಘೋಷಣೆ ಮಾಡಲಾಗಿದೆ.

ಬೆಂಗಳೂರು ನಗರಾಭಿವೃದ್ಧಿಗೆ ಒತ್ತು
1,700 ಕೋಟಿ ರೂ.ಗಳ ಮೊತ್ತದಲ್ಲಿ ಬೆಂಗಳೂರಿನ 158 ಕಿ.ಮೀ. ಉದ್ದರ ರಸ್ತೆಯ ವೈಟ್ ಟಾಪಿಂಗ್ ಕಾಮಗಾರಿ,1,936 ಕೋಟಿ ರೂ.ಗಳ ಮೊತ್ತದ ಮುಖ್ಯ ಮತ್ತು ಉಪಮುಖ್ಯ (Arterial and Sub Arterial) ರಸ್ತೆಗಳ ಅಭಿವೃದ್ಧಿ, ಸಿಲ್ಕ್ ಬೋರ್ಡ್ ಜಂಕ್ಷನ್‌ನಿಂದ ಕೆ.ಆರ್.ಪುರಂ ಮೆಟ್ರೋ ನಿಲ್ದಾಣದವರೆಗೂ ಹೊರ ವರ್ತುಲ ರಸ್ತೆಯನ್ನು ಅಭಿವೃದ್ಧಿಪಡಿಸುವ 450 ಕೋಟಿ ರೂ.ಗಳ ಯೋಜನೆ, ಅಂದಾಜು 273 ಕೋಟಿ ರೂ.ಗಳಲ್ಲಿ ರಾಜಕಾಲುವೆಗಳ ಮೇಲ್ದರ್ಜೆಗೇರಿಸುವುದು ಮತ್ತು ಕೆರೆ ಅಭಿವೃದ್ಧಿ ಮಾಡಲು ಸರ್ಕಾರ ನಿರ್ಧಾರ ಮಾಡಿದೆ.

ಬೆಂಗಳೂರಿನ ನಾಗರಿಕರಿಗೆ ಪಾರದರ್ಶಕ ಆಡಳಿತ ನೀಡಲು ‘ಗ್ರೇಟರ್ ಬೆಂಗಳೂರು ಪ್ರಾಧಿಕಾರ’ ಹಾಗೂ ಐದು (5) ಮಹಾನಗರ ಪಾಲಿಕೆಗಳನ್ನು ಸ್ಥಾಪಿಸಲಾಗುತ್ತಿದೆ. ಈ ಐದೂ ಪಾಲಿಕೆಗಳು ‘ಮುನಿಸಿಪಲ್ ಬಾಂಡ್’ ಹೊರಡಿಸುವ ಮೂಲಕ ಅಭಿವೃದ್ಧಿಗೆ ಸಂಪನ್ಮೂಲ ಕ್ರೋಢೀಕರಿಸಲಿವೆ. ಅಲ್ಲದೆ, ಬೆಂಗಳೂರು ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ನೀಡುತ್ತಿದ್ದ 7,000 ಕೋಟಿ ರೂ. ಅನುದಾನವನ್ನು ಪ್ರಸಕ್ತ ಸಾಲಿನಲ್ಲೂ ಮುಂದುವರಿಸಲಾಗಿದೆ.

15,000 ಶಿಕ್ಷಕರ ನೇಮಕ, ಪಿಯುಸಿ ಮಕ್ಕಳಿಗೂ ಉಚಿತ ಪಠ್ಯಪುಸ್ತಕ, 800 ಪಬ್ಲಿಕ್ ಶಾಲೆ ಸ್ಥಾಪನೆ!
ಶಾಲಾ-ಕಾಲೇಜುಗಳಲ್ಲಿ ಖಾಲಿ ಇರುವ 15,000 ಬೋಧಕ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಮುಂದಿನ 3 ವರ್ಷಗಳಲ್ಲಿ 3,900 ಕೋಟಿ ರೂ. ವೆಚ್ಚದಲ್ಲಿ 800 ಪಬ್ಲಿಕ್ ಶಾಲೆಗಳ ನಿರ್ಮಾಣದ ಪ್ರಸ್ತಾಪ. ಅಂಗನವಾಡಿ ಮಕ್ಕಳಿಗೆ ಚಟುವಟಿಕೆ ಪುಸ್ತಕ, 1-10ನೇ ತರಗತಿ ಮಕ್ಕಳಿಗೆ ಪಠ್ಯಪುಸ್ತಕ ಮತ್ತು ಮೌಲ್ಯ ಶಿಕ್ಷಣ ಪುಸ್ತಕ, ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಉಚಿತವಾಗಿ ಪಠ್ಯಪುಸ್ತಕಗಳನ್ನು ನೀಡಲಾಗುವುದು ಎಂದು ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.

ಉನ್ನತ ಶಿಕ್ಷಣ…
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಪಾಲಿಟೆಕ್ನಿಕ್ಗಳ ಬಲವರ್ಧನೆ, ಉತ್ಕೃಷ್ಟತಾ ಕೇಂದ್ರಗಳ ಸ್ಥಾಪನೆ ಹಾಗೂ ಸಂಶೋಧನಾ ಸಾಮರ್ಥ್ಯ ಹೆಚ್ಚಿಸಲು ಎಡಿಬಿ (ADB) ನೆರವಿನೊಂದಿಗೆ 2,500 ಕೋಟಿ ರೂ. ವೆಚ್ಚದಲ್ಲಿ ʻಕರ್ನಾಟಕ ಉನ್ನತ ಶಿಕ್ಷಣ ಪರಿವರ್ತನೆ ಯೋಜನೆʼ ಅನುಷ್ಠಾನ ಮಾಡಲಾಗುತ್ತದೆ. ಇದರ ಅಡಿ 40 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು ಮತ್ತು 11 ಪಾಲಿಟೆಕ್ನಿಕ್ಸ್ ಮಾದರಿ ಸಂಸ್ಥೆಗಳನ್ನಾಗಿ ಅಭಿವೃದ್ಧಿಗೊಳಿಸಲಾಗುತ್ತದೆ. ವಿದ್ಯಾರ್ಥಿಗಳಲ್ಲಿ ಉದ್ಯಮಶೀಲತೆ ಮತ್ತು ಸ್ಟಾರ್ಟ್-ಅಪ್ ಸಂಸ್ಕೃತಿಯನ್ನು ಪ್ರೋತ್ಸಾಹಿಸಲು 9 ಉತ್ಕೃಷ್ಟತಾ ಕೇಂದ್ರಗಳನ್ನು ಸ್ಥಾಪಿಸಲಾಗುತ್ತದೆ.
ಸರ್ಕಾರಿ ಪ್ರಥಮ ದರ್ಜೆ, ಇಂಜಿನಿಯರಿಂಗ್ ಕಾಲೇಜುಗಳು, ಪಾಲಿಟೆಕ್ನಿಕ್‌ಗಳು ಮತ್ತು ಯುವಿಸಿಇ ವಿಶ್ವವಿದ್ಯಾಲಯದಲ್ಲಿ ಒಟ್ಟಾರೆ 2,000 ಬೋಧಕ ಹುದ್ದೆಗಳನ್ನು ಭರ್ತಿ ಮಾಡಲು ಅನುಮತಿಸಲಾಗಿದೆ. ಸಾರ್ವಜನಿಕ ವಿಶ್ವವಿದ್ಯಾಲಯಗಳಲ್ಲಿ 1,000 ಬೋಧಕ ಹುದ್ದೆಗಳನ್ನು ತರ್ಕಬದ್ಧಗೊಳಿಸಿ ಹಂತ ಹಂತವಾಗಿ ಭರ್ತಿ ಮಾಡಲಾಗುತ್ತದೆ.
ಶೇ.50ಕ್ಕಿಂತ ಹೆಚ್ಚು ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿರುವ 25 ಸರ್ಕಾರಿ ಪದವಿ ಕಾಲೇಜು, ಮೂರು ಪಾಲಿಟೆಕ್ನಿಕ್ ಹಾಗೂ ಮೂರು ಇಂಜಿನಿಯರಿಂಗ್ ಕಾಲೇಜುಗಳಲ್ಲಿ ತಲಾ ಒಂದು ಕೋಟಿ ರೂ.ಗಳಂತೆ ಒಟ್ಟು 31 ಕೋಟಿ ರೂ.ಗಳ ವೆಚ್ಚದಲ್ಲಿ ವಿದ್ಯಾರ್ಥಿನಿಯರಿಗೆ ಅವಶ್ಯವಿರುವ ಮೂಲ ಸೌಲಭ್ಯಕ್ಕೆ ಒತ್ತು.

WhatsApp

Don't Miss Out! Join Our WhatsApp Group!

Get latest news updates delivered straight to your WhatsApp.